ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಅಥ್ಲೆಟಿಕ್ ಸೆಲೊಮನ್‌ಗೆ ಚಿನ್ನ, ಭಾರತಕ್ಕೆ ಮೊದಲ ದಿನವೇ ನಿರಾಸೆ

Last Updated 30 ಜುಲೈ 2021, 19:31 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಮೊದಲ ಚಿನ್ನ ಇಥಿಯೋಪಿಯಾದ ಸೆಲೊಮನ್ ಬರೇಗ ಕೊರಳನ್ನು ಅಲಂಕರಿಸಿತು. ಶುಕ್ರವಾರ ಸಂಜೆ ನಡೆದ ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಅವರು ಉಗಾಂಡದ ಚೆಪ್ಟೆಗಿ ಜೋಶುವಾ ಮತ್ತು ಕಿಪ್ಲಿಮೊ ಜೇಕಬ್ ಅವರನ್ನು ಹಿಂದಿಕ್ಕಿ ಮೊದಲಿಗರಾದರು. ಚೆಪ್ಟೆಗಿ ಹಾಗೂ ಕಿಪ್ಲಿಮೊ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ಮೂವರೂ ಓಟಗಾರರ ನಡುವೆ ಆರಂಭದಿಂದಲೇ ಭಾರಿ ಪೈಪೋಟಿ ಇತ್ತು. ಕೊನೆಯ ಲ್ಯಾಪ್‌ನಲ್ಲಿ ಸ್ಪ್ರಿಂಟ್ ವೇಗವನ್ನು ಹೆಚ್ಚಿಸಿಕೊಂಡ ಸೆಲೊಮನ್ ಬರೇಗ 27 ನಿಮಿಷ 43.22 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಚೆಪ್ಟೆಗಿ ಮತ್ತು ಕಿಪ್ಲಿಮೊ ಗುರಿ ತಲುಪಲು ಕ್ರಮವಾಗಿ 27 ನಿಮಿಷ 43.63 ಸೆಕೆಂಡು ಮತ್ತು 27 ನಿಮಿಷ 43.88 ಸೆಕೆಂಡು ತೆಗೆದುಕೊಂಡರು.

ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸೇರ್ಪಡೆಗೊಳಿಸಿರುವ 4x400 ಮಿಶ್ರ ರಿಲೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ಅಮೆರಿಕ ಆಘಾತ ಅನುಭವಿಸಿತು. ಹೀಟ್ಸ್‌ನಲ್ಲಿ ಪೋಲೆಂಡ್‌ ಅಗ್ರ ಸ್ಥಾನ ಗಳಿಸಿದರೆ ಅಮೆರಿಕ ಅನರ್ಹಗೊಂಡಿತು. ಎಲಿಜಾ ಗಾಡ್ವಿನ್, ಲೀನಾ ಇರ್ಬಿ, ಟೇಲರ್ ಮ್ಯಾನ್ಸನ್ ಮತ್ತು ಬ್ರೈಸ್ ಡೆಡ್ಮಾನ್‌ ಅವರನ್ನೊಳಗೊಂಡ ಅಮೆರಿಕ ತಂಡ ಹೀಟ್ಸ್‌ನಲ್ಲಿ ಮೊದಲ ಸ್ಥಾನ ಗಳಿಸಿತ್ತು. ಆದರೆ ಬ್ಯಾಟನ್ ಹಸ್ತಾಂತರಿಸುವಾಗ ನಿಯಮ ಉಲ್ಲಂಘಿಸಿದ್ದರಿಂದ ತಂಡವನ್ನು ಅನರ್ಹಗೊಳಿಸಲಾಯಿತು.

ಭಾರತಕ್ಕೆ ಮೊದಲ ದಿನವೇ ನಿರಾಸೆ

3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಬ್ಲೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿದ್ದು ಬಿಟ್ಟರೆ ಮೊದಲ ದಿನ ಭಾರತದ ಅಥ್ಲೀಟ್‌ಗಳು ನಿರಾಸೆ ಅನುಭವಿಸಿದರು. ದಾಖಲೆ ಬರೆದರೂ ಫೈನಲ್ ಪ್ರವೇಶಿಸಲು ಸಬ್ಲೆ ವಿಫಲರಾದರು. ಸ್ಪ್ರಿಂಟರ್‌ ದ್ಯುತಿ ಚಾಂದ್ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗದೆ ವಾಪಸಾದರು.

ಪುರುಷರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಎಂ.ಪಿ.ಜಬೀರ್ ವೈಫಲ್ಯ ಕಂಡರೆ 4x400 ಮೀಟರ್ಸ್ ರಿಲೇಯ ಎರಡನೇ ಹೀಟ್ಸ್‌ನಲ್ಲಿ ಭಾರತ ತಂಡ ಕೊನೆಯ ಸ್ಥಾನ ಗಳಿಸಿ ಹೊರಬಿದ್ದಿತು.

ಎರಡನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ಸಬ್ಲೆ 8 ನಿಮಿಷ18.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಏಳನೆಯವರಾದರು. ಮಾರ್ಚ್‌ನಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಅವರು8 ನಿಮಿಷ 20.20 ಸೆಕೆಂಡುಗಳ ಸಾಧನೆ ಮಾಡಿದ್ದರು.

11.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ಬರೆದಿದ್ದ ದ್ಯುತಿ ಚಾಂದ್ ಹೀಟ್ಸ್‌ನಲ್ಲಿ 11.54 ಸೆಕೆಂಡುಗಳಲ್ಲಿ ಗುರಿ ತಲುಪಿ ಏಳನೇ ಹೀಟ್ಸ್‌ನಲ್ಲಿ ಐದನೇ ಸ್ಥಾನ ಹಾಗೂ ಒಟ್ಟಾರೆ 45ನೇ ಸ್ಥಾನಕ್ಕೆ ಕುಸಿದರು. ಜಬೀರ್ 50.77 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಐದನೇ ಹೀಟ್ಸ್‌ನಲ್ಲಿ ಕೊನೆಯವರಾದರು. ಮಿಶ್ರ ರಿಲೇಯಲ್ಲಿ ಮುಹಮ್ಮದ್ ಅನಾಸ್ ಯಾಹಿಯಾ, ರೇವತಿ ವೀರಮಣಿ, ಶುಭಾ ವೆಂಕಟೇಶ್ ಮತ್ತು ಆರೋಕ್ಯ ರಾಜೀವ್ 3 ನಿಮಿಷ 19.93 ಸೆಕೆಂಡುಗಳಲ್ಲಿ ಗುರಿ ತಲುಪಿ ಈ ಋತುವಿನ ಶ್ರೇಷ್ಠ ಸಾಧನೆ ಮಾಡಿದರು. ಆದರೆ ಕೊನೆಯ ಸ್ಥಾನದಲ್ಲಿ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT