ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | ಮಯಂಕ್ ಬಳಗಕ್ಕೆ ಮೊದಲ ಇನಿಂಗ್ಸ್ ಹಿನ್ನಡೆ

Published 25 ಫೆಬ್ರುವರಿ 2024, 14:16 IST
Last Updated 25 ಫೆಬ್ರುವರಿ 2024, 14:16 IST
ಅಕ್ಷರ ಗಾತ್ರ

ನಾಗ್ಪುರ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ವಿದರ್ಭ ಎದುರು ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಹಾದಿ ಕಠಿಣವಾಗಿದೆ.

ಪಂದ್ಯದಲ್ಲಿ ಇನ್ನೆರಡು ದಿನಗಳು ಉಳಿದಿದ್ದು, ಆತಿಥೇಯ ಬಳಗದ ಎದುರು ಗೆದ್ದರಷ್ಟೇ ಕರ್ನಾಟಕಕ್ಕೆ ನಾಲ್ಕರ ಘಟ್ಟ ತಲುಪಲು ಸಾಧ್ಯವಿದೆ.

ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 460 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ತಂಡಕ್ಕೆ 90.3 ಓವರ್‌ಗಳಲ್ಲಿ 286 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 174 ರನ್‌ಗಳ ಹಿನ್ನಡೆ ಅನುಭವಿಸಿತು.

ಭಾನುವಾರ ದಿನದಾಟದ ಮುಕ್ತಾಯಕ್ಕೆ ವಿದರ್ಭ ತಂಡವು ಎರಡನೇ ಇನಿಂಗ್ಸ್‌ನಲ್ಲಿ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 50 ರನ್ ಗಳಿಸಿದೆ. ಇದರಿಂದಾಗಿ ತಂಡವು ಒಟ್ಟು 224 ರನ್‌ಗಳ ಮುನ್ನಡೆ ಸಾಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆತಿಥೇಯರು ಡ್ರಾ ಸಾಧಿಸಿದರೂ ಸಾಕು ಸೆಮಿಫೈನಲ್ ಸ್ಥಾನ ಖಚಿತವಾಗಲಿದೆ. ಆದರೆ ಕರ್ನಾಟಕ ಬೌಲರ್‌ಗಳು ವಿದರ್ಭದ ವಿಕೆಟ್‌ಗಳನ್ನು ಬೇಗನೆ ಉರುಳಿಸಬೇಕು. ಗುರಿಯನ್ನು ಬೆನ್ನಟ್ಟಿ ಗೆಲ್ಲಬೇಕು.

ಶನಿವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು  24 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 98  ರನ್ ಗಳಿಸಿತ್ತು. ಆರ್. ಸಮರ್ಥ್ (43) ಮತ್ತು  ನಿಕಿನ್ ಜೋಸ್ (20) ಕ್ರೀಸ್‌ನಲ್ಲಿದ್ದರು.

ಆದರೆ ಮೂರನೇ ದಿನದಾಟದಲ್ಲಿ ಸಮರ್ಥ್ ಮತ್ತು ನಿಕಿನ್ ತಂಡದ ಇನಿಂಗ್ಸ್‌ ಬೆಳೆಸಲು ಪ್ರಯತ್ನಿಸಿದರು. ಇಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು. ಊಟದ ವಿರಾಮಕ್ಕೂ ಮುನ್ನವೇ  ಹರ್ಷ ದುಬೆ ಅವರ ಬೌಲಿಂಗ್‌ನಲ್ಲಿ ಸಮರ್ಥ್ (59; 97ಎ, 4X7) ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. 

ನಿಕಿನ್ ಜೋಸ್ (82; 212ಎ, 4X11) ನೆಲಕಚ್ಚಿ ಆಡಿದರು. ಆದರೆ ಅವರೊಂದಿಗೆ ದೊಡ್ಡ ಜೊತೆಯಾಟವಾಡುವಲ್ಲಿ ಅನುಭವಿ ಮನೀಷ್ ಪಾಂಡೆ, ಯುವ ಆಟಗಾರರಾದ ಹಾರ್ದಿಕ್ ರಾಜ್, ಎಸ್‌. ಶರತ್ ಅವರು ಸಫಲರಾಗಲಿಲ್ಲ.

ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವೈಶಾಖ ವಿಜಯಕುಮಾರ್ ಮತ್ತು  ಪದಾರ್ಪಣೆ ಪಂದ್ಯವಾಡುತ್ತಿರುವ ಧೀರಜ್ ಗೌಡ ಕೂಡ ಹೆಚ್ಚು ರನ್ ಗಳಿಸಲಿಲ್ಲ. ಇದರಿಂದಾಗಿ ತಂಡವು 90.3 ಓವರ್‌ಗಳಲ್ಲಿ 286 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆದಿತ್ಯ ಸರವಟೆ (50ಕ್ಕೆ3) ಮತ್ತು ಯಶ್ ಠಾಕೂರ್ (48ಕ್ಕೆ3) ಕರ್ನಾಟಕ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್ ವಿದರ್ಭ: 143.1 ಓವರ್‌ಗಳಲ್ಲಿ 460. ಕರ್ನಾಟಕ: 90.3 ಓವರ್‌ಗಳಲ್ಲಿ 286 (ಆರ್. ಸಮರ್ಥ್ 59, ಹಾರ್ದಿಕ್ ರಾಜ್ 23, ಶರತ್ ಶ್ರೀನಿವಾಸ್ 29, ವೈಶಾಖ ವಿಜಯಕುಮಾರ್ 23, ಉಮೇಶ್ ಯಾದವ್ 54ಕ್ಕೆ2, ಆದಿತ್ಯ ಸರವಟೆ 50ಕ್ಕೆ3, ಯಶ್ ಠಾಕೂರ್ 48ಕ್ಕೆ3 ) ಎರಡನೇ ಇನಿಂಗ್ಸ್: ವಿದರ್ಭ: 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 50 (ಅಥರ್ವ್‌ ತೈಡೆ ಬ್ಯಾಟಿಂಗ್ 21, ಧ್ರುವ ಶೋರೆ ಬ್ಯಾಟಿಂಗ್ 29)

ಕರ್ನಾಟಕ ತಂಡದ ಬ್ಯಾಟರ್ ನಿಕಿನ್ ಜೋಸ್   –ಪ್ರಜಾವಾಣಿ ಸಂಗ್ರಹದಿಂದ
ಕರ್ನಾಟಕ ತಂಡದ ಬ್ಯಾಟರ್ ನಿಕಿನ್ ಜೋಸ್   –ಪ್ರಜಾವಾಣಿ ಸಂಗ್ರಹದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT