ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಅಮೆರಿಕಾ ಓಪನ್: ದಿಗ್ಗಜ ಆಟಗಾರರ ಮಹಾಪತನ

Last Updated 13 ಸೆಪ್ಟೆಂಬರ್ 2020, 3:38 IST
ಅಕ್ಷರ ಗಾತ್ರ

ಸೆಪ್ಟೆಂಬರ್ ಏಳು‌. ನ್ಯೂಯಾರ್ಕ್‌ನ ಆರ್ಥರ್ ಆ್ಯಶೆ ಟೆನಿಸ್ ಅಂಗಣದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ಟಾ ಮುಖಾಮುಖಿ. ಪಂದ್ಯದ ಮೊದಲ ಸೆಟ್‌ನ 10ನೇ ಗೇಮ್‌ ವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಮುಂದಿನ ಗೇಮ್‌ನಲ್ಲಿ ಜೊಕೊವಿಚ್ ಉದ್ವೇಗಕ್ಕೆ ಒಳಗಾಗಿ ಎಸಗಿದ ಕೃತ್ಯವೊಂದು ಅವರನ್ನು ಟೂರ್ನಿಯಿಂದಲೇ ವಜಾ ಮಾಡುವ ಸ್ಥಿತಿಗೆ ಕಾರಣವಾಯಿತು.

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಜೊಕೊವಿಚ್ ಅವರು ವಜಾ ಆಗುವುದರೊಂದಿಗೆ ಅಮೆರಿಕ ಓಪನ್‌ನಲ್ಲಿ ಈ ಬಾರಿ ದಿಗ್ಗಜರ ಪತನಕ್ಕೆ ಮತ್ತೊಬ್ಬ ಆಟಗಾರನ ಸೇರ್ಪಡೆಯಾದಂತಾಯಿತು. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಈ ಬಾರಿ ಪ್ರಮುಖ ಆಟಗಾರರ ಪೈಕಿ ಹೆಚ್ಚಿನವರು ಅರಂಭಿಕ ಸುತ್ತುಗಳಲ್ಲೇ ವಾಪಸಾದರೆ, ಸೆರೆನಾ ವಿಲಿಯಮ್ಸ್‌ ಅವರಂಥ ಖ್ಯಾತನಾಮರು ಅಂತಿಮ ಹಂತದ ವರೆಗೂ ಕಾದಾಡಿದರು.

ಬೂಸ್ಟಾ ಎದುರು ಒಂದು ಗೇಮ್‌ನಿಂದ ಹಿನ್ನಡೆ ಅನುಭವಿಸಿದ್ದ ಜೊಕೊವಿಚ್ ಸರ್ವ್‌ಗೆ ಮುಂದಾಗಿದ್ದ ಸಂದರ್ಭದಲ್ಲಿ ಹೆಚ್ಚುವರಿ ಚೆಂಡನ್ನು ಜೇಬಿನಿಂದ ತೆಗೆದು ರ‍್ಯಾಕೆಟ್‌ನಲ್ಲಿ ಹಿಂದಕ್ಕೆ ಬಡಿದರು. ವೇಗವಾಗಿ ಸಾಗಿದ ಚೆಂಡು ಲೈನ್ ಅಂಪೈರ್‌ ಲಾರಾ ಕ್ಲಾರ್ಕ್ ಅವರ ಕತ್ತಿಗೆ ಬಡಿದಿತ್ತು. ಕ್ಲಾರ್ಕ್ ನೋವಿನಿಂದ ಒದ್ದಾಡಿದರು. ಇದು ಜೊಕೊವಿಚ್ ಅವರನ್ನು ಹೊರಹಾಕಲು ಹೇತುವಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟವನ್ನು ಸಾಮಾನ್ಯವಾಗಿ ಜಂಟಲ್‌ಮನ್ಸ್‌ ಗೇಮ್ ಎಂದು ಹೇಳಲಾಗುತ್ತದೆ. ಆದರೆ ಅಂಗಣದಲ್ಲಿ ಶಿಸ್ತು ಕಾಯ್ದುಕೊಳ್ಳುವ ವಿಷಯದಲ್ಲಿ ಟೆನಿಸ್‌ಗೂ ಈ ವಿಶೇಷಣವನ್ನು ನೀಡಬಹುದು. ರೆಫರಿ, ಚೇರ್ ಅಂಪೈರ್‌, ಲೈನ್ ಅಂಪೈರ್‌ಗಳು, ಬಾಲ್ ಬಾಯ್‌ ಮುಂತಾದವರಿಗೆ ಗೌರವ ನೀಡುವುದರಿಂದ ಹಿಡಿದು ಅಂಗಣದಲ್ಲಿ ಯಾವ ರೀತಿಯಲ್ಲಿ ಅಶಿಸ್ತು ತೋರಿದರೂ ಅಧಿಕಾರಿಗಳ ಕೆಂಗಣ್ಣಿಗೆ ಪಾತ್ರರಾಗಬೇಕಾಗಿರುವುದರಿಂದ ಟೆನಿಸ್ ಅಂಗಣದಲ್ಲಿ ಯಾರೂ ’ಅತಿಯಾಗಿ‘ ವರ್ತಿಸುವ ಸಾಹಸಕ್ಕೆ ಮುಂದಾಗುವುದಿಲ್ಲ.

ಜೊಕೊವಿಚ್ ವಿವಾದ ಸೃಷ್ಟಿಸಿ ಹೊರಬಿದ್ದರೆ, ಕಾದಾಡಿ ಹೊರಬಿದ್ದವರ ಪೈಕಿ ಬ್ರಿಟನ್‌ನ ಆ್ಯಂಡಿ ಮರ್ರೆ, ಕೆನಡಾದ ಮಿಲಾಸ್ ರಾನಿಕ್, ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್, ಸ್ಪೇನ್‌ನ ಗಾರ್ಬೈನ್ ಮುಗುರುಜಾ, ಜರ್ಮನಿಯ ಏಂಜಲಿಕ್ ಕೆರ್ಬರ್, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ ಮುಂತಾದವರು ಕ್ವಾರ್ಟರ್ ಫೈನಲ್ ಹಂತವನ್ನೂ ಕಾಣದೆ ವಾಪಸಾದರು.

ಕೋವಿಡ್‌ನಿಂದ ಆರಂಭದಲ್ಲೇ ’ಆಘಾತ‘

ಕೋವಿಡ್–19ರಿಂದಾಗಿ ಅಮೆರಿಕ ಓಪನ್‌ ಮೇಲೆ ಕರಿನೆರಳು ಬಿದ್ದಿತ್ತು. ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ನಂತರ ಸ್ತಬ್ದಗೊಂಡಿದ್ದ ಟೆನಿಸ್ ಜಗತ್ತಿನಲ್ಲಿ ಮತ್ತೆ ಸದ್ದು ಏಳಬೇಕಾರೆ ಎಂಟು ತಿಂಗಳು ಕಾಯಬೇಕಾಯಿತು. ಪ್ರೇಕ್ಷಕರಿಲ್ಲದಿದ್ದರೂ ಆಟಗಾರರ ಉತ್ಸಾಹಕ್ಕೆ ಧಕ್ಕೆಯಾಗಲಿಲ್ಲ. ಆದರೆ ಕೋವಿಡ್‌ ಕಾರಣದಿಂದಾಗಿ ಸ್ಪೇನ್‌ನ ರಫೆಲ್ ನಡಾಲ್,ಅನಾರೋಗ್ಯದಿಂದಾಗಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಆರಂಭದಲ್ಲೇ ’ಆಘಾತ‘ ನೀಡಿದ್ದರು. ನಂತರ ಬಿದ್ದ ದೊಡ್ಡ ಪೆಟ್ಟು ಜೊಕೊವಿಚ್ ನಿರ್ಗಮನ.

ಕಣದಲ್ಲಿದ್ದ ಆಟಗಾರರ ಪೈಕಿ ಜೊಕೊವಿಚ್ ಅವರಂತೆಯೇ ಭರವಸೆ ಮೂಡಿಸಿದ್ದವರು ಆ್ಯಂಡಿ ಮರ್ರೆ. ಆದರೆ ಅವರು ಮೂರನೇ ಸುತ್ತಿನಲ್ಲೇ ಸೋತು ಹೊರಬಿದ್ದರು. 2012ರ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಮರ್ರೆ ಎರಡನೇ ಸುತ್ತಿನಲ್ಲಿ ಜಪಾನ್‌ನ ಯೊಶಿಹಿಟಾ ನಿಶಿಯೋಕ ಎದುರು ಪ್ರಯಾಸದಿಂದ ಗೆದ್ದಿದ್ದರು. ಆದರೆ ಮೂರನೇ ಸುತ್ತಿನಲ್ಲಿ ಕೆನಡಾದ ಫೆಲಿಕ್ಸ್ ಆಗರ್‌ ಅಲಿಯಾಸಿಮ್‌ಗೆ ಮಣಿದರು. ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಕೂಡ ಆಗಿರುವ ಮರ್ರೆ ಅವರನ್ನು ಮಣಿಸಿದ ಫೆಲಿಕ್ಸ್ ರ‍್ಯಾಂಕಿಂಗ್‌ನಲ್ಲಿ 310ನೇ ಸ್ಥಾನದಲ್ಲಿರುವ ಆಟಗಾರ!

ಪತನಗೊಂಡ ದಿಗ್ಗಜರ ಪೈಕಿ ಮತ್ತೊಬ್ಬ ಪ್ರಮುಖ ಆಟಗಾರ ಸ್ಟೆಫನೋಸ್ ಸಿಸಿಪಸ್. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸಿಸಿಪಸ್ ಮಣಿದದ್ದು 32ನೇ ಸ್ಥಾನದಲ್ಲಿರುವ, ಕ್ರೊವೇಷ್ಯಾದ ಬೋರ್ನಾ ಕೋರಿಕ್‌ಗೆ. ಐದನೇ ಸೆಟ್‌, ಟೈಬ್ರೇಕರ್‌ನಲ್ಲಿ ಕೊನೆಗೊಂಡ ಪಂದ್ಯದಲ್ಲಿ ಸಿಸಿಪಸ್ ನಿರೀಕ್ಷೆಗಳನ್ನು ಕೋರಿಕ್ ನುಚ್ಚುನೂರು ಮಾಡಿದ್ದರು.

ನಾಲ್ಕು ಬಾರಿ ಅಮೆರಿಕ ಓಪನ್‌ನ ನಾಲ್ಕನೇ ಸುತ್ತು ಪ್ರವೇಶಿಸಿದ್ದ ಮಿಲಾಸ್ ರಾನಿಕ್ ಈ ಬಾರಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಎರಡನೇ ಸುತ್ತಿನಲ್ಲಿತಮ್ಮದೇ ದೇಶದ ವಾಸ್ಪೆಕ್ ಪಾಸ್ಪೆಸಿಲ್ ಅವರಿಗೆ ಮಣಿದು ವಾಪಸಾದರು.

ಮುಗ್ಗರಿಸಿದ ಮುಗುರುಜಾ, ಕೆರ್ಬರ್

ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದ ಸೆರೆನಾ ವಿಲಿಯಮ್ಸ್ ಅಂತಿಮ ನಾಲ್ಕರ ಘಟ್ಟದ ವರೆಗೆ ಪ್ರವೇಶಿಸಿದರೂ ಗಾರ್ಬೈನ್ ಮುಗುರುಜಾ, ಏಂಜಲಿಕ್ ಕೆರ್ಬರ್, ‍ಪೆಟ್ರಾ ಕ್ವಿಟೋವ ಮುಂತಾದವರು ನಿರೀಕ್ಷೆಗಳನ್ನು ಹುಸಿಗೊಳಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಮುಗುರುಜಾ ಎರಡನೇ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಬಲ್ಗೇರಿಯಾದ ಸ್ವೆಟಾನ ಪಿರಂಕೋವಗೆ ನೇರ ಸೆಟ್‌ಗಳಲ್ಲಿ ಮಣಿದಿದ್ದರು.

ಅಮೆರಿಕ ಓಪನ್ ಸೇರಿದಂತೆ ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಕೆರ್ಬರ್ ಪ್ರೀ ಕ್ವಾರ್ಟರ್ ಫೈನಲ್‌ ವರೆಗೆ ತಲುಪಿದರೂ ಅಮೆರಿಕದ ಜೆನಿಫರ್ ಬ್ರಾಡಿಗೆ ಸುಲಭವಾಗಿ ಮಣಿದರು. ವಿಂಬಲ್ಡನ್‌ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಕ್ವಿಟೋವ ಕೂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಆದರೆ ಅವರು 2016ರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಅಮೆರಿಕದ ಶೆಲ್ಬಿ ರೋಜರ್‌ ವಿರುದ್ಧ ಸೋತಿದ್ದರು.

ಒಂದು ವಾರದ ನಂತರ, ಸೆಪ್ಟೆಂಬರ್ 21ರಂದು ಫ್ರೆಂಚ್ ಓಪನ್ ಆರಂಭವಾಗಲಿದ್ದು ರೋಜರ್ ಫೆಡರರ್ ಒಬ್ಬರನ್ನು ಹೊರತುಪಡಿಸಿ ಪ್ರಮುಖ ಆಟಗಾರರೆಲ್ಲರೂ ಆ ಟೂರ್ನಿಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹೀಗಾಗಿ ಈಗ ಎಲ್ಲರ ಕಣ್ಣು ಅತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT