ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್‌ ತಂಡದ ‘ಗೋಡೆ’

Last Updated 24 ಮೇ 2020, 19:30 IST
ಅಕ್ಷರ ಗಾತ್ರ

ಭಾರತ ಸೀನಿಯರ್‌ ತಂಡದ ಪರ 38 ಪಂದ್ಯಗಳನ್ನು ಆಡಿರುವ ಗುರುಪ್ರೀತ್‌, 2016ರಲ್ಲಿ ನಡೆದಿದ್ದ ಪುರ್ಟೊರಿಕೊ ಎದುರಿನ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಭಾರತ ಫುಟ್‌ಬಾಲ್‌ ತಂಡದ ‘ಗೋಡೆ’ ಎಂದೇ ಖ್ಯಾತರಾಗಿರುವ ಆಟಗಾರ ಗುರುಪ್ರೀತ್ ಸಿಂಗ್‌ ಸಂಧು. ಪಂಜಾಬ್‌ನ ಈ ಪ್ರತಿಭೆ ಅಮೋಘ ಗೋಲ್‌ಕೀಪಿಂಗ್‌ ಮೂಲಕ ಫುಟ್‌ಬಾಲ್‌ ಪ್ರಿಯರ ಮನ ಗೆದ್ದಿದ್ದಾರೆ.

2010ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಗುರುಪ್ರೀತ್‌, 19 ಮತ್ತು 23 ವರ್ಷದೊಳಗಿನವರ ವಿಭಾಗಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದರು. 2011ರಲ್ಲಿ ಸೀನಿಯರ್‌ ತಂಡಕ್ಕೂ ಅಡಿ ಇಟ್ಟರು. 2017ರಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಸೇರಿದ ಗುರುಪ್ರೀತ್‌ ಸಿಂಗ್‌, ಅಂದಿನಿಂದಲೂ ಬಿಎಫ್‌ಸಿಯ ಆಧಾರ ಸ್ಥಂಭವಾಗಿದ್ದಾರೆ. 28 ವರ್ಷ ವಯಸ್ಸಿನ ಈ ಆಟಗಾರ, ಐಎಸ್‌ಎಲ್‌ನಲ್ಲಿ ಸತತ ಎರಡು ಬಾರಿ ಚಿನ್ನದ ಕೈಗವಸು (ಗೋಲ್ಡನ್‌ ಗ್ಲೋವ್‌) ಪ್ರಶಸ್ತಿ ಪಡೆದ ಹಿರಿಮೆಗೆ ಭಾಜನರಾಗಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತರೂ ಆಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಪ್ರತಿಷ್ಠಿತ ಯುಇಎಫ್‌ಎ ಯುರೋಪ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದೀರಿ. ನಾರ್ವೆಯ ಸ್ಟೆಬೇಕ್‌ ಎಫ್‌ಸಿ ಪರ ಆಡಿದ್ದರ ಬಗ್ಗೆ ಹೇಳಿ?

ಯುರೋಪಿಯನ್‌ ಲೀಗ್‌ನಲ್ಲಿ ಆಡಿದ್ದರಿಂದ ನನ್ನ ಕ್ರೀಡಾ‌ ಬದುಕಿಗೆ ಹೊಸ ತಿರುವು ಲಭಿಸಿತು. ನನ್ನ ಸಾಮರ್ಥ್ಯದ ಅರಿವಾಗಿದ್ದು ಕೂಡ ಆಗಲೇ. ನಾನು ಫುಟ್‌ಬಾಲ್‌ನಲ್ಲಿ ಎತ್ತರದ ಸಾಧನೆ ಮಾಡಲು,ಮಾನಸಿಕವಾಗಿ ಸದೃಢನಾಗಲು ಯುರೋಪಿಯನ್‌ ಲೀಗ್‌ ನೆರವಾಯಿತು.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಎರಡು ಬಾರಿ ಚಿನ್ನದ ಕೈಗವಸು (ಗೋಲ್ಡನ್‌ ಗ್ಲೋವ್‌) ಪ್ರಶಸ್ತಿ ಗೆದ್ದ ಸಾಧನೆ ಕುರಿತು..

ಸಹ ಆಟಗಾರರ ಸಹಕಾರದಿಂದ ಈ ಸಾಧನೆ ಮೂಡಿಬಂದಿದೆ. ಅವರ ನೆರವು ಇಲ್ಲದೇ ಹೋಗಿದ್ದರೆ ಹೆಚ್ಚು ‘ಕ್ಲೀನ್‌ ಶೀಟ್ಸ್‌’ ಪಡೆಯಲು ಆಗುತ್ತಿರಲಿಲ್ಲ. ಅವರ ಬೆಂಬಲದಿಂದಲೇ ಪ್ರತಿ ಬಾರಿಯೂ ಎದುರಾಳಿ ಆಟಗಾರರು ಗುರಿಯೆಡೆಗೆ ಒದ್ದ ಚೆಂಡನ್ನು ಆತ್ಮವಿಶ್ವಾಸದಿಂದ ತಡೆಯಲು (ಸೇವ್‌) ಸಾಧ್ಯವಾಯಿತು.ವೈಯಕ್ತಿಕ ಪ್ರಶಸ್ತಿಗಳು ಸಹಜವಾಗಿಯೇ ಹೆಚ್ಚು ಖುಷಿ ಕೊಡುತ್ತವೆ. ತಂಡವು ಪ್ರಶಸ್ತಿ ಗೆದ್ದಿದ್ದರೆ ಈ ಸಂತಸ ಇಮ್ಮಡಿಸುತ್ತಿತ್ತು. ಮುಂದಿನ ಋತುವಿನಲ್ಲಿ ತಂಡದ ಯಶಸ್ಸಿಗಾಗಿ ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

ಈ ಬಾರಿಯ ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ಫೈನಲ್‌ ಪ್ರವೇಶಿಸಲು ವಿಫಲವಾಯಿತಲ್ಲ?

ಬಿಎಫ್‌ಸಿ, ಭಾರತದ ಅತ್ಯಂತ ಯಶಸ್ವಿ ಕ್ಲಬ್‌. ಹಿಂದಿನ ಏಳು ವರ್ಷಗಳಲ್ಲಿ ಆರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಈ ಬಾರಿಯ ಐಎಸ್‌ಎಲ್‌ನಲ್ಲಿ ಫೈನಲ್‌ ಪ್ರವೇಶಿಸಲು ಆಗಲಿಲ್ಲ. ಇದರಿಂದ ಎಲ್ಲರಿಗೂ ಬೇಸರವಾಗಿದೆ. ಹಾಗಂತ ಎದೆಗುಂದಿಲ್ಲ. ಇದನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಮುಂದಿನ ಋತುವಿನಲ್ಲಿ ಪುಟಿದೇಳುತ್ತೇವೆ.

ಪೆನಾಲ್ಟಿ ಶೂಟೌಟ್‌ ವೇಳೆ ಏಕಾಗ್ರತೆ ಕಾಪಾಡಿಕೊಳ್ಳುವುದು ಸವಾಲಲ್ಲವೇ?

ನಿಜಕ್ಕೂ ಬಹುದೊಡ್ಡ ಸವಾಲು. ಇದಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಎದುರಾಳಿ ತಂಡದ ಆಟಗಾರರು ಈ ಹಿಂದೆ ಆಡಿದ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸಬೇಕಾಗುತ್ತದೆ. ಆಟಗಾರನೊಬ್ಬ ಯಾವ ಬದಿಯಲ್ಲಿ ಚೆಂಡನ್ನು ಒದೆಯುತ್ತಾನೆ, ಆತನ ಬಲ, ದೌರ್ಬಲ್ಯವೇನು ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ.

ಕೊರೊನಾ ನಂತರದ ಕಾಲಘಟ್ಟದಲ್ಲಿ ನಡೆಯುವ ಪಂದ್ಯಗಳ ವೇಳೆ ತಂಡವೊಂದು ಐದು ಮಂದಿ ಬದಲಿ ಆಟಗಾರರನ್ನು ಕಣಕ್ಕಿಳಿಸುವ ನಿಯಮಕ್ಕೆ ಫಿಫಾ ಒಪ್ಪಿಗೆ ನೀಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದೊಂದು ಅತ್ಯುತ್ತಮ ನಿರ್ಧಾರ. ಕೆಲವೊಂದು ತಂಡಗಳು ನಿರಂತರವಾಗಿ ಪಂದ್ಯಗಳನ್ನು ಆಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಅವಕಾಶ ನೀಡಲು ಹೊಸ ನಿಯಮ ಅನುಕೂಲಕರವಾಗಿದೆ. ಆಟಗಾರರು ಗಾಯದಿಂದ ಮುಕ್ತವಾಗಿರಲೂ ಇದು ಸಹಕಾರಿ.

*ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಫುಟ್‌ಬಾಲ್‌ ಚಟುವಟಿಕೆಗಳನ್ನು ಪುನರಾರಂಭಿಸಲು ಹಲವು ಫೆಡರೇಷನ್‌ಗಳು ಮುಂದಾಗಿವೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಬಗ್ಗೆಯೂ ಒಲವು ತೋರುತ್ತಿವೆ. ಈ ಕುರಿತು ನೀವೇನು ಹೇಳುತ್ತೀರಿ?

ಪ್ರೇಕ್ಷಕರಿಲ್ಲದೇ ಫುಟ್‌ಬಾಲ್‌ ಪಂದ್ಯಗಳು ನಡೆಯುವುದನ್ನು ಊಹಿಸಿಕೊಳ್ಳುವುದು ಕಷ್ಟ. ತಂಡವೊಂದರ ಯಶಸ್ಸಿನಲ್ಲಿ ಆಟಗಾರರಷ್ಟೇ ಪಾತ್ರ ಪ್ರೇಕ್ಷಕರದ್ದೂ ಇರುತ್ತದೆ. ನಾವೀಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಆಟಗಾರರು, ಪ್ರೇಕ್ಷಕರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಖಾಲಿ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸುವುದು ಅನಿವಾರ್ಯ. ಇದಕ್ಕೆ ನನ್ನ ಸಹಮತವಿದೆ.

ಲಾಕ್‌ಡೌನ್‌ ಸಮಯದಲ್ಲಿ ನೀವು ಹೇಗೆ ದಿನ ದೂಡುತ್ತಿದ್ದೀರಿ?

ನಾನು ಆಸ್ಟ್ರೇಲಿಯಾದಲ್ಲಿದ್ದೇನೆ. ಬೇರೆ ರಾಷ್ಟ್ರಗಳಲ್ಲಿರುವಂತೆ ಇಲ್ಲಿ ಕಠಿಣ ನಿರ್ಬಂಧಗಳೇನೂ ಇಲ್ಲ. ಹೀಗಾಗಿ ಬಿಎಫ್‌ಸಿ ತಂಡದ ಸಹ ಆಟಗಾರ ಎರಿಕ್‌ ಪಾರ್ಟಲು ಜೊತೆ ಮೈದಾನಕ್ಕೆ ಹೋಗಿ ತಾಲೀಮು ನಡೆಸುತ್ತಿದ್ದೇನೆ.ಮನೆಯಲ್ಲಿಯೇ ಅಗತ್ಯ ವ್ಯಾಯಾಮಗಳನ್ನು ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳುತ್ತಿದ್ದೇನೆ.

ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟ ಹೇಗಿರಬೇಕು?

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT