ಶನಿವಾರ, ಸೆಪ್ಟೆಂಬರ್ 18, 2021
22 °C

Tokyo Olympics: ಹರ್ಡಲ್ಸ್‌ನಲ್ಲಿ ಜಮೈಕಾ ಪಾರುಪತ್ಯ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಬಹಾಮದ ಸ್ಟೀವನ್ ಗಾರ್ಡಿನರ್ ಅವರು ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದ ಚಿನ್ನದ ಪದಕ ಗೆದ್ದುಕೊಂಡರು. ಪುರುಷರ 110 ಮೀಟರ್ಸ್ ಹರ್ಡಲ್ಸ್‌ನಲ್ಲಿ ಜಮೈಕಾ ಪಾರಮ್ಯ ಮೆರೆದರೆ ಶಾಟ್‌ಪಟ್‌ನಲ್ಲಿ ಅಮೆರಿಕ ಆಧಿಪತ್ಯ ಸ್ಥಾಪಿಸಿತು. 

ಸ್ಟೀವನ್ 43.85 ಸೆಕೆಂಡುಗಳೊಂದಿಗೆ ರಾಷ್ಟ್ರೀಯ ದಾಖಲೆ ಮುರಿದರೆ ಕೊಲಂಬಿಯಾದ ಜೋಸ್ ಆ್ಯಂಟನಿ (44.08) ಮತ್ತು ಗ್ರೆನಾಡದ ಕಿರಾನಿ ಜೇಮ್ಸ್ (44.19) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು.  110 ಮೀಟರ್ಸ್ ಹರ್ಡಲ್ಸ್‌ನ ಚಿನ್ನ ಮತ್ತು ಕಂಚಿನ ಪದಕ ಜಮೈಕಾ ಪಾಲಾಯಿತು. ಹನ್ಸ್‌ಲೆ ಪಾರ್ಚ್‌ಮೆಂಟ್ (13.04 ಸೆ) ಚಿನ್ನ ಗಳಿಸಿದರೆ ಅಮೆರಿಕದ ಗ್ರ್ಯಾಂಟ್ ಹೊಲೊವೆ (13.09) ಬೆಳ್ಳಿ ಮತ್ತು ಜಮೈಕಾದ ರೊನಾಲ್ಡ್‌ ಲೆವಿ (13.10) ಕಂಚು ಗಳಿಸಿದರು.

ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪೋರ್ಚುಗಲ್‌ನ ಪೆಡ್ರೊ ಪಿಚಾರ್ಡೊ (17.98ಮೀ), ಚೀನಾದ ಯಮಿಂಗ್ ಜೂ (17.57) ಮತ್ತು ಬುರ್ಕಿನಾ ಫಾಸೊದ ಫ್ಯಾಬ್ರಿಸ್ (17.47) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗಳಿಸಿದರು. ಅಮೆರಿಕದ ರಯಾನ್ ಕ್ರಾಸನ್‌ (23.30 ಮೀ) ಮತ್ತು ಜೋ ಕೊವಾಕ್ಸ್ (22.65) ಶಾಟ್‌ಪಟ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿದರೆ ನ್ಯೂಜಿಲೆಂಡ್‌ನ ಥಾಮಸ್ ವಾಲ್ಶ್‌ (22.47) ಕಂಚು ಗೆದ್ದರು. 

ಮಹಿಳೆಯರ ಪೋಲ್‌ವಾಲ್ಟ್‌ನಲ್ಲೂ ಅಮೆರಿಕ ಚಿನ್ನ ಗಳಿಸಿತು. ಕ್ಯಾತಿ ನಜಿಯೊಟಿ 4.90 ಮೀಟರ್‌ ಸಾಧನೆಯೊಂದಿಗೆ ಚಿನ್ನ ಗಳಿಸಿದರು. ರಷ್ಯಾದ ಆ್ಯಂಜೆಲಿಕಾ (4.85) ಮತ್ತು ಬ್ರಿಟನ್‌ನ ಹೋಲಿ ಬ್ರಾಡ್‌ಶಾ (4.85) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗಳಿಸಿದರು.

ಕಿಪ್ಸಾಂಗ್‌ ವಿಶ್ವ ದಾಖಲೆ

ಕೆನ್ಯಾದ ಅಬೆಲ್ ಕಿಪ್ಸಾಂಗ್ ಪುರುಷರ 1500 ಮೀಟರ್ಸ್ ಓಟದಲ್ಲಿ ಒಲಿಂಪಿಕ್ ದಾಖಲೆ ಮುರಿದು ಸೆಮಿಫೈನಲ್ ‍ಪ್ರವೇಶಿಸಿದರು. 3 ನಿಮಿಷ 31.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ತಮ್ಮದೇ ದೇಶದ ನೊಹ್‌ ಗೆನಿ ಅವರ ದಾಖಲೆಯನ್ನು ಮುರಿದರು. ನೊಹ್‌ 3 ನಿಮಿಷ 32.07 ಸೆಕೆಂಡುಗಳಲ್ಲಿ ದಾಖಲೆ ಗುರಿ ತಲುಪಿದ್ದರು.

ನಾರ್ವೆಯ ಇಂಗ್‌ಬ್ರಿಂಗ್‌ಸ್ಟೆನ್ ಅವರನ್ನು ಹಿಂದಿಕ್ಕಿ ಕಿಪ್ಸಾಂಗ್ ಮೊದಲಿಗರಾದರು. ಬ್ರಿಟನ್‌ನ ಜೇಕ್ ವಿಂಗ್ಟ್‌ಮ್ಯಾನ್ ಈ ವರ್ಷದ ಗರಿಷ್ಠ ಸಾಧನೆಯೊಂದಿಗೆ (3:33.48) ಫೈನಲ್ ಪ್ರವೇಶಿಸಿದರು. ಪದಕದ ಸುತ್ತಿನ ಸ್ಪರ್ಧೆ ಶನಿವಾರ ನಡೆಯಲಿದೆ.

ಇಟಲಿಯ ಮಸಿಮೊ ಸ್ಟ್ಯಾನೊ ಅವರು 20 ಮೀಟರ್ಸ್ ವೇಗನಡಿಗೆಯ ಚಿನ್ನ ಗೆದ್ದರು. 1 ತಾಸು 21 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಜಪಾನ್‌ನ ಇಡೆಕಿ ಕೋಕಿ (1:21:28) ಮತ್ತು ಯಾಮನಿಶಿ ತೊಶಿಕಜು (1:21:46) ಅವರನ್ನು ಹಿಂದಿಕ್ಕಿದರು.

ಭಾರತದ ಅಥ್ಲೀಟ್‌ಗಳಿಗೆ ನಿರಾಸೆ

ಭಾರತದ ಸಂದೀಪ್ ಕುಮಾರ್ 20 ಮೀಟರ್ಸ್ ವೇಗನಡಿಗೆಯಲ್ಲಿ ಉತ್ತಮ ಆರಂಭ ಕಂಡರೂ ಕೊನೆಯಲ್ಲಿ ನಿರಾಸೆ ಅನುಭವಿಸಿದರು. ಅರ್ಧ ಹಾದಿಯ ವರೆಗೆ ಎರಡನೇ ಸ್ಥಾನದಲ್ಲಿ ಮುನ್ನಡೆದ ಅವರು 23ನೇ ಸ್ಥಾನಕ್ಕೆ ಕುಸಿದರು. 1 ತಾಸು 20 ನಿಮಿಷ 16 ಸೆಕೆಂಡುಗಳಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದ ಅವರು ಇಲ್ಲಿ ಒಂದು ತಾಸು 25 ನಿಮಿಷ ಏಳು ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಾಹುಲ್ ರೊಹಿಲ್ಲಾ (1:32:06) ಮತ್ತು ಕೆ.ಟಿ.ಇರ್ಫಾನ್ (1:34:41) ಕ್ರಮವಾಗಿ 47 ಮತ್ತು 51ನೇ ಸ್ಥಾನಕ್ಕೆ ಕುಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು