ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಈಜುಕೊಳದ ಯುವರಾಜ ಹಫ್ನೋಯಿ

ಅಮೆರಿಕ, ಆಸ್ಟ್ರೇಲಿಯಾದ ಪ್ರಾಬಲ್ಯದ ಎದುರು ಉದಯಿಸಿದ ಹೊಸ ಕ್ರೀಡಾ ಪ್ರತಿಭೆ
Last Updated 27 ಜುಲೈ 2021, 19:31 IST
ಅಕ್ಷರ ಗಾತ್ರ

‘ದೇಶದ ಧ್ವಜ ಎತ್ತರೆತ್ತರಕ್ಕೆ ಏರುತ್ತಿರುವುದನ್ನು ಕಂಡಾಗ ಹೃದಯ ತುಂಬಿ ಬಂತು. ಅದರ ಬೆನ್ನಲ್ಲೇ ರಾಷ್ಟ್ರಗೀತೆ ಮೊಳಗಿದಾಗ ಕಣ್ಣುಗಳು ಮಂಜಾದವು. ಚಿನ್ನದ ಪದಕ ಕೊರಳನ್ನು ಅಲಂಕರಿಸುತ್ತಿದ್ದಂತೆ ಆನಂದಬಾಷ್ಪ ಹರಿಯಿತು. ನಾನಾಗ ತುಂಬ ಭಾವುಕನಾಗಿದ್ದೆ...’

18ರ ಹರಯದ ಅಹಮ್ಮದ್ ಹಫ್ನೋಯಿ ಟೋಕಿಯೊದಲ್ಲಿ ಒಲಿಂಪಿಕ್ಸ್ ಪದಕ ಪ್ರದಾನ ಸಮಾರಂಭದ ವೇದಿಕೆಯಿಂದ ಇಳಿದ ಕೂಡಲೇ ಆಡಿದ ಮಾತುಗಳಲ್ಲಿ ಹೃದಯಾಂತರಾಳದ ಭಾವನೆ ಇತ್ತು; ಅಭಿಮಾನ ತುಂಬಿತ್ತು.

ಟುನೀಷಿಯಾದ 18ರ ಹರಯದ ಆಹಮ್ಮದ್ ಜುಲೈ 25ರಂದು ಒಲಿಂಪಿಕ್ಸ್‌ ಈಜು ಸ್ಪರ್ಧೆಯ 400 ಮೀಟರ್ಸ್ ಫ್ರೀಸ್ಟೈಲ್‌ ವಿಭಾಗದಲ್ಲಿ ಚಾಂಪಿಯನ್ ಆಗಿ ‘ಈಜುಕೊಳದ ದೊಡ್ಡಣ್ಣ’ರನ್ನೇ ದಂಗುಬಡಿಸಿದ್ದರು. ಅವರು ಚಿನ್ನದ ಪದಕಕ್ಕೆ ಮುತ್ತಿಡುವ ಮೊದಲೇ ಟುನೀಷಿಯಾದಲ್ಲಿ ಸಂಭ್ರಮದ ಅಲೆ ಎದ್ದಿತ್ತು. ಯಾಕೆಂದರೆ ಅಂದು, ಆ ದೇಶದ ಗಣರಾಜ್ಯೋತ್ಸವ ಆಗಿತ್ತು. ಪ್ರಭುತ್ವವನ್ನು ಮೀರಿ ನಿಂತು 1957ರಲ್ಲಿ ‘ಸ್ವತಂತ್ರ’ವಾದ ದಿನವಾಗಿತ್ತು.

ಅತ್ತ ತನ್ನ ದೇಶದ ಜನರು ಖುಷಿಯಿಂದ ಇದ್ದಾಗ ಇತ್ತ ಈಜುಕೊಳಕ್ಕೆ ಧುಮುಕಿದ ಅಹಮ್ಮದ್ ಹಫ್ನೋಯಿ 400 ಮೀಟರ್ಸ್‌ ಅಂತರ ಕ್ರಮಿಸಿ ಎದ್ದಾಗ ಚಿನ್ನದ ಹೊಳಪು ಮೂಡಿತ್ತು. ಅರ್ಹತಾ ಸುತ್ತಿನಲ್ಲಿ ಕೊನೆಯವರಾಗಿ ಫೈನಲ್ ಪ್ರವೇಶಿಸಿದ್ದ ಅಹಮ್ಮದ್ ಪದಕದ ಸುತ್ತಿನಲ್ಲಿ ಮೊದಲಿಗರಾಗಿ ಮೇಲೆದ್ದಿದ್ದರು. ಆ ಮೂಲಕ ಅಮೆರಿಕ ಮತ್ತು ಆಸ್ಟ್ರೇಲಿಯಾದ ಈಜುಪಟುಗಳನ್ನು ಅಚ್ಚರಿಗೊಳಿಸಿದ್ದರು. ಅಂದು ಸ್ಪರ್ಧೆಗಿದ್ದ ಒಟ್ಟು 12 ‍ಪದಕಗಳಲ್ಲಿ ಆರು ಅಮೆರಿಕ ಪಾಲಾಗಿದ್ದರೆ ಮೂರು ಆಸ್ಟ್ರೇಲಿಯಾದವರ ಕೊರಳು ಸೇರಿದ್ದವು.

400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಆಸ್ಟ್ರೇಲಿಯಾದ ಜ್ಯಾಕ್‌ ಮೆಕ್‌ಲಾಘ್ಲಿನ್ ಅವರನ್ನು ಹಿಂದಿಕ್ಕಿ ಅಹಮ್ಮದ್ 3 ನಿಮಿಷ 43.36 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ವಿಂಬಲ್ಡನ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದ ಒನ್ಸ್‌ ಜಬೆವುರ್ ಅವರ ಸಾಧನೆಗೆ ಪುಳಕಗೊಂಡಿದ್ದ ಟುನೀಷಿಯಾದ ಕ್ರೀಡಾಕ್ಷೇತ್ರದಲ್ಲಿ ಮತ್ತಷ್ಟು ಭರವಸೆ ಮೂಡಿಸಿತ್ತು,ಅಹಮ್ಮದ್ ಅವರ ಸಾಧನೆ.

ಕೊರೊನಾದಿಂದಾಗಿ ಟುನೀಷಿಯಾದಲ್ಲಿ ಈಗ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪರದಾಟ ನಡೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು ಸವಾಲುಗಳನ್ನು ಮೆಟ್ಟಿನಿಂತೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಅಹಮ್ಮದ್ ಹಫ್ನೋಯಿ

ಜನನ ಡಿಸೆಂಬರ್‌ 4, 2002

ಜನಿಸಿದ ಊರು ಗಾಫ್ಸ, ಮೆಟ್ಲಾಯಿ

ಪಾಲ್ಗೊಂಡ ಸ್ಪರ್ಧೆ 400 ಮೀ ಫ್ರೀಸ್ಟೈಲ್ಸ್‌

ಚಿನ್ನ ಗೆದ್ದ ಕಾಲ 3:43.36

––––

ಸಾಧನೆಗಳು

2018ರ ವಿಶ್ವ ಚಾಂಪಿಯನ್‌ಷಿಪ್‌ 4x200 ಮೀನಲ್ಲಿ ಬೆಳ್ಳಿ ಪಕದ

2018ರ ವಿಶ್ವ ಚಾಂಪಿಯನ್‌ಷಿಪ್‌ 800 ಮೀನಲ್ಲಿ ಕಂಚಿನ ಪದಕ

2018ರ ವಿಶ್ವ ಚಾಂಪಿಯನ್‌ಷಿಪ್‌ 1500 ಮೀನಲ್ಲಿ ಕಂಚಿನ ಪಕದ

2018ರ ವಿಶ್ವ ಚಾಂಪಿಯನ್‌ಷಿಪ್‌ 4x100 ಮೀನಲ್ಲಿ ಕಂಚಿನ ಪದಕ

2018ರ ಯೂತ್ ಒಲಿಂಪಿಕ್ಸ್‌ 800 ಮೀನಲ್ಲಿ 7ನೇ ಸ್ಥಾನ

2018ರ ಯೂತ್ ಒಲಿಂಪಿಕ್ಸ್‌ 400 ಮೀನಲ್ಲಿ 8ನೇ ಸ್ಥಾನ

2019ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ 800 ಮೀನಲ್ಲಿ 4ನೇ ಸ್ಥಾನ

2019ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ 1500 ಮೀನಲ್ಲಿ 6ನೇ ಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT