ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಕಲಿಕೆ ನಿರತ ಹಾಕಿ ಆಟಗಾರರು

ಲಾಕ್‌ಡೌನ್; ಸಾಯ್‌ ಕೇಂದ್ರಗಳಲ್ಲಿ ಈಗ ಪುಸ್ತಕದ ಓದು, ಸಿನೆಮಾ ವೀಕ್ಷಣೆಯ ಭರಾಟೆ
Last Updated 24 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೆನಾಲ್ಟಿ ಶೂಟೌಟ್, ಗೋಲ್, ಪಾಸ್‌ಗಳ ಬಗ್ಗೆಯೇ ಸದಾ ಮಗ್ನರಾಗಿರುತ್ತಿದ್ದ ಹಾಕಿ ಆಟಗಾರರು ಈಗ ಹೊಸ ಹವ್ಯಾಸಗಳತ್ತ ವಾಲಿದ್ದಾರೆ.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ಕೇಂದ್ರದಲ್ಲಿ ‘ಲಾಕ್‌ಡೌನ್’ ಆಗಿರುವ ಭಾರತ ಪುರುಷ ಮತ್ತು ಮಹಿಳಾ ಹಾಕಿ ತಂಡದವರು ಈಗ ಇಂಗ್ಲಿಷ್‌ ಕಲಿಕೆ, ಪುಸ್ತಕಗಳ ಓದು ಮತ್ತು ತಮ್ಮ ನೆಚ್ಚಿನ ಚಲನಚಿತ್ರಗಳ ವೀಕ್ಷಣೆಯಲ್ಲಿ ಸಮಯ ದೂಡುತ್ತಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದಾಗಿ ಸಾಯ್‌ ಕೇಂದ್ರಗಳಿಂದ ಯಾರೂ ಹೊರಗೆ ಬರುವಂತಿಲ್ಲ. ಅದೇ ರೀತಿ ಅನುಮತಿಯಿಲ್ಲದೇ ಹೊರಗಿನವರು ಒಳಗೆ ಪ್ರವೇಶಿಸುವಂತಿಲ್ಲ. ಕಟ್ಟುನಿಟ್ಟಿನ ಬಿಗಿಬಂದೋಬಸ್ತ್ ಮಾಡಲಾಗಿದೆ. ಆದ್ದರಿಂದ ಆಟಗಾರರು ಕಾಲ ಕಳೆಯಲು ತಮ್ಮ ನೆಚ್ಚಿನ ಹವ್ಯಾಸಗಳತ್ತ ಮುಖಮಾಡಿದ್ದಾರೆ.

‘ನಾನು ಪುಸ್ತಕಪ್ರೇಮಿ. ಈ ಸಂದರ್ಭದಲ್ಲಿ ಡಾ ವಿಂಚಿ ಕೋಡ್ ಅವರ ಪುಸ್ತಕವನ್ನು ಓದಿದೆ. ಹೆಲೆನ್ ಕೆಲ್ಲರ್ ಜೀವನಚರಿತ್ರೆಯನ್ನೂ ಓದಿದೆ. ನನ್ನ ಹತ್ತಿರ ಇನ್ನೂ ಕೆಲವು ಉತ್ತಮ ಪುಸ್ತಕಗಳು ಇವೆ. ನಿರಂತರ ಅಭ್ಯಾಸವಿರುವಾಗ ಭಾನುವಾರ ಮತ್ತು ಬುಧವಾರ ಸಂಜೆಯ ಹೆಚ್ಚು ವಿಶ್ರಾಂತಿಯ ಸಮಯ ಸಿಗುತ್ತದೆ. ಆಗ ನಾವು ಫಿಟ್‌ನೆಸ್ ವ್ಯಾಯಾಮಗಳಿಗೆ ಒತ್ತು ನೀಡುತ್ತೇವೆ’ ಎಂದು ಭಾರತ ಹಾಕಿ ತಂಡದ ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹೇಳಿದ್ದಾರೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿರುವ ಎಲ್ಲ ಆಟಗಾರರಿಗೂ ತಮ್ಮ ಕುಟುಂಬದ ಕುರಿತ ಚಿಂತೆ ಕಾಡುತ್ತಿದೆ. ಅದಕ್ಕಾಗಿಯೇ ವಿಡಿಯೊ ಕರೆಗಳ ಮೂಲಕ ತಮ್ಮ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

‘ನನ್ನ ತಂದೆ 60 ವರ್ಷ ಮೇಲ್ಪಟ್ಟವರು. ನನಗೆ ಏಳು ವರ್ಷದ ಮಕ್ಕಳು ಇದ್ದಾರೆ. ಅವರೆಲ್ಲರಿಗೂ ಮನೆಯಿಂದ ಹೊರಗೆ ಕಾಲಿಡದಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ’ ಎಂದು ಕೇರಳದವರಾದ ಶ್ರೀಜೇಶ್ ಹೇಳುತ್ತಾರೆ.

