ಗುರುವಾರ , ಜೂನ್ 17, 2021
29 °C

ಕೋವಿಡ್-19 ಕಾಲಘಟ್ಟದಲ್ಲಿ ಈಸಿ ಜೈಸಬೇಕಾದ ಸವಾಲು

ವಿಕ್ರಂ ಕಾಂತಿಕೆರೆ   Updated:

ಅಕ್ಷರ ಗಾತ್ರ : | |

prajavani

ನೇರ ಸಂಪರ್ಕ ಸಾಧ್ಯತೆ ಇರುವ ಈಜು ಅಭ್ಯಾಸಕ್ಕೆ ಇನ್ನೂ ಹಸಿರು ನಿಶಾನೆ ಸಿಗಲಿಲ್ಲ. ನೀರಿನಲ್ಲಿ ವೈರಾಣು ಹರಡುವ ಸಾಧ್ಯತೆ ಹೆಚ್ಚು ಎಂಬುದು ಈಜಿಗೆ ಅವಕಾಶ ಕೊಡದೇ ಇರುವುದಕ್ಕೆ ಕಾರಣ. ಸರಿಯಾದ ನಿರ್ವಹಣೆಯಿಂದ ವೈರಾಣು ಹರಡುವುದನ್ನು ತಡೆಯಬಹುದು ಎಂಬುದು ಈಜಿನಲ್ಲಿ ತೊಡಗಿಸಿಕೊಂಡಿರುವವರ ವಾದ. ಹಾಗೇನಾದರೂ ಅವಕಾಶ ಸಿಕ್ಕಿದರೂ ಈಜುಪಟುಗಳ ಮುಂದಿನ ಹಾದಿ ಸವಾಲಿನಿಂದ ಕೂಡಿದೆ.

ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಮನೆ ಅಥವಾ ತರಬೇತಿ ಕೇಂದ್ರಗಳಲ್ಲಿ ‘ಬಂಧನ’ಕ್ಕೆ ಒಳಗಾಗಿದ್ದ ಕ್ರೀಡಾಪಟುಗಳು ಮೇ ಮೂರನೇ ವಾರದಲ್ಲಿ ನಿಟ್ಟುಸಿರು ಬಿಟ್ಟಿದ್ದರು. ಷರತ್ತುಗಳಿಗೆ ಬದ್ಧರಾಗಿ ಕ್ರೀಡಾಂಗಣಗಳ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕೆ ಕಾರಣ. ಆದರೆ ಹೆಚ್ಚಿನ ಕ್ರೀಡೆಗಳಲ್ಲಿ ಚಟುವಟಿಕೆ ಆರಂಭವಾದರೂ ನೇರ ಸಂಪರ್ಕದ ಸಾಧ್ಯತೆಗಳಿರುವ ಕುಸ್ತಿ, ಕಬಡ್ಡಿ ಮತ್ತು ಈಜು ಮಾತ್ರ ಚುರುಕು ಪಡೆದುಕೊಳ್ಳಲಿಲ್ಲ.

ಈ ಪೈಕಿ ಈಜಿನಲ್ಲಿ ತೊಡಗಿ ಸಿಕೊಂಡಿರುವವರು ಮತ್ತು ಸರ್ಕಾರದ ನಡುವೆ ಹಗ್ಗ–ಜಗ್ಗಾಟ ಜೋರಾಗಿದೆ. ಅಭ್ಯಾಸ ಆರಂಭಿಸಲು ಅನುಮತಿಗಾಗಿ ಭಾರತ ಈಜು ಫೆಡರೇಷನ್ (ಎಸ್‌ಎಫ್ಐ‌) ಕೇಂದ್ರ ಸರ್ಕಾರವನ್ನೂ ಕರ್ನಾಟಕ ಈಜು ಸಂಸ್ಥೆ (ಕೆಎಸ್‌ಎ) ರಾಜ್ಯ ಸಂಸ್ಥೆಯನ್ನೂ ಒತ್ತಾಯಿಸುತ್ತಲೇ ಇದೆ.

ಈಜು ಅಭ್ಯಾಸದ ಸಂದರ್ಭದಲ್ಲಿ ನೇರ ಸಂಪರ್ಕದ ಸಾಧ್ಯತೆಗಳು ಇಲ್ಲ ಎಂಬುದು ಅವರ ವಾದವಾಗಿದ್ದರೆ, ನೀರಿನಲ್ಲಿ ವೈರಾಣು ಹರಡುವ ಸಾಧ್ಯತೆಗಳು ಇರುವುದರಿಂದ ಅವಕಾಶ ನೀಡುವುದು ಅಪಾಯ ಎಂಬುದು ಸರ್ಕಾರದ ನಿಲುವು. ಒಲಿಂಪಿಕ್ಸ್‌ಗೆ ‘ಬಿ’ ಅರ್ಹತೆ ಗಳಿಸಿರುವ ಶ್ರೀಹರಿ ನಟರಾಜ್, ವೀರ್‌ ಧವಳ್‌ ಖಾಡೆ ಮತ್ತು ಕುಶಾಗ್ರ ರಾವತ್‌ ಅವರಿಗಾದರೂ ಅಭ್ಯಾಸಕ್ಕೆ ಅವಕಾಶ ನೀಡಬೇಕು ಎಂದು ಎಸ್‌ಎಫ್ಐ ಆರಂಭದಿಂದಲೇ ಕೋರುತ್ತಿದೆ. ರಾಜ್ಯದಲ್ಲೂ ಸ್ಪರ್ಧಾತ್ಮಕ ಈಜಿನಲ್ಲಿ ಪಾಲ್ಗೊಳ್ಳುವವರಿಗೆ ಅವಕಾಶ ನೀಡದಿದ್ದರೆ ಅವರ ಭವಿಷ್ಯದ ಮೇಲೆ ಕತ್ತಲೆ ಆವರಿಸಲಿದೆ ಎಂಬುದು ಕೆಎಸ್‌ಎ ಆತಂಕ.

ಈಜು ಅಭ್ಯಾಸ ಆರಂಭಿಸುವವರಿಗೆ ಫಿನಾ (ಅಂತರರಾಷ್ಟ್ರೀಯ ಈಜು ಫೆಡರೇಷನ್) ಕೆಲವು ಷರತ್ತುಗಳನ್ನು ವಿಧಿಸಿದೆ. ಯು.ಎಸ್.ಮಾಸ್ಟರ್ಸ್ ಸ್ವಿಮ್ಮಿಂಗ್ ಸಂಸ್ಥೆಯಂತೂ ಅಧ್ಯಯನ ನಡೆಸಿ ಈಜುಕೊಳಗಳಲ್ಲಿ ಅಂತರ ಕಾಯ್ದುಕೊಳ್ಳಲು ನೆರವಾಗುವ ಮಾದರಿಗಳನ್ನು ಜಗತ್ತಿನ ಮುಂದಿಟ್ಟಿದೆ. ಕ್ಲೋರಿನ್ ಮತ್ತು ಬ್ರೊಮೈನ್ ಹಾಕುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ನಿಷ್ಕ್ರಿಯವಾಗುತ್ತವೆ. ಆದ್ದರಿಂದ ಈಜುಕೊಳಗಳ ನೀರು ರೋಗವಾಹಕವಲ್ಲ ಎಂದು ಹೇಳಿದೆ. 

ನೀರಿನ ಮೂಲಕ ವೈರಸ್ ಹರಡಿರುವ ಉದಾಹರಣೆ ಇಲ್ಲ ಎಂದು ಯು.ಎಸ್.ಮಾಸ್ಟರ್ಸ್ ಸ್ವಿಮ್ಮಿಂಗ್ ಸಂಸ್ಥೆ ಹೇಳಿದ್ದರೆ ಸಾಮಾನ್ಯವಾಗಿ ಬಳಸುವುದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್ ಬಳಸಿದರೆ ವೈರಸ್ ಕಾಟವನ್ನು ತಡೆಯಬಹುದು ಎಂದು ಇಂಗ್ಲೆಂಡ್ ಪೂಲ್ ವಾಟರ್ ಟ್ರೀಟ್‌ಮೆಂಟ್ ಆ್ಯಂಡ್ ಅಡ್ವೈಸರಿ ಗ್ರೂಪ್ ಅಭಯ ನೀಡಿದೆ. 


ನೇರ ಸಂಪರ್ಕದ ಆರ್ಟಿಸ್ಟಿಕ್ ಸ್ವಿಮ್‌ ಸ್ಪರ್ಧೆಗಳಿಗೆ ಕೊರೊನಾ ವೈರಾಣು ಆತಂಕ ಒಡ್ಡಿದೆ

ಸವಾಲುಗಳು ಏನು?

ಒಂದು ವೇಳೆ ಸರ್ಕಾರ ಈಜು ಕ್ರೀಡೆಗೆ ಅವಕಾಶ ನೀಡಿದರೂ ಈಜುಪಟುಗಳು ಮತ್ತು ಈಜು ಸಂಸ್ಥೆಗಳ ಮುಂದೆ ದೊಡ್ಡ ಸವಾಲು ಇದೆ. ಅಂತರವನ್ನು ಕಾಯ್ದುಕೊಂಡು ಅಭ್ಯಾಸ ಮಾಡಲು ಕ್ರೀಡಾಪಟುಗಳನ್ನು ಅಣಿಗೊಳಿಸುವುದು ಇದರಲ್ಲಿ ಪ್ರಮುಖ. ಈಜುಕೊಳಗಳನ್ನು ವೈರಾಣುಮುಕ್ತಗೊಳಿಸುವ ಜವಾಬ್ದಾರಿಯು ಕೊಳದ ನಿರ್ವಹಣೆಯ ಹೊಣೆ ಹೊತ್ತವರ ಮೇಲಿರುತ್ತದೆ. ಶುಚಿತ್ವ ಪಾಲಿಸುವುದು, ನೀರಿನಲ್ಲೂ ಅಂತರ ಕಾಯ್ದುಕೊಳ್ಳುವುದು, ಅಭ್ಯಾಸ ಮುಗಿದ ತಕ್ಷಣ ಮನೆಯ ಹಾದಿ ಹಿಡಿಯುವುದು, ಬಟ್ಟೆ ಬದಲಾಯಿಸಲು ಮತ್ತು ಸ್ನಾನ ಮಾಡಲು ಮನೆಯನ್ನೇ ಆಶ್ರಯಿಸುವುದು ಇತ್ಯಾದಿ ಸಲಹೆಗಳನ್ನು ಫಿನಾ ನೀಡಿದೆ. 

ವೈಯಕ್ತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗಿಂತಲೂ ವಾಟರ್ ಪೋಲೊ, ಕಲಾತ್ಮಕ ಈಜು  ಮುಂತಾದ ಗುಂಪು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಮುಂದಿನ ದಿನಗಳು ಕಠಿಣ. ಇವರು ಅಂತರ ಕಾಯ್ದುಕೊಂಡು ಅಭ್ಯಾಸ ಮಾಡುವುದಾಗಲಿ, ಸ್ಪರ್ಧಿಸುವುದಾಗಲಿ ಹೇಗೆ ಎಂಬ ಪ್ರಶ್ನೆಯೂ ಕಾಡತೊಡಗಿದೆ.

ತರಬೇತುದಾರರಿಗೆ ಆತಂಕ

ಸ್ಪರ್ಧಾತ್ಮಕ ಈಜಿಗೆ ಸಂಬಂಧಿಸಿ ಅಭ್ಯಾಸ ಆರಂಭಗೊಂಡರೂ ವೃತ್ತಿಪರ ಈಜು ತರಬೇತಿ ನೀಡುವವರು ‘ಕಾದು ನೋಡುವ ತಂತ್ರ’ಕ್ಕೆ ಮೊರೆಹೋಗಲಿದ್ದಾರೆ. ಆತುರ ಮಾಡಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬುದು ಬಹುತೇಕರ ಅಭಿಪ್ರಾಯ. 
‘ತರಬೇತಿ ನಿಲ್ಲಿಸಿರುವ ಕಾರಣ ಈಗಾಗಲೇ ತುಂಬಾ ನಷ್ಟ ಆಗಿದೆ. ಇದಕ್ಕೆ ಯಾರನ್ನೂ ದೂರಲು ಆಗುವುದಿಲ್ಲ. ಆದರೆ ಮುಂದಿನ ಹೆಜ್ಜೆ ಇಡುವಾಗ ಎಚ್ಚರ ಇರಬೇಕು. ಎಲ್ಲವೂ ನಿಯಂತ್ರಣಕ್ಕೆ ಬರುವವರೆಗೆ ತಾಳ್ಮೆಯಿಂದಿರುವುದು ಒಳಿತು. ಇನ್ನೂ ಒಂದೆರಡು ತಿಂಗಳು ಕಾದುನೋಡುವುದೇ ಸೂಕ್ತ’ ಎಂಬುದು ಕೆಲವು ಕೋಚ್‌ಗಳ ಅಭಿಮತ.

‘ಕೊಳಕ್ಕೆ ಧುಮುಕದೆ ಏನೂ ಹೇಳಲಾಗದು’


ಗೋಪಾಲ ಹೊಸೂರು

ಸದ್ಯ ಸ್ಪರ್ಧಾತ್ಮಕ ಈಜಿಗೆ ಮಾತ್ರ ಅವಕಾಶ ನೀಡುವಂತೆ ಕೋರಲಾಗಿದೆ. ಮಾರ್ಗಸೂಚಿಗಳನ್ನು ಪಾಲಿಸಲು ಸಿದ್ಧರಿದ್ದೇವೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯಗತ ಆಗುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ನೀರಿಗೆ ‘ಧುಮುಕಿದ’ ನಂತರವೇ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಯುವುದು. ಸವಾಲುಗಳಿವೆ ನಿಜ; ಅವುಗಳನ್ನು ಮೀರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುಂಪುಗುಂಪಾಗಿ ಬರಬಾರದು ಎಂದು ಸೂಚಿಸಲಾಗಿದ್ದು ಆರೋಗ್ಯ ತಪಾಸಣೆ, ಪ್ರತಿ ತಂಡದ ಅಭ್ಯಾಸ ಮುಗಿದ ನಂತರ ಕೊಳವನ್ನು ಶುಚಿಗೊಳಿಸುವುದು ಮುಂತಾದ ಎಲ್ಲ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದೇವೆ. ಈಜು ಆರಂಭಿಸುವುದಕ್ಕೇ ಅವಕಾಶ ಸಿಗದ್ದರಿಂದ ಯೋಜನೆಗಳೆಲ್ಲವೂ ಮನಸ್ಸಿನಲ್ಲೇ ಉಳಿದಿವೆ.

- ಗೋಪಾಲ ಹೊಸೂರು, ರಾಜ್ಯ ಈಜು ಸಂಸ್ಥೆ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು