ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿನಿಂದನೆ ಆರೋಪ: ಕ್ಷಮೆ ಕೇಳಿದ ಯುವರಾಜ್ ಸಿಂಗ್

Last Updated 5 ಜೂನ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣದ ಸಂವಾದವೊಂದರಲ್ಲಿ ಜಾತಿನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಶುಕ್ರವಾರ ಕ್ಷಮೆ ಕೋರಿದ್ದಾರೆ.

ರೋಹಿತ್ ಶರ್ಮಾ ಅವರೊಂದಿಗೆ ಇನ್ಸ್ಟಾಗ್ರಾಂ ಲೈವ್ ಚಾಟ್‌ನಲ್ಲಿ ಯುವಿ ಯಜುವೇಂದ್ರ ಚಾಹಲ್ ಅವರನ್ನು ವ್ಯಂಗ್ಯ ಮಾಡುವಾಗ ಜಾತಿನಿಂದನೆಯ ಪದವನ್ನು ಬಳಸಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಹರಿಯಾಣದ ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಯುವಿ, ‘ನನ್ನ ಗೆಳೆಯರೊಂದಿಗೆ ಚರ್ಚೆ ನಡೆಸುತ್ತಿದ್ದೆ. ಯಾವುದೇ ಉದ್ದೇಶಪೂರ್ವಕವಾದ ನಿಂದನೆ ಅದಾಗಿರಲಿಲ್ಲ. ಸ್ನೇಹಿತರ ನಡುವಿನ ಮಾತುಕತೆ ಅದಾಗಿತ್ತಷ್ಟೇ.ಆದರೂ ನನಗೆ ಅರಿವಿಲ್ಲದೆಯೇ ಯಾರಾದಾದರೂ ಮನಸ್ಸಿಗೆ ಬೇಸರ ಮೂಡಿಸಿದ್ದರೆ, ಭಾರತದ ಜವಾಬ್ದಾರಿಯುತ ಪ್ರಜೆಯಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.

‘ನಾನು ಯಾವತ್ತೂ ತಾರತಮ್ಯವನ್ನು ಮಾಡಿಲ್ಲ ಮತ್ತು ಬೆಂಬಲಿಸಿಲ್ಲ. ಜಾತಿ, ವರ್ಣ, ಧರ್ಮ ಮತ್ತು ಲಿಂಗಗಳ ಆಧಾರದಲ್ಲಿ ಯಾರನ್ನೂ ಅವಮಾನಿಸಿಲ್ಲ. ಮೇಲು–ಕೀಳು ಭಾವನೆ ಹೊಂದಿಲ್ಲ. ಪ್ರತಿಯೊಬ್ಬರ ಆತ್ಮಗೌರವವನ್ನು ನಾನು ಗೌರವಿಸುತ್ತೇನೆ. ನನ್ನ ಉಳಿದಿರುವ ಜೀವನವನ್ನು ಎಂದಿನಂತೆಯೇ ಜನತೆಯ ಕಲ್ಯಾಣಕ್ಕಾಗಿ ಕಳೆಯುತ್ತೇನೆ. ನನ್ನ ಪ್ರೀತಿ ಯಾವತ್ತಿದ್ದರೂ ಭಾರತ ಮತ್ತು ಇಲ್ಲಿಯ ಜನರಿಗಾಗಿ’ ಎಂದು ಅಲ್‌ರೌಂಡರ್ ಯುವಿ ಬರೆದಿದ್ದಾರೆ.

304 ಅಂತರರಾಷ್ಟ್ರೀಯ ಏಕದಿನ, 58 ಟ್ವಿಂಟಿ–20 ಮತ್ತು 40 ಟೆಸ್ಟ್‌ಗಳನ್ನು ಯುವಿ ಆಡಿದ್ದರು. ಹೋದ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಭಾರತ ತಂಡವು 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್‌ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT