ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ನಡಾಲ್‌, ಸ್ವಟೆಕ್ ಗೆಲುವಿನ ಓಟ

ಡಬಲ್ಸ್‌ನಲ್ಲಿ ವೀನಸ್‌–ಸೆರೆನಾಗೆ ಸೋಲು
Last Updated 2 ಸೆಪ್ಟೆಂಬರ್ 2022, 16:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಆಟದ ವೇಳೆ ಆಕಸ್ಮಿಕವಾಗಿ ಗಾಯಗೊಂಡರೂ ಛಲ ಬಿಡದೆ ಹೋರಾಡಿದ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 2-6, 6-4, 6-2, 6-1 ರಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಗೆದ್ದರು.

ನಾಲ್ಕನೇ ಸೆಟ್‌ನಲ್ಲಿ 3–0 ರಲ್ಲಿ ಮುನ್ನಡೆಯಲ್ಲಿದ್ದಾಗ ಎದುರಾಳಿಗೆ ಚೆಂಡನ್ನು ರಿಟರ್ನ್‌ ಮಾಡುವ ಭರದಲ್ಲಿ ನಡಾಲ್‌ ಮೂಗಿಗೆ ಗಾಯಮಾಡಿಕೊಂಡರು. ನೆಲಕ್ಕೆ ಬಡಿದ ರ‍್ಯಾಕೆಟ್‌ ಅವರ ಮೂಗಿಗೆ ಅಪ್ಪಳಿಸಿದ್ದರಿಂದ ರಕ್ತ ಸುರಿಯಿತು.

ನೋವಿನಿಂದ ನರಳಿದ ಅವರು ಕೆಲಹೊತ್ತು ಅಂಗಳದಲ್ಲಿ ಮಲಗಿದರು. ಪ್ರಥಮ ಚಿಕಿತ್ಸೆ ಪಡೆದ ನಡಾಲ್‌ ಬಳಿಕ ಮೂಗಿಗೆ ಬ್ಯಾಂಡೇಜ್‌ ಹಾಕಿಕೊಂಡು ಆಟ ಮುಂದುವರಿಸಿ ಗೆದ್ದರು.

ಮೊದಲ ಸೆಟ್‌ಅನ್ನು 2–6 ರಲ್ಲಿ ಸೋತ ನಡಾಲ್‌, ಎರಡನೇ ಸೆಟ್‌ನಲ್ಲಿ 2–4 ರಿಂದ ಹಿನ್ನಡೆಯಲ್ಲಿದ್ದರು. ಅನಂತರ ಲಯ ಕಂಡುಕೊಂಡು ಶಿಸ್ತಿನ ಆಟವಾಡಿದರು. ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ಎದುರಾಳಿಗೆ ಕೇವಲ ಮೂರು ಪಾಯಿಂಟ್‌ ಮಾತ್ರ ಬಿಟ್ಟುಕೊಟ್ಟರು.

23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ಆಟಗಾರ, ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕೆಟ್‌ ಅವರ ಸವಾಲು ಎದುರಿಸುವರು. ಗ್ಯಾಸ್ಕೆಟ್‌ 6–2, 6–4, 4–6, 6–4 ರಲ್ಲಿ ಸರ್ಬಿಯದ ಮಿಯೊಮಿರ್‌ ಕೆಮನೊವಿಚ್‌ ವಿರುದ್ಧ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಕ್ರೊಯೇಷ್ಯದ ಮರಿನ್‌ ಸಿಲಿಚ್ 6–3, 7–6, 6–3 ರಲ್ಲಿ ಸ್ಪೇನ್‌ನ ಅಲ್ಬರ್ಟ್‌ ರಾಮೊಸ್‌ ವಿನೊಲಸ್‌ ವಿರುದ್ಧ; ಬ್ರಿಟನ್‌ನ ಕ್ಯಾಮರನ್ ನೋರಿ 6–4, 6–4, 7–6 ರಲ್ಲಿ ಪೋರ್ಚುಗಲ್‌ನ ಜಾವೊ ಸೋಸ ವಿರುದ್ಧ; ರಷ್ಯಾದ ಆಂಡ್ರೆ ರುಬ್ಲೇವ್‌ 6–3, 6–0, 6–4 ರಲ್ಲಿ ಕೊರಿಯಾದ ಕೊನ್‌ ಸೂನ್‌ ವೂ ವಿರುದ್ಧ; ಮೂರನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ 6–2, 6–1, 7–5 ರಲ್ಲಿ ಅರ್ಜೆಂಟಿನಾದ ಫೆಡೆರಿಕೊ ಕೊರಿಯ ಎದುರು ಗೆದ್ದರು.

ವೀನಸ್‌– ಸೆರೆನಾಗೆ ಸೋಲು: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ವೀನಸ್‌ ವಿಲಿಯಮ್ಸ್‌ ಜೋಡಿಗೆ ಸೋಲು ಎದುರಾಯಿತು. 2018ರ ಬಳಿಕ ಇದೇ ಮೊದಲ ಬಾರಿಗೆ ಜತೆಯಾಗಿ ಆಡಿದ ವಿಲಿಯಮ್ಸ್ ಸಹೋದರಿಯರು 6–7, 4–6 ರಲ್ಲಿ ಜೆಕ್‌ ಗಣರಾಜ್ಯದ ಲಿಂಡಾ ನೊಸ್ಕೊವಾ– ಲೂಸಿ ಹ್ರದೆಕಾ ಎದುರು ಪರಾಭವಗೊಂಡಿತು.

ಸೆರೆನಾ ಅವರು ಮಹಿಳೆಯ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಯ್ಲಾ ಟೋಮ್ಲಿಯಾನೊವಿಚ್‌ ಅವರನ್ನು ಎದುರಿಸುವರು.

ಸ್ವಟೆಕ್‌ ಜಯಭೇರಿ: ಅಗ್ರಶ್ರೇಯಾಂಕದ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಟೆಕ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಅವರು 6–3, 6–2 ರಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್‌ ವಿರುದ್ಧ ಗೆದ್ದರು. ವಿಕ್ಟೋರಿಯಾ ಅಜರೆಂಕಾ 6–2, 6–3 ರಲ್ಲಿ ಉಕ್ರೇನ್‌ನ ಮಾರ್ಟಾ ಕೊತ್ಸುಕ್‌ ಅವರನ್ನು ಮಣಿಸಿದರು.

ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಸ್ಪೇನ್‌ನ ಪೌಲಾ ಬಡೊಸಾ ಅವರು ಆಘಾತ ಅನುಭವಿಸಿದರು. ಕ್ರೊಯೇಷ್ಯದ ಪೆಟ್ರಾ ಮಾರ್ಟಿಚ್‌ 6–7, 6–1, 6–2 ರಲ್ಲಿ ಬಡೊಸಾ ಎದುರು ಗೆದ್ದರು.

2021 ರಲ್ಲಿ ಇಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ರಷ್ಯಾದ ಅರ್ಯಾನ ಸಬಲೆಂಕಾ 2-6, 7-6, 6-4 ರಲ್ಲಿ ಎಸ್ಟೋನಿಯದ ಕಾಯಾ ಕನೆಪಿ ಅವರನ್ನು ಮಣಿಸಿದರು.

ಬೋಪಣ್ಣ, ರಾಮನಾಥನ್‌ಗೆ ಸೋಲು
ಭಾರತದ ರೋಹನ್‌ ಬೋಪಣ್ಣ ಮತ್ತು ರಾಮಕುಮಾರ್‌ ರಾಮನಾಥನ್‌ ಅವರು ಡಬಲ್ಸ್‌ ವಿಭಾಗದಲ್ಲಿ ತಮ್ಮ ಪಂದ್ಯಗಳಲ್ಲಿ ಮೊದಲ ಸುತ್ತಿನಲ್ಲೇ ಸೋತರು.

ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮಟ್ವೆ ಮಿಡ್ಲ್‌ಕೂಪ್‌ ಜೋಡಿ ಪುರುಷರ ಡಬಲ್ಸ್‌ನಲ್ಲಿ 6–7, 2–6 ರಲ್ಲಿ ಇಟಲಿಯ ಆಂಡ್ರೆ ವವಸೊರಿ– ಲೊರೆನ್ಜೊ ಸೊನೆಗೊ ಎದುರು ಪರಾಭವಗೊಂಡಿತು. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ– ಚೀನಾದ ಯಾಂಗ್ ಜಾವೊಕ್ಸುವಾನ್ 5–7, 5–7 ರಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್‌ ಪರ್ಸೆಲ್– ಗ್ಯಾಬ್ರಿಯೆಲಾ ದಬ್ರೊವ್‌ಸ್ಕಿ ಎದುರು ಸೋತರು.

ಪುರುಷರ ಡಬಲ್ಸ್‌ನಲ್ಲಿ ರಾಮಕುಮಾರ್‌ ರಾಮನಾಥನ್ ಮತ್ತು ಸರ್ಬಿಯದ ನಿಕೊಲ್ ಕಾಸಿಚ್‌ 4–6, 4–6 ರಲ್ಲಿ ಇಟಲಿಯ ಸಿಮೊನ್‌ ಬೊಲೆಲಿ– ಫ್ಯಾಬಿಯೊ ಫಾಗ್ನಿನಿ ಎದುರು ಮುಗ್ಗರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT