ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

US Open 2022: ಸೆರೆನಾ ವಿಲಿಯಮ್ಸ್‌ಗೆ ಸೋಲು, ಟೆನಿಸ್‌ಗೆ ವಿದಾಯ

Last Updated 3 ಸೆಪ್ಟೆಂಬರ್ 2022, 5:19 IST
ಅಕ್ಷರ ಗಾತ್ರ

ನ್ಯೂಯಾರ್ಕ್: ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಶನಿವಾರ ಟೆನಿಸ್‌ ಕ್ರೀಡೆಗೆ ವಿದಾಯ ಹಾಡಿದ್ದಾರೆ.

ತವರು ನಾಡಿನಲ್ಲಿ ಸಾಗುತ್ತಿರುವ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನೊಂದಿಗೆ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದರು.

ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, 46ನೇ ರ‍್ಯಾಂಕ್‌ನ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7(4), 6-1ರ ಅಂತರದಲ್ಲಿ ಪರಾಭವಗೊಂಡರು.

ಮೊದಲ ಸೆಟ್‌ ಕಳೆದುಕೊಂಡ ಸೆರೆನಾ ದ್ವಿತೀಯ ಸೆಟ್‌ ಟೈ-ಬ್ರೇಕರ್‌ನಲ್ಲಿ ಗೆದ್ದು ಭರ್ಜರಿ ಪುನರಾಗಮನ ಮಾಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಸೋಲು ಅನುಭವಿಸಿದರು.

23 ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಕಿರೀಟಗಳ ಒಡತಿ...
40 ವರ್ಷದ ಸೆರೆನಾಈವರೆಗೆ ಒಟ್ಟು 23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ಮೂಲಕ ಆಧುನಿಕ ಟೆನಿಸ್ ಲೋಕದ ರಾಣಿ ಎನಿಸಿದ್ದಾರೆ.

ಹಾಗೆಯೇ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೇಟ್ ಕೋರ್ಟ್ (24) ಬಳಿಕ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಆಟಗಾರ್ತಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಟೆನಿಸ್ ವೃತ್ತಿ ಜೀವನದಲ್ಲಿ ವಿವಾದ ಸೇರಿದಂತೆ ಹಲವು ಏಳು-ಬೀಳುಗಳನ್ನು ಕಂಡಿರುವ ಸೆರೆನಾ, ತಲಾ ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್, ಆರು ಬಾರಿ ಅಮೆರಿಕನ್ ಓಪನ್ಮತ್ತು ಮೂರು ಸಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ:

1995ರಲ್ಲಿ 14ನೇ ಹರೆಯದಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟ ಸೆರೆನಾ, 1999ನೇ ಇಸವಿಯಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ (ಅಮೆರಿಕನ್ ಓಪನ್) ಜಯಿಸಿದರು. ಬಳಿಕ,ಅಲ್ಲಿಂದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದರು.

ಸೋದರಿ ವೀನಸ್ ವಿಲಿಯಮ್ಸ್ ಜೊತೆ ಸೇರಿ ಮಹಿಳಾ ಡಬಲ್ಸ್‌ ವಿಭಾಗದಲ್ಲೂ ಅಮೋಘ ಸಾಧನೆ ಮಾಡಿರುವ ಸೆರೆನಾ, ಒಟ್ಟು 14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಈ ಮೂಲಕ ಮಹಿಳಾ ಸಿಂಗಲ್ಸ್ ಹಾಗೂ ಮಹಿಳಾ ಡಬಲ್ಸ್ ವಿಭಾಗದಲ್ಲಿ 'ಕೆರಿಯರ್ ಗ್ರ್ಯಾನ್‌ಸ್ಲಾಮ್' ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಹಾಗೆಯೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಡಬಲ್ಸ್‌ನಲ್ಲಿ ಮೂರು ಬಾರಿ ಸ್ವರ್ಣ ಪದಕ ಜಯಿಸಿದ್ದರು.

ಭಾವುಕರಾದ ಸೆರೆನಾ...
'ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರಿಂದಾಗಿಯೇ ಇಷ್ಟು ದಶಕಗಳಿಂದ ಸ್ಪರ್ಧಿಸಲು ಸಾಧ್ಯವಾಯಿತು' ಎಂದು ಸೆರೆನಾ ಕಣ್ಣೀರು ಸುರಿಸುತ್ತಲೇ ಭಾವುಕರಾಗಿ ನುಡಿದರು.

'ನನ್ನ ಪೋಷಕರಿಂದಾಗಿ ಇವೆಲ್ಲವೂ ಪ್ರಾರಂಭವಾಯಿತು. ಎಲ್ಲ ಶ್ರೇಯಕ್ಕೂ ಅವರು ಅರ್ಹರು. ಹೆತ್ತವರಿಗೆ ಆಭಾರಿಯಾಗಿದ್ದೇನೆ. ಇದು ನನ್ನ ಆನಂದಭಾಷ್ಪ ಎಂದು ಭಾವಿಸುತ್ತೇನೆ. ವೀನಸ್ ಇಲ್ಲದಿರುತ್ತಿದ್ದರೆ ನಾನು ಸೆರೆನಾ ಆಗಲು ಸಾಧ್ಯವಾಗುತ್ತಿರಲಿಲ್ಲ. ವೀನಸ್ ಅವರಿಂದಾಗಿಯೇ ಸೆರೆನಾ ಅಸ್ವಿತ್ವದಲ್ಲಿದ್ದಾಳೆ' ಎಂದು ಸೋದರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಇದನ್ನೂ ಓದಿ:

ಸೆರೆನಾ ವಿಲಿಯಮ್ಸ್ ಗ್ರ್ಯಾನ್‌ಸ್ಲಾಮ್ ಸಾಧನೆ (ಮಹಿಳಾ ಸಿಂಗಲ್ಸ್)
ಆಸ್ಟ್ರೇಲಿಯನ್ ಓಪನ್ (2003, 2005, 2007, 2009, 2010, 2015, 2017)
ಫ್ರೆಂಚ್ ಓಪನ್ (2002, 2013, 2015)
ವಿಂಬಲ್ಡನ್ (2002, 2003, 2009, 2010, 2012, 2015, 2016)
ಅಮೆರಿಕನ್ ಓಪನ್ (1999, 2002, 2008, 2012, 2013, 2014)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT