ಪ್ಯಾರಿಸ್: ಪ್ರಿಯಕರನಿಂದ ಹತ್ಯೆಗೊಳಗಾದ ಯುಗಾಂಡದ ಒಲಿಂಪಿಯನ್ ಓಟಗಾರ್ತಿ ರೆಬೆಕಾ ಚೆಪ್ಟೇಗಿ ಅವರಿಗೆ ಗೌರವ ಸಲ್ಲಿಸಲು ನಗರದ ಕ್ರೀಡಾ ತಾಣವೊಂದಕ್ಕೆ ಅವರ ಹೆಸರಿಡಲಾಗುವುದು ಎಂದು ಪ್ಯಾರಿಸ್ ಮೇಯರ್ ಆ್ಯನೆ ಹಿಡಾಲ್ಗೊ ಶುಕ್ರವಾರ ಪ್ರಕಟಿಸಿದ್ದಾರೆ.
ಕಳೆದ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್‌ನ ಮ್ಯಾರಥಾನ್‌ಲ್ಲಿ ರೆಬೆಕಾ ಮೊದಲ ಬಾರಿ ಭಾಗವಹಿಸಿ 44ನೇ ಸ್ಥಾನ ಗಳಿಸಿದ್ದರು. ಕಳೆದ ಭಾನುವಾರವಷ್ಟೇ ಆಕೆ ಕೆನ್ಯಾದಲ್ಲಿ (ಯುಗಾಂಡ ಗಡಿಗೆ ಸಮೀಪ) ಹೊಸದಾಗಿ ಕಟ್ಟಿದ್ದ ಮನೆಗೆ ನುಗ್ಗಿದ ಪ್ರಿಯತಮ ಡಿಕ್ಸನ್ ಎನ್ಡಿಮಾ ಮರಂಗಾಚ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟ ಗಾಯದಿಂದಾಗಿ ರೆಬೆಕಾ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದರು.
‘ಪ್ಯಾರಿಸ್‌ನಲ್ಲಿ ಆಕೆ ಉತ್ತಮವಾಗಿ ಓಡಿದ್ದಳು. ಅಕೆಯನ್ನು ನೋಡಿದ್ದೆವು. ಆಕೆಯ ಚೆಲುವು, ಶಕ್ತಿ, ಸ್ವಾತಂತ್ರ್ಯ ನೋಡಲಾಗದ ಪ್ರಿಯಕರ ಅಸಹನೆಯಿಂದ ಹತ್ಯೆ ಮಾಡಿದ್ದಾನೆ’ ಎಂದು ಹಿಡಾಲ್ಗೊ ಮಾಧ್ಯಮಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ‘ಪ್ಯಾರಿಸ್ ಆಕೆಯನ್ನು ಮರೆಯದು. ರೆಬೆಕಾ ನೆನಪಿನಲ್ಲಿ ಕ್ರೀಡಾ ತಾಣವೊಂದಕ್ಕೆ ಅವರ ಹೆಸರು ಇಡಲಾಗುವುದು’ ಎಂದಿದ್ದಾರೆ.
33 ವರ್ಷ ವಯಸ್ಸಿನ ರೆಬೆಕಾ ಕೊಲೆಯನ್ನು ವಿಶ್ವಸಂಸ್ಥೆ ‘ಹಿಂಸಾತ್ಮಕ ಹತ್ಯೆ’ ಎಂದು ಹೇಳಿದೆ.
‘ನಮ್ಮ ಕ್ರೀಡೆಯು ಪ್ರತಿಭಾನ್ವಿತ ಅಥ್ಲೀಟ್ ಒಬ್ಬರನ್ನು ಅತ್ಯಂತ ದುರಂತಮ ಯವಾಗಿ ಮತ್ತು ಯೋಚಿಸಲಾಗದ ರೀತಿ ಕಳೆದುಕೊಂಡಿದೆ’ ಎಂದು ವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೊ ಪ್ರತಿಕ್ರಿಯಿಸಿದ್ದಾರೆ.