ತಂಡದ ಫಾರ್ವರ್ಡ್ ಆಟಗಾರ ಮನದೀಪ್ ಸಿಂಗ್ ಮತ್ತು ಇನ್ನೂ ಕೆಲವು ಆಟಗಾರರು ಇಂಗ್ಲಿಷ್ ಕಲಿಕೆಯತ್ತ ಚಿತ್ತ ನೆಟ್ಟಿದ್ದಾರೆ.

‘ತಂಡದ ಎನಲೈಟಿಕಲ್ ಕೋಚ್ ಕ್ರಿಸ್ ಸಿರಿಲೊ ಅವರ ಪತ್ನಿ ಇಂಗ್ಲಿಷ್‌ ಭಾಷೆಯ ತರಗತಿಗಳನ್ನು ಆಯೋಜಿಸಿದ್ದಾರೆ. ಅವರಿಂದ ಇಂಗ್ಲಿಷ್ ಮಾತನಾಡುವ, ಬರೆಯುವ ಮತ್ತು ಓದುವುದನ್ನು ಕಲಿಯುತ್ತಿದ್ದೇವೆ. ಇದರಿಂದಾಗಿ ಉತ್ತಮ ಇಂಗ್ಲಿಷ್ ಕೃತಿಗಳನ್ನು ಓದಲು ಆರಂಭಿಸಿದ್ದೇನೆ’ ಎಂದು ಜಲಂಧರ್‌ನ ಮನದೀಪ್ ಹೇಳುತ್ತಾರೆ.

ಮಹಿಳಾ ತಂಡದ ಆಟಗಾರ್ತಿ ನವನೀತ್ ಕೌರ್ ಅವರು ಶಾಪಿಂಗ್ ಹೋಗುವುದನ್ನು ‘ಮಿಸ್‌’ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಪರ್ಯಾಯವಾಗಿ ಸಿನೆಮಾಗಳನ್ನು ನೋಡುತ್ತಿದ್ದಾರೆ.‘ನಾವು ರಜೆ ದಿನಗಳಲ್ಲಿ ಶಾಪಿಂಗ್ ಮತ್ತು ಸಿನೆಮಾಗಳಿಗೆ ಹೋಗುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಹೊರಗೆ ಹೋಗುವಂತಿಲ್ಲ. ಸುರಕ್ಷಾ ಕ್ರಮಗಳನ್ನು ಪಾಲಿಸುವುದು ನಮಗೇ ಒಳ್ಳೆಯದು. ಆದ್ದರಿಂದ ನಮ್ಮ ಕೇಂದ್ರದಲ್ಲಿರುವ ಸಭಾ ಕೊಠಡಿಯ್ಲಿಯೇ ಚಲನಚಿತ್ರಗಳನ್ನು ನೋಡುತ್ತಿದ್ದೇವೆ. ‘ಪಾಣಿಪತ್’, ‘ಪ್ಯಾರ್‌ ಕಾ ಪಂಚನಾಮಾ’ ಮತ್ತು ‘ವಾರ್’ ಸಿನೆಮಾಗಳನ್ನು ನೋಡಿದ್ದೇವೆ’ ಎನ್ನುತ್ತಾರೆ ನವನೀತ್.

‘ಸಾಯ್‌ ಕ್ಯಾಂಪಸ್ ತುಂಬಾ ಚೆಂದವಾಗಿದೆ ಮತ್ತು ನೈರ್ಮಲ್ಯವೂ ಇದೆ. ಆದ್ದರಿಂದ ನಾವು ಹೊರಗೆ ಹೋಗುವುದೇ ಇಲ್ಲ. ಸಾಮಾಜಿಕ ಅಂತರ ಪಾಲಿಸುತ್ತಿದ್ದೇವೆ. ತಂಡದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಸಣ್ಣಪುಟ್ಟ ಕ್ರಿಯೇಟಿವ್ ಗೇಮ್‌ಗಳನ್ನು ಆಡುತ್ತೇವೆ. ಮುಖ್ಯವಾಗಿ ಕೊರೊನಾದಿಂದ ದೂರವುಳಿಯಲು ಎಲ್ಲ ಕ್ರಮಗಳನ್ನೂ ಪಾಲಿಸುತ್ತಿದ್ದೇವೆ’ ಎಂದು ಮಹಿಳಾ ತಂಡದ ಗೋಲ್‌ಕೀಪರ್ ಸವಿತಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT