ಹುಲುನ್‌ಬುಯಿರ್ (ಚೀನಾ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿರುವ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಗೆಲುವಿ ಓಟವನ್ನು ಮುಂದುವರಿಸಿದೆ.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 2–1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಸದೆಬಡಿಯಿತು. ಈ ಪಂದ್ಯದಲ್ಲಿ ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಆರು ತಂಡಗಳಿರುವ ಕಣದಲ್ಲಿ ಭಾರತ ಆಡಿರುವ ಐದು ಪಂದ್ಯಗಳನ್ನು ಹೆಚ್ಚಿನ ಪ್ರಯಾಸವಿಲ್ಲದೇ ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಇಲ್ಲಿ ಪ್ರಶಸ್ತಿಗೆ ನೆಚ್ಚಿನ ತಂಡವಾಗಿದ್ದು, ಇದುವರೆಗೆ ಅದಕ್ಕೆ ಯೋಗ್ಯ ರೀತಿಯಲ್ಲಿ ಆಡಿದೆ.
ಪಾಕ್ ವಿರುದ್ಧ ಭಾರತ ಗೆಲುವುಗಳು...
ಕಳೆದ ವರ್ಷ ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಭಾರತ 10–2 ರಿಂದ ಪಾಕಿಸ್ತಾನ ತಂಡವನ್ನು ಸದೆಬಡಿದಿತ್ತು. ಅದಕ್ಕಿಂತ ಕೆಲವು ತಿಂಗಳು ಮೊದಲು ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 4–0 ಜಯಗಳಿಸಿತ್ತು. 2022ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಯುವ ಆಟಗಾರರಿದ್ದ ತಂಡ, ಪಾಕ್ ವಿರುದ್ಧ 1–1 ಡ್ರಾ ಸಾಧಿಸಿತ್ತು. ಢಾಕ್ಕಾದಲ್ಲಿ 2021ರಲ್ಲಿ ನಡೆದ ಇದೇ (ಎಸಿಟಿ) ಟೂರ್ನಿಯಲ್ಲಿ 4–3 ರಿಂದ ಪಾಕ್ ವಿರುದ್ಧ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.