ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನವದೀಪ್ ಸಿಂಗ್

Published : 8 ಸೆಪ್ಟೆಂಬರ್ 2024, 2:26 IST
Last Updated : 8 ಸೆಪ್ಟೆಂಬರ್ 2024, 2:26 IST
ಫಾಲೋ ಮಾಡಿ
Comments

ಪ್ಯಾರಿಸ್‌: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್‌41 ಫೈನಲ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಹರಿಯಾಣದ 23 ವರ್ಷದ ಪ್ಯಾರಾ-ಅಥ್ಲೀಟ್ ನವದೀಪ್ ಸಿಂಗ್, ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ 47.32 ಮೀಟರ್ಸ್ ದೂರ ಥ್ರೋ ಸಾಧನೆ ಮಾಡುವ ಮೂಲಕ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಪುರುಷರ ಜಾವೆಲಿನ್ ಎಫ್41 ವಿಭಾಗದಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ.

ಪುರುಷರ ಎಫ್‌ 41 ವಿಭಾಗದ ಫೈನಲ್‌ನಲ್ಲಿ ಜಾವಿಲಿನ್ ಥ್ರೋದಲ್ಲಿ ನವದೀಪ್‌ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ, ಆಕ್ಷೇಪಾರ್ಹ ಧ್ವಜವನ್ನು ಪದೇ ಪದೇ ಪ್ರದರ್ಶಿಸಿದ ಕಾರಣ ಚಿನ್ನದ ಪದಕ ವಿಜೇತ ಇರಾನ್‌ನ ಸಾಡೆಗ್ ಬೀತ್ ಸಯಾಹ್ ಅವರನ್ನು ಅನರ್ಹಗೊಳಿಸಲಾಯಿತು. ಅಂತಿಮವಾಗಿ ನವದೀಪ್ ಸಿಂಗ್‌ಗೆ ಬೆಳ್ಳಿ ಬದಲು ಚಿನ್ನದ ಪದಕ ನೀಡಲು ನಿರ್ಧರಿಸಲಾಯಿತು.

ಚೀನಾದ ಸನ್ ಪೆಂಗ್‌ಕ್ಸಿಯಾಂಗ್ ಅವರು 44.72 ಮೀಟರ್ಸ್ ದೂರ ಥ್ರೋ ಸಾಧನೆ ಮಾಡಿ ಬೆಳ್ಳಿ ಪದಕ ಗೆದ್ದರು. ಇರಾಕ್‌ನ ನುಖೈಲಾವಿ ವೈಲ್ಡಾನ್ (40.46 ಮೀ) ಕಂಚಿನ ಪದಕ ಪಡೆದರು.

ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಪ್ರದರ್ಶನ ನೀಡಿರುವ ಭಾರತೀಯ ಸ್ಪರ್ಧಿಗಳು ಈವರೆಗೆ ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚಿನ ಪದಕಗಳು ಒಳಗೊಂಡಿದ್ದು, ಭಾರತವು 16ನೇ ಸ್ಥಾನ ಕಾಯ್ದುಕೊಂಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಚಿನ್ನ ಸೇರಿದಂತೆ ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT