ಮಂಗಳವಾರ, ಮಾರ್ಚ್ 2, 2021
31 °C

ಭಾರತದ ಕ್ರೀಡಾ ತಾರೆಯರ ಪ್ರೇಮ್‌ ಕಹಾನಿ...

ಪ್ರಮೋದ ಜಿ.ಕೆ Updated:

ಅಕ್ಷರ ಗಾತ್ರ : | |

ಇನ್ನೆರೆಡು ದಿನ ಕಳೆದರೆ ಮತ್ತೊಂದು ಪ್ರೇಮಿಗಳ ದಿನ ಎದುರಿಗೆ ಬಂದು ನಿಲ್ಲುತ್ತದೆ. ಪ್ರತಿ ವರ್ಷ ಒಂದಲ್ಲ ಒಂದು ಕ್ರೀಡಾ ಜೋಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಇತ್ತೀಚಿಗೆ ಬ್ಯಾಡ್ಮಿಂಟನ್‌ ಕ್ಷೇತ್ರದ ಸಾಧಕರಾದ ಒಲಿಂಪಿಯನ್‌ ಸೈನಾ ನೆಹ್ವಾಲ್‌ ಹಾಗೂ ಪರುಪಳ್ಳಿ ಕಶ್ಯಪ್‌, ಕ್ರಿಕೆಟಿಗ ದಿನೇಶ ಕಾರ್ತಿಕ್‌ ಹಾಗೂ ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಪಳ್ಳಿಕಲ್‌, ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಮತ್ತು ಟೆನಿಸ್‌ ಆಟಗಾರ್ತಿ ಶೀತಲ್‌ ಗೌತಮ್‌ ಕೂಡ ಪ್ರೇಮಿಸಿ ವಿವಾಹವಾದವರೇ.

ಆದರೆ ಪ್ರೀತಿ–ಪ್ರೇಮದಲ್ಲಿ ಮಕ್ಕಳು ದಾರಿ ತಪ್ಪುತ್ತಾರೆ. ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂಬ ದೊಡ್ಡವರ ಆರೋಪವನ್ನು ಇವರು ನಿಜ ಮಾಡಿಲ್ಲ ಎಂಬುದು ಇಲ್ಲಿ ಗಮನಾರ್ಹ.

ತಮ್ಮ ಪ್ರೇಮ ಸಂಬಂಧವನ್ನು ಗುಟ್ಟಾಗಿ ನಿರ್ವಹಿಸುತ್ತಲೇ ಆಟದಂಕಣದಲ್ಲಿ ಪದಕಗಳು ಮತ್ತು ಪ್ರಶಸ್ತಿಯ ಬೇಟೆಯನ್ನು ನಿರಂತರ ವಾಗಿ ಮುಂದುವರಿಸಿದ ಹೆಗ್ಗಳಿಕೆ ಇವರದ್ದು. ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸಮತೋಲನ ಮಾಡಿಕೊಳ್ಳುವ ಅನುಕರಣೀಯ  ಮಾದರಿ ಯನ್ನೂ ಇವರು ಯುವಜನಾಂಗಕ್ಕೆ ಹೇಳಿಕೊಟ್ಟಿದ್ದಾರೆಂದರೆ ತಪ್ಪಿಲ್ಲ.

ಮಾಜಿ ಅಥ್ಲೀಟ್‌ ಮಿಲ್ಖಾ ಸಿಂಗ್‌, ಭಾರತ ವಾಲಿಬಾಲ್‌ ತಂಡದ ಮಾಜಿ ನಾಯಕಿ ನಿರ್ಮಲ್‌ ಕೌರ್‌ ಅವರಿಂದ ಇತ್ತೀಚಿನ ಕ್ರೀಡಾಪಟುಗಳವರೆಗೂ ಎಲ್ಲರೂ ಪ್ರೇಮಲೋಕದಲ್ಲಿ ವಿಹರಿಸಿದವರೇ. ಪ್ರೇಮಿಗಳ ದಿನದ ನೆಪದಲ್ಲಿ ಅವರ ಬದುಕಿನ ಯಾನ, ಕ್ರೀಡಾಸಾಧನೆಯ ಮಾಹಿತಿ ಇಲ್ಲಿದೆ.

ಮಂಜೀತ್‌ ಕೌರ್‌–ಗುರ್ವಿಂದರ್‌ ಸಿಂಗ್‌ ಚಾಂಡಿ

ಪಂಜಾಬ್‌ನ ಈ ಜೋಡಿ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡುತ್ತಿದೆ. ಹಾಕಿ ಆಟಗಾರ ಗುರ್ವಿಂದರ್‌ ಸಿಂಗ್‌ 2008ರಲ್ಲಿ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿದ್ದರು. 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಾಗ ದೇಶವನ್ನು ಪ್ರತಿನಿಧಿಸಿದ್ದರು.

ಮಂಜೀತ್‌ ಕೌರ್‌ ಅಥ್ಲೆಟಿಕ್ಸ್‌ನಲ್ಲಿ ಸಾಧನೆಯ ಹೊಳಪು ಮೂಡಿಸಿದವರು. 2006ರ ದೋಹಾ ಮತ್ತು 2010ರ ಗುವಾಂಗ್‌ ಜೌ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದರು. 2006ರ ಮೆಲ್ಬರ್ನ್‌ ಹಾಗೂ 2010ರ ದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದರು. ಈ ಜೋಡಿ ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆಗ ಗುರ್ವಿಂದರ್‌ಗೆ 25, ಮಂಜೀತ್‌ಗೆ 33 ವರ್ಷ!

ರಾಜ್ಪಾಲ್‌ ಸಿಂಗ್‌–ಅವನೀತ್ ಕೌರ್‌

ಭಾರತ ಹಾಕಿ ತಂಡದ ನಾಯಕರಾಗಿದ್ದ ರಾಜ್ಪಾಲ್‌ ಸಿಂಗ್‌ 2010ರ ದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಸುಲ್ತಾನ್‌ ಜೋಹಾರ್‌ ಕಪ್‌, ಏಷ್ಯಾ ಕಪ್‌, ಚಾಂಪಿಯನ್ಸ್‌ ಚಾಲೆಂಜ್‌ ಮತ್ತು ಏಷ್ಯನ್ ಕ್ರೀಡಾಕೂಟದಂಥ ಮಹತ್ವದ ಟೂರ್ನಿಗಳಲ್ಲಿ ಆಡಿದ್ದಾರೆ.

ಶೂಟರ್‌ ಅವನೀತ್‌ ಕೌರ್‌ 2006ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಪಂಜಾಬ್‌ನ ಕೌರ್‌, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿದ್ದ ಕೌರ್‌ 2017ರಲ್ಲಿ ಲಾಸ್‌ ಎಂಜಲೀಸ್‌ನಲ್ಲಿ ನಡೆದ ವಿಶ್ವ ಪೊಲೀಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಅಂಜು ಬಾಬಿ ಜಾರ್ಜ್‌–ರಾಬರ್ಟ್‌ ಬಾಬಿ ಜಾರ್ಜ್‌

ಖ್ಯಾತ ಕ್ರೀಡಾ ಜೋಡಿಯಲ್ಲಿ ಇವರು ಪ್ರಮುಖರು. ವಿಶ್ವ ಚಾಂಪಿಯನ್‌ಷಿಪ್‌ನ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎನ್ನುವ ಹೆಗ್ಗಳಿಗೆ ಅಂಜುಬಾಬಿ ಹೆಸರಲ್ಲಿದೆ. 2005ರಲ್ಲಿ ವಿಶ್ವ ಅಥ್ಲೆಟಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಚಿನ್ನ ಜಯಿಸಿದ್ದರು. 2002 ಹಾಗೂ 2006ರ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡಿದ್ದರು.

ರಾಬರ್ಟ್‌ ಜಾರ್ಜ್‌ ಟ್ರಿಪಲ್‌ ಜಂಪ್‌ನಲ್ಲಿ ಹೆಸರು ಮಾಡಿದ್ದಾರೆ. ಅಂಜು ಬಾಬಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಬಳಿಕ ಅಂಜುಬಾಬಿ ಕೋಚ್‌ ಹಾಗೂ ಪತಿ ರಾಬರ್ಟ್‌ಗೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತು.

ಪುಲ್ಲೇಲ ಗೋಪಿಚಂದ್‌–ಪಿ.ವಿ.ವಿ. ಲಕ್ಷ್ಮಿ

ಹೊಸ ತಲೆಮಾರಿನ ಬ್ಯಾಡ್ಮಿಂಟನ್‌ ಸ್ಪರ್ಧಿಗಳ ಕೌಶಲಕ್ಕೆ ವೇದಿಕೆ ಒದಗಿಸಿ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರದ್ದು. ಹೈದರಾಬಾದ್‌ನ ಗೋಪಿಚಂದ್‌ ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಿದ ಪಿ.ವಿ.ವಿ. ಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ.

ಗೋಪಿಚಂದ್ 2001ರಲ್ಲಿ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಪ್ರಕಾಶ ಪಡುಕೋಣೆ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆ ಅವರದ್ದು. ಅರ್ಜುನ ಹಾಗೂ ದ್ರೋಣಾಚಾರ್ಯ ಎರಡೂ ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧನೆ ಕೂಡ ಅವರ ಹೆಸರಲ್ಲಿದೆ.

ಲಕ್ಷ್ಮಿ ಮಾಜಿ ರಾಷ್ಟ್ರೀಯ ಚಾಂಪಿಯನ್‌. ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎನ್ನುವ ಹಿರಿಮೆ ಹೊಂದಿದ್ದಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಇವರು 2002ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಿಲ್ಖಾ ಸಿಂಗ್‌–ನಿರ್ಮಲ್‌ ಕೌರ್‌

ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಅಥ್ಲೀಟ್‌ ಮಿಲ್ಖಾ ಸಿಂಗ್‌ ಭಾರತ ವಾಲಿಬಾಲ್‌ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್‌ ಅವರನ್ನು ವಿವಾಹವಾಗಿದ್ದಾರೆ. ಏಷ್ಯನ್‌ ಕ್ರೀಡಾಕೂಟದ 200, 400ಮೀಟರ್‌ ಓಟ ಮತ್ತು 4X400ಮೀ. ರಿಲೆಯಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. ನ್ಯಾಷನಲ್‌ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನ ಮತ್ತು ಒಂದು ಸಲ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಪುರುಷ ಅಥ್ಲೀಟ್‌ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ.

1957ರಲ್ಲಿ ನಡೆದ ಇಂಡೊ–ಸಿಲೊನ್‌ ಕ್ರೀಡಾಕೂಟದಲ್ಲಿ ನಿರ್ಮಲಾ ಅವರನ್ನು ಭೇಟಿಯಾಗಿದ್ದೆ. 1961ರಲ್ಲಿ ನಿರ್ಮಲಾ ಪಂಜಾಬ್‌ನ ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ನೌಕರಿಗೆ ಸೇರಿದರು. ಆಗಿನಿಂದಲೇ ನಮ್ಮ ನಡುವೆ ಪ್ರೀತಿಯಿತ್ತು ಎಂದು ಮಿಲ್ಖಾ ಸಿಂಗ್ ಅದೊಮ್ಮೆ ಮಾಧ್ಯಮಗಳ ಎದುರು ಹಂಚಿಕೊಂಡಿದ್ದರು.  ಇವರು 1962ರಲ್ಲಿ ವಿವಾಹವಾದರು. ಮೂವರು ಪುತ್ರಿಯರು ಇದ್ದಾರೆ. ಪುತ್ರ ಜೀವ್‌ ಮಿಲ್ಕಾ ಸಿಂಗ್‌ ಗಾಲ್ಫ್‌ನಲ್ಲಿ ಎತ್ತರದ ಸಾಧನೆ ಮಾಡಿದ್ದಾರೆ.

 ಹೀನಾ ಸಿಧು–ರೋನಕ್‌ ಪಂಡಿತ್‌

ಶೂಟಿಂಗ್‌ನ ಹಲವು ಪ್ರಖ್ಯಾತ ಜೋಡಿಗಳಲ್ಲಿ ಹೀನಾ ಹಾಗೂ ರೋನಕ್‌ ಕೂಡ ಒಬ್ಬರು. ಆರು ವರ್ಷಗಳ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಹೀನಾ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಶೂಟರ್‌ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. ಪತಿ ರೋನಕ್‌ 2006ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 25 ಮೀಟರ್‌. ಸ್ಟ್ಯಾಂಡೆರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಹೀನಾಗೆ ಕೋಚ್‌ ಕೂಡ ಆಗಿದ್ದಾರೆ.

ಸಾನಿಯಾ ಮಿರ್ಜಾ–ಶೊಯೊಬ್‌ ಮಲಿಕ್‌

ಭಾರತದ ಟೆನಿಸ್‌ ‘ಕ್ವೀನ್‌’ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೊಯೊಬ್‌ ಮಲಿಕ್‌ ಅವರನ್ನು ವಿವಾಹವಾಗಿದ್ದಾರೆ.

ಹೈದರಾಬಾದ್‌ನ ಸಾನಿಯಾ ಆಸ್ಟ್ರೇಲಿಯಾ ಓಪನ್‌, ವಿಂಬಲ್ಡನ್‌ ಹಾಗೂ ಅಮೆರಿಕ ಓಪನ್‌ ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 2015ರ ಫ್ರೆಂಚ್‌ ಓಪನ್‌ನಲ್ಲಿ ಫೈನಲ್‌ ತಲುಪಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಮೂರು ಬಾರಿ ಚಾಂಪಿಯನ್‌ ಆಗಿದ್ದಾರೆ.

ಬಾಲ್ಯದ ಗೆಳೆಯ ಶೊಹರಬ್‌ ಮಿರ್ಜಾ ಜೊತೆ ಸಾನಿಯಾ 2009ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ಬಾಂಧವ್ಯ ಅಲ್ಲಿಗೇ ಮುರಿದು ಬಿತ್ತು. ನಂತರ ಶೊಯೊಬ್‌ ಅವರನ್ನು ವಿವಾಹವಾದರು. ಶೊಯೊಬ್‌ ಪಾಕ್‌ ಕ್ರಿಕೆಟ್ ತಂಡದ ನಾಯಕರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು