ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆಗೆ ಸುದೀರ್ಘ ಸಮಯ ಸಿಕ್ಕಿದೆ: ನೀರಜ್‌ ಚೋಪ್ರಾ

Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮುಂಬೈ: ‘ಒಲಿಂಪಿಕ್ಸ್‌ ಮುಂದೂಡಿದ್ದು ನನಗೆ ವರವಾಗಿ ಪರಿಣಮಿಸಿದೆ. ಟೋಕಿಯೊ ಕೂಟಕ್ಕೆ ಸಿದ್ಧತೆ ಕೈಗೊಳ್ಳಲು ಈಗ ಸುದೀರ್ಘ ಸಮಯ ಸಿಕ್ಕಿದೆ’ ಎಂದು ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಗುರುವಾರ ಹೇಳಿದ್ದಾರೆ.

ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ನೀರಜ್‌, ಟೋಕಿಯೊ ಕೂಟದಲ್ಲಿ ಪದಕ ಜಯಿಸುವ ಭಾರತದ ನೆಚ್ಚಿನ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ ಎನಿಸಿದ್ದಾರೆ.

ಬಲ ಮೊಣಕೈಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಕಾರಣ 22 ವರ್ಷ ವಯಸ್ಸಿನ ನೀರಜ್‌, 2019ರಲ್ಲಿ ಯಾವುದೇ ಸ್ಪರ್ಧೆಗಳಲ್ಲೂ ಭಾಗವಹಿಸಿರಲಿಲ್ಲ. ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಕೂಟದಲ್ಲಿ ಪಾಲ್ಗೊಂಡಿದ್ದ ಅವರು 87.86 ಮೀಟರ್ಸ್‌ ಸಾಮರ್ಥ್ಯ ತೋರಿ ಟೋಕಿಯೊಗೆ ರಹದಾರಿ ಪಡೆದಿದ್ದರು.

ಟರ್ಕಿಯಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಇತ್ತೀಚೆಗೆ ತವರಿಗೆ ಮರಳಿರುವ ಅವರು ಪಟಿಯಾಲದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಕೇಂದ್ರದಲ್ಲಿ ಸ್ವಯಂ ಪ್ರತ್ಯೇಕ ವಾಸದಲ್ಲಿದ್ದಾರೆ.

‘ಶಸ್ತ್ರಚಿಕಿತ್ಸೆಯ ನಂತರ ನಾನು ಶೇಕಡ 100ರಷ್ಟು ಫಿಟ್‌ ಆಗಿರಲಿಲ್ಲ. ಪುನಶ್ಚೇತನಾ ಕಾರ್ಯಕ್ರಮದಲ್ಲಿ ಹೆಚ್ಚು ತೊಡಗಿಕೊಂಡಿದ್ದರಿಂದ ತಾಂತ್ರಿಕ ಕೌಶಲ ಕಲಿಯುವತ್ತ ಗಮನ ನೀಡಲು ಆಗಿರಲಿಲ್ಲ. ಹೀಗಾಗಿ ಟೋಕಿಯೊ ಕೂಟಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳುವುದು ಅಸಾಧ್ಯವೆನಿಸಿತ್ತು. ನನ್ನ ತಪ್ಪುಗಳನ್ನು ಗುರುತಿಸಿ ಅವುಗಳನ್ನು ತಿದ್ದಿಕೊಳ್ಳಲು ನನಗೀಗ ಸಮಯ ಸಿಕ್ಕಿದೆ’ ಎಂದು ನೀರಜ್‌ ಹೇಳಿದ್ದಾರೆ.

‘ಕೊರೊನಾ ಬಿಕ್ಕಟ್ಟು ಉದ್ಭವಿಸಿದ್ದರಿಂದ ಟೋಕಿಯೊ ಕೂಟವನ್ನು ಮುಂದೂಡುವುದು ಅನಿವಾರ್ಯ ಎಂಬುದನ್ನು ಮೊದಲೇ ಊಹಿಸಿದ್ದೆ. ಸದ್ಯದ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್‌ ಆಯೋಜಿಸಿದ್ದರೆ ಅಥ್ಲೀಟ್‌ಗಳಲ್ಲಿ ಭಯದ ವಾತಾವರಣ ನೆಲೆಸುತ್ತಿತ್ತು. ಆತಂಕದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗುತ್ತಿತ್ತು’ ಎಂದೂ ಅವರು ನುಡಿದಿದ್ದಾರೆ.

‘ಭಾರತದ ಜನ ನನ್ನಿಂದ ಒಲಿಂಪಿಕ್ಸ್‌ ಪದಕ ನಿರೀಕ್ಷಿಸಿದರೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಇದರಿಂದ ನನ್ನ ಮೇಲೆ ಒತ್ತಡವೇನೂ ಬೀಳುವುದಿಲ್ಲ. ಬದಲಾಗಿ ಜವಾಬ್ದಾರಿ ಹೆಚ್ಚುತ್ತದೆ. ಇನ್ನಷ್ಟು ಕಠಿಣ ಅಭ್ಯಾಸ ನಡೆಸಲು ಪ್ರೇರಣೆಯಾಗುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT