ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ –ಮೇಘಾಲಯ ಹಣಾಹಣಿ ಇಂದು

ಕೋಲ್ಕತ್ತ: ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಶನಿವಾರ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಬಿ ಗುಂಪಿನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಕಲ್ಕತ್ತಾ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕರ್ನಾಟಕವು ಮೇಘಾಲಯ ವಿರುದ್ಧ ಆಡಲಿದೆ.
ಅನುಭವಿ ಬ್ಯಾಟರ್ ಆರ್. ಸಮರ್ಥ್ ಹಾಗೂ ಮಧ್ಯಮವೇಗಿ ರೋನಿತ್ ಮೋರೆ ಅವರು ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಮಯಂಕ್ ಬಳಗದಲ್ಲಿ ಆತ್ಮವಿಶ್ವಾಸ ಮೂಡಿದೆ. ಹೊಸ ಪ್ರತಿಭೆ ನಿಕಿನ್ ಜೋಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಯೋಮಿತಿಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿರುವ ನಿಕಿನ್ ಅವಕಾಶಕ್ಕಾಗಿ ಕಾದಿದ್ದಾರೆ.
ರೋನಿತ್ ಜೊತೆಗೆ ವಿದ್ವತ್ ಕಾವೇರಪ್ಪ, ಕೌಶಿಕ್ ಅವರು ವೇಗದ ವಿಭಾಗದ ಪ್ರಮುಖರಾಗಿದ್ದಾರೆ. ಆಲ್‌ರೌಂಡರ್‌ಗಳಾಗಿರುವ ಕೆ. ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಅವರ ಮೇಲೆ ನಿರೀಕ್ಷೆಯ ಭಾರವಿದೆ.
ದೇವದತ್ತ ಪಡಿಕ್ಕಲ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಇದರಿಂದಾಗಿ ಮಯಂಕ್ ಹಾಗೂ ಸಮರ್ಥ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳಲು ಬಿ.ಆರ್. ಶರತ್ ಅವರಿಗೆ ಮತ್ತೊಂದು ಅವಕಾಶ ಲಭಿಸಿದೆ.
‘ಅನುಭವಿಗಳು ಹಾಗೂ ಯುವ ಆಟಗಾರರು ತಂಡದಲ್ಲಿದ್ದಾರೆ. ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ. ಎಲ್ಲರೂ ಪ್ರತಿಭಾನ್ವಿತರಾಗಿದ್ದಾರೆ. ಬೌಲಿಂಗ್‌ನಲ್ಲಿ ವಿದ್ವತ್ ಕಾವೇರಪ್ಪ, ಬ್ಯಾಟರ್ ನಿಕಿನ್ ಜೋಸ್ ಹೋಸ ಭರವಸೆಯಾಗಿದ್ದಾರೆ’ ಎಂದು ತಂಡದ ಕೋಚ್ ಪಿ.ವಿ. ಶಶಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ದಿಪ್ಪು ಸಂಗ್ಮಾ ನಾಯಕತ್ವದ ಮೇಘಾಲಯ ತಂಡವು ತನಗಿರುವ ಅಲ್ಪ ಅನುಭವ ಬಲದಿಂದಲೇ ಕರ್ನಾಟಕ ತಂಡಕ್ಕೆ ಸವಾಲೊಡ್ಡುವ ಛಲದಲ್ಲಿದೆ.
ಕರ್ನಾಟಕವು ಈ ಹಿಂದೆ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದೆ. 2019–20ರಲ್ಲಿ ಗೆದ್ದ ನಂತರ ಮತ್ತೆ ಟ್ರೋಫಿ ಜಯಿಸಿಲ್ಲ.
ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ನಾಕೌಟ್ ಹಂತದಲ್ಲಿ ಕರ್ನಾಟಕ ತಂಡವು ನಿರ್ಗಮಿಸಿತ್ತು.
ಪಂದ್ಯ ಆರಂಭ: ಬೆಳಿಗ್ಗೆ 8.30
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.