Paralympics ಬ್ಯಾಡ್ಮಿಂಟನ್: ಐಎಎಸ್ ಅಧಿಕಾರಿ, ಕನ್ನಡಿಗ ಸುಹಾಸ್‌ಗೆ ಬೆಳ್ಳಿ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪುರುಷರ ಬ್ಯಾಡ್ಮಿಂಟನ್ (ಎಸ್‌ಎಲ್–4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್ ಮಜೂರ್ ಎದುರು ಭಾರತದ ಸುಹಾಸ್ ಯತಿರಾಜ್ ಸೋಲು ಅನುಭವಿಸಿದರು. ಈ ಮೂಲಕ ಸುಹಾಸ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಪ್ರಸ್ತುತ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ಕನ್ನಡಿಗ ಸುಹಾಸ್ ಯತಿರಾಜ್, ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾದರು. ಇದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 18ನೇ ಪದಕವಾಗಿದೆ.
ಫ್ರಾನ್ಸ್‌ನ ಮಜೂರ್ ಎದುರು ಸುಹಾಸ್ 21-15, 17-21, 15-21 ಅಂತರದಲ್ಲಿ ಸೋಲು ಕಂಡರು.
ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಇಂಡೋನೇಷ್ಯಾದ ಸತ್ಯವಾನ್ ಫ್ರೆಡಿ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಎಸ್‌ಎಲ್–4 ವಿಭಾಗದಲ್ಲಿ ಸುಹಾಸ್ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಸುಹಾಸ್ ಫೈನಲ್ ಸೇರಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದರು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್; ಬ್ಯಾಡ್ಮಿಂಟನ್‌ನಲ್ಲೂ ಸೈ!
ಹಾಸನದಲ್ಲಿ ಜನಿಸಿ ಶಿವಮೊಗ್ಗದಲ್ಲಿ ಬೆಳೆದ ಸುಹಾಸ್ ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿರುವ ಎನ್‌ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿದ್ದಾರೆ. ಈಗ ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿ. ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಅವರು ಆರು ಜಿಲ್ಲೆಗಳ ಡಿಎಂ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ಆಗಿ ಸೇವೆ ಸಲ್ಲಿಸಿದ್ದಾರೆ.
Inspiring IAS officer Suhas Yathiraj has made India extremely proud at #Tokyo2020 #Paralympics
Congratulations Suhas Yathiraj on winning spectacular silver medal in the Men’s Badminton Singles SL4! #Praise4Para #Cheer4India 🇮🇳 pic.twitter.com/QhnJesh9tD— Kiren Rijiju (@KirenRijiju) September 5, 2021
2016ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಸುಹಾಸ್ ಯತಿರಾಜ್ ಸೇವೆಯಲ್ಲಿರುವಾಗ ಅಂತರರಾಷ್ಟ್ರೀಯ ಕ್ರೀಡಾಕೂಟವೊಂದರಲ್ಲಿ ಪದಕ ಗಳಿಸಿದ ಭಾರತದ ಮೊದಲ ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದರು.
ಇದನ್ನೂ ಓದಿ: Paralympics: ಮನೀಷ್–ಪ್ರಮೋದ್ ಚಿನ್ನದ ಆಮೋದ
ಎರಡು ವರ್ಷಗಳ ನಂತರ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗಳಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಒಟ್ಟು ನಾಲ್ಕು ಚಿನ್ನ, ಐದು ಬೆಳ್ಳಿ, ಎಂಟು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.