ಗುರುವಾರ , ಆಗಸ್ಟ್ 6, 2020
28 °C
ವಿಶ್ವಕಪ್‌ ಕ್ರಿಕೆಟ್‌

ಕೆರಿಬಿಯನ್ನರಿಗೆ ಆಘಾತ ನೀಡಿದ ಮಾಲಿಂಗ; ಗೆಲುವಿನ ಸನಿಹದಲಿ ಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಸ್ಟರ್‌ ಲಿ ಸ್ಟ್ರೀಟ್: ಶ್ರೀಲಂಕಾ ನೀಡಿದ ಸವಾಲಿನ ಮೊತ್ತದ ಗುರಿಯ ಬೆನ್ನೇರಿದ ವೆಸ್ಟ್‌ ಇಂಡೀಸ್‌ ತಂಡಕ್ಕೆ ಲಸಿತ್‌ ಮಾಲಿಂಗ ಆರಂಭಿಕ ಆಘಾತ ನೀಡಿದರು. ಎರಡು ವಿಕೆಟ್‌ ಕಬಳಿಸುವ ಮೂಲಕ ಕೆರಿಬಿಯನ್‌ ಪಡೆಯನ್ನು ಸಂಕಷ್ಟಕ್ಕೆ ದೂಡಿದರು. 

ವೆಸ್ಟ್ ಇಂಡೀಸ್‌ 32 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿದೆ. ನಿಕೋಲಸ್ ಪೂರನ್(4+) ಮತ್ತು ಕಾರ್ಲೋಸ್ ಬ್ರಾಥ್‌ವೇಟ್(6) ಕಣದಲ್ಲಿದ್ದಾರೆ. 

ಕ್ಷಣಕ್ಷಣದ ಸ್ಕೋರ್‌: https://bit.ly/322DFqR

ಆರಂಭದಲ್ಲಿಯೇ ಲಸಿತ್‌ ಮಾಲಿಂಗ ಎರಡು ಪ್ರಮುಖ ವಿಕೆಟ್‌ ಪಡೆಯುವಲ್ಲಿ ಸಫಲರಾದರು. ತಂಡ 22 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಉರುಳಿತ್ತು. ಸುನಿಲ್‌ ಆ್ಯಂಬ್ರಿಸ್‌(5) ಮತ್ತು ಶಾಯ್‌ ಹೋಪ್‌(5) ಲಯ ಕಂಡುಕೊಳ್ಳುವ ಮುನ್ನವೇ ಹೊರನಡೆದರು. 

ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ಮೇಲೆ ಒತ್ತಡ ಹೆಚ್ಚಿತು. ಎರಡು ಸಿಕ್ಸರ್ ಸಿಡಿಸುವ ಮೂಲಕ ಗೇಲ್‌ ನಿರೀಕ್ಷೆ ಮೂಡಿಸಿದರಾದರೂ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲಿಲ್ಲ. 35 ರನ್‌ ಗಳಿಸಿದ್ದ ಗೇಲ್, ಕಸುನ್‌ ರಜಿತ ಎಸೆತದಲ್ಲಿ ಕ್ಯಾಚ್‌ ನೀಡಿದರು. 

ಶಿಮ್ರೊನ್ ಹೆಟ್ಮೆಯರ್(29) ತಂಡಕ್ಕೆ ಆಸರೆಯಾಗುವಂತೆ ಕಂಡರೂ ರನ್‌ಔಟ್‌ನಿಂದಾಗಿ ವಿಂಡೀಸ್‌ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು. ಬಿರುಸಿನ ಆಟವಾಡಿದ ಜೇಸನ್‌ ಹೋಲ್ಡರ್‌(26) ಜೆಫ್ರಿ ವಾಂಡರ್ಸೆ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. 

ಇದನ್ನೂ ಓದಿ: ಅವಿಷ್ಕಾ ಫರ್ನಾಂಡೊ ಶತಕ, ಲಂಕನ್ನರ ಭರ್ಜರಿ ಆಟ; ವಿಂಡೀಸ್‌ಗೆ 339 ರನ್‌ ಗುರಿ

ಟಾಸ್‌ ಗೆದ್ದ ಕೆರಿಬಿಯನ್‌ ಪಡೆ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಪೆರೆರಾ–ಕರುಣಾರತ್ನೆ ಜತೆಯಾಟದಿಂದ ಲಂಕನ್ನರು ಉತ್ತಮ ಆರಂಭ ಪಡೆದರು. ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 338 ರನ್‌ ಗಳಿಸಿತು. ಭರ್ಜರಿ ಆಟ ಪ್ರದರ್ಶಿಸಿದ ಅವಿಷ್ಕಾ ಫರ್ನಾಂಡಿಸ್‌ 100 ಎಸೆತಗಳಲ್ಲಿ 100 ರನ್‌ ದಾಖಲಿಸಿದರು. ಇದು ಅವರ ಚೊಚ್ಚಲ ಅಂತರರಾಷ್ಟ್ರೀಯ ಶತಕವಾಗಿದೆ. 

ಬಿರುಸಿನ ಆಟ ಪ್ರದರ್ಶಿಸಿದ ಕುಶಾಲ ಪೆರೆರಾಗೆ, ನಾಯಕ ದಿಮುತ್ ಕರುಣಾರತ್ನೆ ತಾಳ್ಮೆಯ ಆಟದೊಂದಿಗೆ ಸಾಥ್‌ ನೀಡಿದರು. 93 ರನ್‌ ಜತೆಯಾಟಕ್ಕೆ ಜೇಸನ್‌ ಹೋಲ್ಡರ್‌ ತಡೆಯಾದರು. ಪೆರೆರಾ 38 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ವಿಶ್ವಕಪ್‌ ಟೂರ್ನಿಯಲ್ಲಿ ಇದು ಅವರ ಮೂರನೇ ಅರ್ಧ ಶತಕವಾಗಿದೆ. ಆರನೇ ಕ್ರಮಾಂಕದಲ್ಲಿ ಆಡಿದ ಲಾಹಿರು ತಿರಿಮನ್ನೆ ಚುರುಕಿನ ಆಟದಿಂದಾಗಿ ತಂಡ ಸವಾಲಿನ ಮೊತ್ತ ದಾಖಲಿಸಿತು. ಲಾಹಿರು 33 ಎಸೆತಗಳಲ್ಲಿ 45 ರನ್‌ ದಾಖಲಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು