ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಜೊಕೊವಿಚ್, ರೂಡ್‌ ಶುಭಾರಂಭ

Published 30 ಆಗಸ್ಟ್ 2023, 4:24 IST
Last Updated 30 ಆಗಸ್ಟ್ 2023, 4:24 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲೆರ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸರ್ಬಿಯದ ನೊವಾಕ್‌ ಜೊಕೊವಿಚ್, ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯವನ್ನು ಅವರು 6-0, 6-2, 6-3 ರಿಂದ ಗೆದ್ದುಕೊಂಡರು. 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌, 1 ಗಂಟೆ 35 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಸರ್ಬಿಯದ 36 ವರ್ಷದ ಆಟಗಾರ ಕೇವಲ ಮೂರು ಗೇಮ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟರು. ಅವರು ಎಂಟು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದರು.

2021ರ ಟೂರ್ನಿಯ ಫೈನಲ್‌ ಬಳಿಕ ಜೊಕೊವಿಚ್‌, ಇಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಕೋವಿಡ್‌ ಲಸಿಕೆ ತೆಗೆದುಕೊಳ್ಳದ ಕಾರಣ ಕಳೆದ ವರ್ಷ ಅವರಿಗೆ ಇಲ್ಲಿ ಆಡಲು ಅವಕಾಶ ನೀಡಿರಲಿಲ್ಲ.

ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ನಾರ್ವೆಯ ಕ್ಯಾಸ್ಪರ್‌ ರೂಡ್ 7-6, 3-6, 6-4, 7-6 ರಿಂದ ಅಮೆರಿಕದ ಎಮಿಲಿಯೊ ನವಾ ಅವರನ್ನು ಮಣಿಸಿದರೆ, ಏಳನೇ ಶ್ರೇಯಾಂಕದ ಆಟಗಾರ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್ 6–2, 6–3, 6–4 ರಿಂದ ಕೆನಡಾದ ಮಿಲೊಸ್‌ ರೋನಿಕ್‌ ವಿರುದ್ಧ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್‌ 6–2, 6–1, 6–2 ರಿಂದ ತಮ್ಮದೇ ದೇಶದ ಸ್ಟೀವ್ ಜಾನ್ಸನ್‌ ವಿರುದ್ಧ; ಇನ್ನೊಂದು ‘ಆಲ್‌ ಅಮೆರಿಕನ್‌’ ಹೋರಾಟದಲ್ಲಿ 10ನೇ ಶ್ರೇಯಾಂಕದ ಫ್ರಾನ್ಸೆಸ್‌ ಟೈಫೊ 6–2, 7–5, 6–1 ರಿಂದ ಲರ್ನೆರ್‌ ಟಿಯೆನ್‌ ವಿರುದ್ಧ; ಅಮೆರಿಕದ ಟಾಮಿ ಪಾಲ್ 6-2, 6-3, 4-6, 6-1 ರಿಂದ ಇಟಲಿಯ ಸ್ಟಫಾನೊ ಟ್ರವಾಗ್ಲಿಯಾ ವಿರುದ್ಧ ಜಯಿಸಿದರು.

ಗಾಫ್‌, ರಿಬಾಕಿನಾ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಆತಿಥೇಯ ದೇಶದ ಭರವಸೆ ಎನಿಸಿರುವ ಕೊಕೊ ಗಾಫ್‌ ಮತ್ತು ಕಜಕಸ್ತಾನದ ಎಲೆನಾ ರಿಬಾಕಿನಾ ಎರಡನೇ ಸುತ್ತಿಗೆ ಮುನ್ನಡೆದರು.

ಗಾಫ್‌ 3-6, 6-2, 6-4 ರಿಂದ ಜರ್ಮನಿಯ ಲಾರಾ ಸೀಗ್ಮಂಡ್‌ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ಇದಕ್ಕಾಗಿ ಅವರು 2 ಗಂಟೆ 50 ನಿಮಿಷಗಳನ್ನು ತೆಗೆದುಕೊಂಡರು. ಮೊದಲ ಸೆಟ್‌ ಸೋತಿದ್ದ ಗಾಫ್‌, ಆ ಬಳಿಕ ಪುಟಿದೆದ್ದು ನಿಂತರು. 19 ವರ್ಷದ ಗಾಫ್ ಈ ಬಾರಿ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ರಿಬಾಕಿನಾ 6–2, 6–1ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಮಾರ್ಟಾ ಕೊಸ್ತ್‌ಯುಕ್ ಎದುರು ಗೆದ್ದರು.

ಇತರ ಪ್ರಮುಖ ಪಂದ್ಯಗಳಲ್ಲಿ ಜೆಕ್‌ ರಿಪಬ್ಲಿಕ್‌ನ ಪೆಟ್ರಾ ಕ್ವಿಟೊವಾ 6–1,7–6 ರಿಂದ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ವಿರುದ್ಧ; ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಮುಕೋವಾ 6–4, 6–0 ರಿಂದ ಆಸ್ಟ್ರೇಲಿಯದ ಸ್ಟಾರ್ಮ್ ಸ್ಯಾಂಡರ್ಸ್‌ ವಿರುದ್ಧ; ಸ್ವಿಟ್ಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಚ್ 6–2, 6–4 ರಿಂದ ರಷ್ಯಾದ ಕ್ಯಾಮಿಲಾ ರಖಿಮೋವಾ ವಿರುದ್ಧ; ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6–1, 6–2 ರಿಂದ ಫ್ರಾನ್ಸ್‌ನ ಫಿಯೊನಾ ಫೆರಾ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT