ಫಿಡೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್: ಕೊನೇರು ಹಂಪಿಗೆ ಬೆಳ್ಳಿ

ಅಲ್ಮಾತಿ, ಕಜಕಸ್ತಾನ: ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು.
ಹಂಪಿ ಅವರು 17 ಸುತ್ತುಗಳಲ್ಲಿ ಒಟ್ಟು 12.5 ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಪಡೆದರು. ಗುರುವಾರ ನಡೆದಿದ್ದ ಒಂಬತ್ತು ಸುತ್ತುಗಳ ಹಣಾಹಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಅವರು ಕೇವಲ ನಾಲ್ಕು ಗೆಲುವು ಸಾಧಿಸಿದ್ದರು.
ಆದರೆ ಶುಕ್ರವಾರ ನಡೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಎಂಟು ಸುತ್ತುಗಳಲ್ಲಿ ಅವರು ಏಳು ಗೆಲುವು ಸಾಧಿಸಿದರು. 14ನೇ ಸುತ್ತಿನಲ್ಲಿ ಭಾರತದವರೇ ಆದ ದ್ರೋಣವಲ್ಲಿ ಹರಿಕಾ ಜತೆ ಡ್ರಾ ಮಾಡಿಕೊಂಡರು.
13 ಪಾಯಿಂಟ್ಸ್ ಸಂಗ್ರಹಿಸಿದ ಕಜಕಸ್ತಾನದ ಬಿಬಿಸರ ಬಲಬಯೆವಾ ಚಿನ್ನ ಗೆದ್ದುಕೊಂಡರು.
ಹಂಪಿ 17ನೇ ಹಾಗೂ ಕೊನೆಯ ಸುತ್ತಿನಲ್ಲಿ ಚೀನಾದ ಜೊಂಗ್‌ಯಿ ತಾನ್ ಅವರನ್ನು ಮಣಿಸಿದರು. ರ‍್ಯಾಪಿಡ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ತಾನ್ ಅವರು ಬ್ಲಿಟ್ಜ್ ಟೂರ್ನಿಯಲ್ಲೂ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು.
ಇದೇ ಟೂರ್ನಿಯ ಮುಕ್ತ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಚಾಂಪಿಯನ್ ಆದರು. ಭಾರತದ ಯಾರೂ ಅಗ್ರ 10 ರಲ್ಲಿ ಕಾಣಿಸಿಕೊಳ್ಳಲಿಲ್ಲ.
17ನೇ ಸ್ಥಾನ ಪಡೆದ ಪಿ.ಹರಿಕೃಷ್ಣ ಅವರು ಭಾರತದ ಪರ ಅತ್ಯುತ್ತಮ ಸಾಧನೆ ಮಾಡಿದ ಸ್ಪರ್ಧಿ ಎನಿಸಿಕೊಂಡರು. ನಿಹಾಲ್ ಸರಿನ್ 18ನೇ ಸ್ಥಾನ ಪಡೆದುಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.