ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್: ನೀತುಗೆ ಯುವಪ್ರತಿಭೆಗಳ ಹುಡುಕಾಟದ ಸವಾಲು

Last Updated 28 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಅದು, 2004ರ ಡಿಸೆಂಬರ್‌ ತಿಂಗಳು. ಚಳಿಯಿಂದ ಮುದುಡಿದ್ದ ಮೈಸೂರಿನ ಇನ್ಫೊಸಿಸ್ ಕ್ರಿಕೆಟ್ ಮೈದಾನ ಆಸ್ಟ್ರೇಲಿಯಾ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡಗಳ ಏಕದಿನ ಸರಣಿಗೆ ಸಜ್ಜಾಗಿತ್ತು. ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದರೂ ಐದು ಪಂದ್ಯಗಳ ಸರಣಿಯಲ್ಲಿ ಆ ತಂಡದ ಪ್ರಮುಖ ಬ್ಯಾಟರ್‌ಗಳಾದ ಕೇಗ್ಲಿ, ಲೀಸಾ ಸ್ಥಳೇಕರ್, ಬೆಲಿಂದಾ ಕ್ಲಾರ್ಕ್‌, ಕರೇನ್ ರಾಲ್ಟನ್ ಮುಂತಾದವರು ಭಾರತದ ಮಹಿಳೆಯರ ಸ್ಪಿನ್ ಮೋಡಿಯ ’ರುಚಿ’ ಕಂಡಿದ್ದರು. ಆಗ ಆತಿಥೇಯ ತಂಡದ ಸ್ಪಿನ್ ದಾಳಿಯ ಚುಕ್ಕಾಣಿ ಹಿಡಿದಿದ್ದವರು ನೀತು ಡೇವಿಡ್.

ನೀತು ಅವರದು ವಿಶಿಷ್ಟ ಬೌಲಿಂಗ್ ಶೈಲಿ. ಎಡ ಮುಂಗಾಲನ್ನು ಎರಡು ಬಾರಿ ನೆಲಕ್ಕೆ ಬಡಿದುಸಣ್ಣ ರನ್‌ ಅಪ್‌ ನಂತರ ಚೆಂಡು ’ರಿಲೀಸ್’ ಮಾಡುವ ಅವರು ಎಂಥ ಆಟಗಾರ್ತಿಯರನ್ನೂ ಗೊಂದಲಕ್ಕೆ ಈಡುಮಾಡಬಲ್ಲರು. ಕಾನ್ಪುರದ ಈ ಅಪರೂಪದ ಆಟಗಾರ್ತಿ ಹೆಗಲಿಗೆ ಈಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಲಾಗಿದೆ. ಯುವ ಪ್ರತಿಭೆಗಳನ್ನು ಹುಡುಕಿ, ಮುಂಪಕ್ತಿಗೆ ತರುವುದರ ಜೊತೆಯಲ್ಲಿ ಅನುಭವಿ ಆಟಗಾರ್ತಿಯರಿಗೆ ಮಣೆ ಹಾಕುವ ಸವಾಲು ಹಾಗೂ ಜವಾಬ್ದಾರಿ ಅವರ ಮೇಲಿದೆ.

10 ಟೆಸ್ಟ್‍ಮತ್ತು 97 ಏಕದಿನ ಪಂದ್ಯಗಳನ್ನು ಆಡಿರುವ ನೀತು ಮಹಿಳೆಯರ ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್ ಒಂದರಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಜೆಮ್ಶೆಡ್‌ಪುರದಲ್ಲಿ 1995ರಲ್ಲಿ ಇಂಗ್ಲೆಂಡ್ ಎದುರು ನಡೆದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು 53 (31.3 ಓವರ್‌) ರನ್‌ಗಳಿಗೆ ಎಂಟು ವಿಕೆಟ್ ಉರುಳಿಸಿದ್ದರು. ಇನಿಂಗ್ಸ್‌ನಲ್ಲಿ ಅವರ 12 ಓವರ್‌ಗಳು ಮೇಡನ್ ಆಗಿದ್ದವು! ವಿಶೇಷವೆಂದರೆ, ಪುರುಷರ ಟೆಸ್ಟ್‌ನಲ್ಲೂ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಜಿಮ್ ಲೇಕರ್ ಕೂಡ 53 ರನ್ ನೀಡಿ ಈ ಸಾಧನೆ ಮಾಡಿದ್ದಾರೆ. ಆದರೆ ಅವರು ಎಲ್ಲ 10 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು.

2008ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ, 43 ವರ್ಷದ ನೀತು ಅವರಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಅಪಾರ ಅನುಭವವಿದೆ. ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ಭಾರತದ ಮೊದಲ ಮಹಿಳಾ ಬೌಲರ್ ಆಗಿರುವ ಅವರಿಗೆ ಈ ಕ್ರೀಡೆಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆಯೂ ಜ್ಞಾನವಿದೆ.

‘ನಮ್ಮ ಕಾಲದ ಕ್ರಿಕೆಟ್‌ಗೂ ಈಗಿನ ಆಟಕ್ಕೂ ವ್ಯತ್ಯಾಸವಿದೆ. ಈಗ, ಚುರುಕಿನ, ಕ್ಷಿಪ್ರಗತಿಯಲ್ಲಿ ರನ್ ಗಳಿಸಬಲ್ಲ ಆಟಗಾರ್ತಿಯರನ್ನು ಆಯ್ಕೆ ಮಾಡಬೇಕಾದ ಅಗತ್ಯ ಇದೆ. ದಿಢೀರ್ ಆಗಿ ಬೆಳೆದ ಶಫಾಲಿ ವರ್ಮಾ ಅವರಂಥ ಆಟಗಾರ್ತಿಯರ ಮೇಲೆ ಇಂದು ಹೆಚ್ಚು ಗಮನಹರಿಸಬೇಕಾಗಿದೆ‘ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ಮಾತನ್ನು ಕಾರ್ಯರೂಪಕ್ಕೆ ತರಲು ಅವರು ಯಾವ ರೀತಿ ಪ್ರಯತ್ನಿಸುತ್ತಾರೆ ಎಂಬುದು ಈಗಿನ ಕುತೂಹಲ.

1995ರಲ್ಲಿ ನೀತು ಡೇವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನೆಲ್ಸನ್‌ನಲ್ಲಿ ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್ ಪಂದ್ಯ ಆಡಿದ್ದರು. 10 ಟೆಸ್ಟ್‌ಗಳಲ್ಲಿ 41 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 2006ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಅವರ ಕೊನೆಯ ಪಂದ್ಯ. ಏಕದಿನ ಕ್ರಿಕೆಟ್‌ಗೆ ನೀತು ಪದಾರ್ಪಣೆ ಮಾಡಿದ್ದು 1995ರಲ್ಲಿ, ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ. 2008ರಲ್ಲಿ ಇಂಗ್ಲೆಂಡ್ ಎದುರು ಕೊನೆಯ ಪಂದ್ಯ ಆಡಿದ್ದರು. 97 ಪಂದ್ಯಗಳಲ್ಲಿ ಅವರು 141 ವಿಕೆಟ್ ಉರುಳಿಸಿದ್ದಾರೆ. 20ಕ್ಕೆ5, ಏಕದಿನ ಕ್ರಿಕೆಟ್‌ನಲ್ಲಿ ಅವರ ಶ್ರೇಷ್ಠ ಬೌಲಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT