ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಾಲಿಯನ್ ಓಪನ್ ಟೆನಿಸ್: ನಡಾಲ್‌ ಎದುರು ಗೆದ್ದ ಡೀಗೊ ಸ್ವಾರ್ಟ್ಸ್‌ಮನ್

ಮತ್ತೆ ಉದ್ವೇಗಕ್ಕೆ ಒಳಗಾಗಿ ರ‍್ಯಾಕೆಟ್ ನೆಲಕ್ಕೆ ಎಸೆದ ಜೊಕೊವಿಚ್‌; ಸಿಮೋನಾ ಹಲೆಪ್‌, ಮುಗುರುಜಾ ಸೆಮಿಫೈನಲ್‌ಗೆ ಪ್ರವೇಶ
Last Updated 20 ಸೆಪ್ಟೆಂಬರ್ 2020, 13:21 IST
ಅಕ್ಷರ ಗಾತ್ರ

ರೋಮ್: ಏಳು ತಿಂಗಳ ನಂತರ ಮೊದಲ ಟೂರ್ನಿ ಆಡಿದ ಸ್ಪೇನ್‌ನ ರಫೇಲ್ ನಡಾಲ್ ಅವರ ಗೆಲುವಿನ ಓಟಕ್ಕೆ ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್ ತಡೆ ಹಾಕಿದರು. ಭಾನುವಾರ ನಡೆದ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೀಗೊ 6–2, 7–5ರಲ್ಲಿ ಜಯ ಗಳಿಸಿದರು.

ರೋಮ್‌ನಲ್ಲಿ ಒಂಬತ್ತು ಬಾರಿ ಚಾಂಪಿಯನ್‌ ಆಗಿರುವ ನಡಾಲ್ ಈ ಹಿಂದೆ ಒಂಬತ್ತು ಬಾರಿ ಡೀಗೊ ಎದುರು ಸೆಣಸಿದ್ದರು. ಆದರೆ 15ನೇ ರ‍್ಯಾಂಕ್‌ನ ಅರ್ಜೆಂಟೀನಾ ಆಟಗಾರನ ಎದುರು ಒಮ್ಮೆಯೂ ಸೋತಿಲ್ಲ. ಬೇಸ್‌ಲೈನ್‌ನಿಂದ ಬಲಿಷ್ಠ ಹೊಡೆತಗಳೊಂದಿಗೆ ಮಿಂಚಿದಡೀಗೊ ಆಗಾಗ ಡ್ರಾಪ್‌ಶಾಟ್‌ಗಳನ್ನೂ ಪ್ರದರ್ಶಿಸಿ ಪಾಯಿಂಟ್ ಗಳಿಸುತ್ತ ಸಾಗಿದರು. ಅತ್ತ ನಡಾಲ್ ಆರಂಭದಿಂದಲೇ ಲೋಪಗಳನ್ನು ಎಸಗುತ್ತ ಸಾಗಿದರು. ಹೀಗಾಗಿ ಸರ್ವ್ ಗಿಟ್ಟಿಸಿಕೊಳ್ಳಲು ತುಂಬ ಹೆಣಗಾಡಬೇಕಾಯಿತು.

‘ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು ಎರಡು ತಿಂಗಳು ರ‍್ಯಾಕೆಟ್ ಹಿಡಿಯಲೇ ಇಲ್ಲ. ಆದ್ದರಿಂದ ಇದು ವಿಶೇಷವಾದ ವರ್ಷ, ಅನಿಶ್ಚಿತ ಕಾಲ‘ ಎಂದು ಹೇಳಿದ ನಡಲಾ್ ‘ಕನಿಷ್ಠಪಕ್ಷ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವುದು ಖುಷಿ ತಂದಿದೆ’ ಎಂದರು. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಅವರು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದರು.

‘ಅನೇಕ ಸರ್ವ್‌ಗಳನ್ನು ಕಳೆದುಕೊಂಡೆ. ಅಂಥ ಪರಿಸ್ಥಿತಿಯಲ್ಲಿ ಪಂದ್ಯ ಗೆಲ್ಲುವುದು ಅಸಾಧ್ಯದ ಮಾತು. ಮುಂದಿನ ಟೂರ್ನಿಗಳಲ್ಲಿ ಈ ತಪ್ಪುಗಳನ್ನು ಸರಿಪಡಿಸಬೇಕು. ಅದಕ್ಕೆ ಏನು ಮಾಡಬೇಕು ಎಂಬುದು ನನಗೆ ಗೊತ್ತು’ ಎಂದು ಅವರು ತಿಳಿಸಿದರು.

ಫೆಬ್ರುವರಿಯಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ಅಕಪುಲ್ಕೊ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ನಂತರ ನಡಾಲ್ ಟೆನಿಸ್ ಕಣಕ್ಕೆ ಇಳಿದಿರಲಿಲ್ಲ.‍ಪ್ರವಾಸ ನಿರ್ಬಂಧಗಳು ಇರುವುದರಿಂದ ಆಗಸ್ಟ್ ಕೊನೆಯಲ್ಲಿ ಆರಂಭಗೊಂಡ ಅಮೆರಿಕ ಓಪನ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದರು. ಇದೀಗ ಫ್ರೆಂಚ್ ಓಪನ್‌ಗೆ ಸಜ್ಜಾಗುತ್ತಿದ್ದು ಅಲ್ಲಿ ದಾಖಲೆಯ 13ನೇ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ಮತ್ತೆ ಉದ್ವೇಗಕ್ಕೆ ಒಳಗಾದ ಜೊಕೊವಿಚ್

ಅಮೆರಿಕ ಓಪನ್‌ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ನ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾಗ ಉದ್ವೇಗಕ್ಕೆ ಒಳಗಾಗಿ ಟೂರ್ನಿಯಿಂದ ಅನರ್ಹಗೊಂಡ ಸರ್ಬಿಯಾದ ನೊವಾಕ್ ಜೊಕೊವಿಚ್ ರೋಮ್‌ನಲ್ಲೂ ಅನುಚಿತವಾಗಿ ವರ್ತಿಸಿದರು. ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಜರ್ಮನಿಯ ಡೊಮಿನಿಕ್ ಕೋಫರ್ ಎದುರು 6–3, 4–6, 6–3ರಿಂದ ಅವರು ಗೆಲುವು ಸಾಧಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ಕೋಫರ್ 3–3ರ ಸಮಬಲ ಸಾಧಿಸಿದ ಸಂದರ್ಭದಲ್ಲಿ ಜೊಕೊವಿಚ್ ರ‍್ಯಾಕೆಟ್ ನೆಲಕ್ಕೆ ಎಸೆದು ಸಿಟ್ಟು ಹೊರಹಾಕಿದರು.ನಂತರ ಹೊಸ ರ‍್ಯಾಕೆಟ್‌ ತೆಗೆದುಕೊಂಡು ಆಡಲು ಆರಂಭಿಸಿದ ಅವರಿಗೆ ಚೇರ್ ಅಂಪೈರ್ ಎಚ್ಚರಿಕೆ ನೀಡಿದರು.

‘ವೃತ್ತಿಜೀವನದಲ್ಲಿ ನಾನು ರ‍್ಯಾಕೆಟ್ ಮುರಿದದ್ದು ಇದೇ ಮೊದಲಲ್ಲ, ಕೊನೆಯೂ ಆಗಿರಲಾರದು. ಹೀಗೆ ಮಾಡಬಾರದು ಎಂದು ಗೊತ್ತಿದೆ. ಆದರೆ ಕೆಲವೊಮ್ಮೆ ಪರಿಸ್ಥಿತಿ ನನ್ನಿಂದ ಹಾಗೆ ಮಾಡಿಸುತ್ತದೆ‘ ಎಂದು ಅವರು ತಿಳಿಸಿದರು.

ರೋಮ್‌ನಲ್ಲಿ ಐದನೇ ಪ್ರಶಸ್ತಿ ಗಳಿಸುವ ಕನಸಿನೊಂದಿಗೆ ಕಣಕ್ಕೆ ಇಳಿದಿರುವ ಜೊಕೊವಿಚ್ ಸೆಮಿಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್‌ ಎದುರು ಸೆಣಸುವರು. ರೂಡ್ ಸ್ಥಳೀಯ ಆಟಗಾರ ಮಟಿಯೊ ಬೆರೆಟಿನಿ ಎದುರು 4–6, 6–3, 7–6(5)ರಲ್ಲಿ ಗೆಲುವು ಸಾಧಿಸಿದರು.ಮತ್ತೊಂದು ಪಂದ್ಯದಲ್ಲಿ ಡೆನಿಸ್ ಶಪೊವಲೊವ್ 6–2, 3–6, 6–2ರಲ್ಲಿ ಗ್ರಿಗರ್ ದಿಮಿಟ್ರೊವ್ ಅವರನ್ನು ಮಣಿಸಿದರು.

ಹಲೆಪ್‌, ಮುಗುರುಜಾ ಮುನ್ನಡೆ

ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ರೊಮೇನಿಯಾದ ಸಿಮೋನಾ ಹಲೆಪ್ ಕಜಕಸ್ತಾನ್ ಯೂಲಿಯಾ ಪುಟಿನ್ಸೇವಾ ಎದುರು 6–2, 2–0 ಮುನ್ನಡೆ ಗಳಿಸಿದ್ದಾಗ ಪುಟಿನ್ಸೇವಾ ಕಾಲುನೋವಿನಿಂದ ಬಳಲಿ ಹಿಂದೆ ಸರಿದರು. ಮತ್ತೊಂದು ಪಂದ್ಯದಲ್ಲಿ ಗಾರ್ಬೈನ್ ಮುಗುರುಜಾ ಅಮೆರಿಕ ಓಪನ್‌ನ ರನ್ನರ್ ಅಪ್ ವಿಕ್ಟೋರಿಯಾ ಅಜರೆಂಕಾ ವಿರುದ್ಧ 3–6, 6–3, 6–4ರಲ್ಲಿ ಗೆಲುವು ಸಾಧಿಸಿದರು. ವೊಂಡ್ರೊಸೋವಾ 6–3, 6–0ಯಿಂದ ಸ್ವಿಟೋಲಿನ ಆವರನ್ನು ಮಣಿಸಿದರೆ ಕರೊಲಿನಾ ಪ್ಲಿಸ್ಕೋವ 6–3, 3–6, 6–0ಯಿಂದ ಎಲಿಸ್ ಮರ್ಟೆನ್ಸ್ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT