ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರಾಜ್ಯದ ಹಾಕಿ ಪ್ರತಿಭೆಗಳಿಗೆ ಅವಕಾಶ ಕೈತಪ್ಪುವ ಆತಂಕ

ಒಂದು ರಾಜ್ಯ, ಒಂದು ಘಟಕ ಪರಿಕಲ್ಪನೆ ಕಾರಣ
Last Updated 6 ಸೆಪ್ಟೆಂಬರ್ 2020, 1:05 IST
ಅಕ್ಷರ ಗಾತ್ರ

ಬೆಂಗಳೂರು: ಹಾಕಿ ಇಂಡಿಯಾದ ‘ಒಂದು ರಾಜ್ಯ, ಒಂದು ಘಟಕ’ ಪರಿಕಲ್ಪನೆಯಿಂದಾಗಿ ಒಂದಕ್ಕಿಂತ ಹೆಚ್ಚು ಹಾಕಿ ಸಂಸ್ಥೆಗಳು ಇರುವ ಕರ್ನಾಟಕದಂಥ ರಾಜ್ಯಗಳಲ್ಲಿ ಹೆಚ್ಚು ಆಟಗಾರರಿಗೆ ರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವ ಅವಕಾಶ ಕೈತಪ್ಪುವ ಆತಂಕ ಮೂಡಿದೆ.

ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಎಲ್ಲ ಕ್ರೀಡೆಗಳಲ್ಲೂ ಒಂದು ರಾಜ್ಯದಿಂದ ಒಂದೇ ಘಟಕಕ್ಕೆ ಅವಕಾಶ ನೀಡಲಾಗುವುದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಯಾ ಕ್ರೀಡಾ ಫೆಡರೇಷನ್‌ಗಳು ಅಥವಾ ಸಂಸ್ಥೆಗಳು ಮುಂದಾಗಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆ ಜನವರಿಯಲ್ಲಿ ತಾಕೀತು ಮಾಡಿದೆ. ಇದಕ್ಕೆ ಸ್ಪಂದಿಸಿರುವ ಹಾಕಿ ಇಂಡಿಯಾ, ಇನ್ನು ಮುಂದೆ ಒಂದೇ ಹಾಕಿ ಸಂಸ್ಥೆಯ ಅಡಿಯಲ್ಲಿ ರಾಜ್ಯ ತಂಡ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜುಲೈ ಒಂದರಂದು ಸೂಚಿಸಿದೆ.

ಒಂದಕ್ಕಿಂತ ಹೆಚ್ಚು ಘಟಕಗಳು ಇರುವ ರಾಜ್ಯಗಳಲ್ಲಿ ಈ ಆದೇಶ ಸಂಚಲನ ಉಂಟುಮಾಡಿದೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ತಲಾ ಮೂರು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ತಲಾ ಎರಡು ಸಂಸ್ಥೆಗಳು ಇವೆ. ಸ್ಪರ್ಧೆಯ ಗುಣಮಟ್ಟ ಹೆಚ್ಚಲು ‘ಒಂದು ರಾಜ್ಯ ಒಂದು ಘಟಕ’ ಸಹಕಾರಿ ಎಂದು ಹಾಕಿ ಇಂಡಿಯಾ ಹೇಳಿದೆ. ಆದರೆ ಎರಡು ಅಥವಾ ಮೂರು ಘಟಕಗಳು ಇರುವಲ್ಲಿಂದ ಒಂದೇ ತಂಡವನ್ನು ಕಳುಹಿಸಿದರೆ ಅನೇಕ ಪ್ರತಿಭೆಗಳಿಗೆ, ವಿಶೇಷವಾಗಿ ಗ್ರಾಮೀಣ ಮಟ್ಟದ ಆಟಗಾರರಿಗೆ ಅವಕಾಶ ಕೈತಪ್ಪಲಿದೆ ಎಂಬ ದೂರು ಕೇಳಿ ಬಂದಿದೆ.‌

ಕರ್ನಾಟಕದಲ್ಲಿ ಹಾಕಿ ಕರ್ನಾಟಕ, ಹಾಕಿ ಬೆಂಗಳೂರು ಮತ್ತು ಹಾಕಿ ಕೊಡಗು ಸಂಸ್ಥೆಗಳು ಈ ವರೆಗೆ ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದವು. ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಹಾಕಿ ಕರ್ನಾಟಕ ತಂಡಕ್ಕೆ ಮಾತ್ರ ಅವಕಾಶ.

‘ಹಾಕಿ ಇಂಡಿಯಾದಿಂದ ಪತ್ರ ಬಂದ ಕೂಡಲೇ ವಿಲೀನಕ್ಕೆ ಸಂಬಂಧಿಸಿ ಹಾಕಿ ಬೆಂಗಳೂರು ಮತ್ತು ಹಾಕಿ ಕೊಡಗು ಸಂಸ್ಥೆಗಳ ಜೊತೆ ಚರ್ಚೆಯಾಗಿದೆ. ಕೋವಿಡ್‌–19 ಹಾವಳಿಯಿಂದಾಗಿ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ವಿಲೀನಕ್ಕೆ ಯಾವ ಅಡ್ಡಿಯೂ ಇಲ್ಲ’ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ‘ಪ್ರಜಾವಾಣಿ‘ಗೆ ತಿಳಿಸಿದರು.

‘ವಿಲೀನಕ್ಕೆ ಅಭ್ಯಂತರವೇನೂ ಇಲ್ಲ. ಆದರೆ ಒಂದೇ ತಂಡವನ್ನು ಕಳುಹಿಸುವುದರಿಂದ ಹೆಚ್ಚಿನ ಪ್ರತಿಭೆಗಳು ರಾಷ್ಟ್ರೀಯ ಮಟ್ಟದ ಟೂರ್ನಿಗಳಿಂದ ದೂರ ಉಳಿಯುವ ಆತಂಕವಿದೆ. ಸಾಯ್, ಡಿವೈಇಎಸ್ ಮುಂತಾದ ಸಂಸ್ಥೆಗಳನ್ನು ಹೊರತುಪಡಿಸಿ ಇತರ ಆಟಗಾರರಿಗೆ ಅವಕಾಶಗಳು ಕಡಿಮೆಯಾಗುವ ಆತಂಕವಿದೆ. ಈ ಕುರಿತು ಇನ್ನೂ ಅಂತಿಮ ನಿರ್ಧಾರಗಳು ಆಗಲಿಲ್ಲ. ಏನೇ ತೀರ್ಮಾನವಾದರೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಹಾಕಿ ಬೆಂಗಳೂರು ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಹೇಳಿದರು.

ಅಕಾಡೆಮಿ ಆಗಲಿದೆಯೇ ಹಾಕಿ ಕೊಡಗು?

ಹಾಕಿ ಇಂಡಿಯಾದ ನಿರ್ಧಾರ ಹೊರಬೀಳುತ್ತಿದ್ದಂತೆ ಹಾಕಿ ಕೊಡಗು ಸಂಸ್ಥೆಯಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು ಸಂಸ್ಥೆಯನ್ನು ಅಕಾಡೆಮಿಯನ್ನಾಗಿ ಮಾಡಿ ಕನಿಷ್ಠ ಪಕ್ಷ ಜೂನಿಯರ್ ಮತ್ತು ಸಬ್‌ ಜೂನಿಯರ್ ವಿಭಾಗದಲ್ಲಾದರೂ ಆಟಗಾರರಿಗೆ ಅವಕಾಶ ಸಿಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.

‘ನಮ್ಮಲ್ಲಿ ಜೂನಿಯರ್ ಮತ್ತು ಸಬ್‌ ಜೂನಿಯರ್ ವಿಭಾಗದ 100 ಬಾಲಕರು ಮತ್ತು 45 ಬಾಲಕಿಯರು ಇದ್ದಾರೆ. ಒಂದೇ ತಂಡದ ಪರಿಕಲ್ಪನೆಯಡಿ ಈ ಪೈಕಿ ಹೆಚ್ಚಿನವರಿಗೆ ರಾಷ್ಟ್ರೀಯ ಟೂರ್ನಿಗಳಲ್ಲಿ ಅವಕಾಶ ಸಿಗಲಾರದು. ಅಕಾಡೆಮಿಯಾಗಿ ಪರಿವರ್ತಿಸಿದರೆ ಜೂನಿಯರ್ ಮತ್ತು ಸಬ್‌ ಜೂನಿಯರ್ ಮಟ್ಟದ ಕ್ರೀಡಾಪಟುಗಳ ಸ್ಪರ್ಧೆಗೆ ಅಡ್ಡಿ ಇಲ್ಲ. ಈ ಕುರಿತು ಹಾಕಿ ಇಂಡಿಯಾಗೆ ಪತ್ರ ಬರೆಯಲಾಗಿದೆ. ಮುಂದಿನ 10–15 ದಿನಗಳಲ್ಲಿ ಪೂರಕ ಉತ್ತರ ಬರುವ ನಿರೀಕ್ಷೆ ಇದೆ’ ಎಂದು ಹಾಕಿ ಕೊಡಗು ಕಾರ್ಯದರ್ಶಿ ಚೆಂಗಪ್ಪ ತಿಳಿಸಿದರು.

ಕೊಡಗಿನ ಗೋಣಿಕೊಪ್ಪದ ಅಶ್ವಿನಿ ನಾಚಪ್ಪ ಅವರ ಅಶ್ವಿನಿ ಅಕಾಡೆಮಿ ಮತ್ತು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿಗಳು ಈಗಾಗಲೇ ಹಾಕಿ ಇಂಡಿಯಾದ ಅಧಿಕೃತ ಅಕಾಡೆಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಆದ್ದರಿಂದ ಕೊಡಗು ಅಕಾಡೆಮಿ ಸ್ಥಾಪನೆಗೆ ಹಾಕಿ ಇಂಡಿಯಾ ಅವಕಾಶ ನೀಡುತ್ತದೆಯೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿರುವ ಅಂಶ.

ನ್ಯಾಯಾಲಯದ ಮೆಟ್ಟಿಲೇರಿರುವ ವಿದರ್ಭ ಸಂಸ್ಥೆ

ಮಹಾರಾಷ್ಟ್ರದ ವಿದರ್ಭ ಹಾಕಿ ಸಂಸ್ಥೆ ಈಗಾಗಲೇ ಈ ಕುರಿತು ಕಾನೂನು ಹೋರಾಟ ಆರಂಭಿಸಿದ್ದು ನಾಗಪುರ ನ್ಯಾಯಾಲಯವು ನೀಡುವ ತೀರ್ಪಿನ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಈ ಕುರಿತು ’ಪ್ರಜಾವಾಣಿ‘ ಜೊತೆ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಟಿ.ಎನ್.ಸಿದ್ರಾ ’ನಮ್ಮದು ತುಂಬ ಹಳೆಯ ಸಂಸ್ಥೆ. ಇಲ್ಲಿ ತುಂಬ ಆಸ್ತಿ ಇದೆ. ಹಾಕಿ ಇಂಡಿಯಾದ ಸೂಚನೆಯಿಂದ ಆತಂಕ ಮೂಡಿದೆ. ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ‘ ಎಂದು ಹೇಳಿದರು.


29 – ಹಾಕಿ ಇಂಡಿಯಾದ ಶಾಶ್ವತ ಸದಸ್ಯ ಸಂಸ್ಥೆಗಳು

28 – ಹಾಕಿ ಇಂಡಿಯಾದ ಸಹಸದಸ್ಯ ಸಂಸ್ಥೆಗಳು

33 – ಹಾಕಿ ಇಂಡಿಯಾದ ಅಧಿಕೃತ ಅಕಾಡೆಮಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT