ಮಂಗಳವಾರ, ಆಗಸ್ಟ್ 3, 2021
20 °C
ಆದಾಯ ಹೆಚ್ಚಳ, ಆಡಳಿತ ಸುಧಾರಣೆ ಗುರಿ

ಗದ್ದಲದ ನಡುವೆ ಆಯವ್ಯಯ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಾಯ ಸಂಗ್ರಹ ಹೆಚ್ಚಳದ ಗುರಿ, ಆಡಳಿತ ಸುಧಾರಣೆಯ ಕ್ರಮಗಳ ಕುರಿತ ಚಿತ್ರಣವನ್ನು ಬಿಬಿಎಂಪಿ ಬಜೆಟ್‌ ಮೇಲಿನ ಚರ್ಚಾ ಸಭೆಯ ಕೊನೆಯ ದಿನವಾದ ಶನಿವಾರ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ನೀಡಿದರು.

ಇದೇನಿದ್ದರೂ ಬೋಗಸ್‌ ಬಜೆಟ್‌, ಇದನ್ನು ವಾಪಸ್‌ ಕಳಿಸಿ ಎಂದು ಸಭೆಯ ಕೊನೆಯಲ್ಲಿ ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಆಡಳಿತ ಪಕ್ಷದವರು ಆಯವ್ಯಯವನ್ನು ಅನುಮೋದಿಸಿದರು.

ಮೂರು ದಿನಗಳಿಂದ ನಡೆದ ಚರ್ಚೆಯಲ್ಲಿ ಸದಸ್ಯರ ಪ್ರಶ್ನೆ, ಸಂದೇಹ, ಗೊಂದಲಗಳಿಗೆ ಆಯುಕ್ತರು ಪ್ರತಿಕ್ರಿಯೆ ನೀಡಿದರು. 

ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ

‘ಪಾಲಿಕೆಗೆ ₹ 824 ಕೋಟಿ ತೆರಿಗೆ ಬಾಕಿಯಿದೆ. ತೆರಿಗೆ ಬಾಕಿಯಿರಿಸಿದ 1,512 ಮಂದಿಯ ಆಸ್ತಿ ಜಪ್ತಿಗೆ ವಾರಂಟ್‌ ಹೊರಡಿಸಿದ್ದೇವೆ. ಹೀಗಾದಾಗ ₹ 150 ಕೋಟಿ ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿಯಲ್ಲಿ ನೋಂದಣಿಯಾಗುವ ದಾಖಲೆಗಳ ಮುದ್ರಾಂಕ ಶುಲ್ಕದಲ್ಲಿ ಶೇ 2ರಷ್ಟನ್ನು ಪಾಲಿಕೆಗೆ ಕೊಡಬೇಕು ಎಂದೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ರಕ್ಷಣಾ ಇಲಾಖೆಯವರು ಪಾಲಿಕೆಯ ಸೌಲಭ್ಯ ಬಳಸುತ್ತಿದ್ದಾರೆ. ಹೀಗಾಗಿ ಅವರು ಶೇ 25ರಷ್ಟು ಸೇವಾ ಶುಲ್ಕ ಪಾವತಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಆದೇಶವೇ ಇದೆ’ ಎಂದರು.

ಸುಲಿಗೆ ಶಾಲೆಗಳಿಗೂ ಆಸ್ತಿ ತೆರಿಗೆ

‘ಸರ್ಕಾರಿ, ಅನುದಾನಿತ ಹೊರತುಪಡಿಸಿ ದುಬಾರಿ ಡೊನೇಷನ್‌ ಪಡೆಯುವ ಶಾಲೆಗಳಿಗೆ ಇನ್ನುಮುಂದೆ ಆಸ್ತಿ ತೆರಿಗೆ ಕಟ್ಟುವಂತೆ ನಿಯಮ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅದು ಶೀಘ್ರವೇ ಅನುಮೋದನೆಗೊಳ್ಳಲಿದೆ. ಇದುವರೆಗೆ ಅವರು ಶೇ 25ರಷ್ಟು ಸೇವಾ ಶುಲ್ಕ ಮಾತ್ರ ಕಟ್ಟುತ್ತಿದ್ದರು. ಇನ್ನು ಮುಂದೆ ಅವರೂ ತೆರಿಗೆ ವ್ಯಾಪ್ತಿಗೆ ಒಳಪಡಲಿದ್ದಾರೆ’ ಎಂದು ಆಯುಕ್ತರು ಹೇಳಿದರು.

ಬೀದಿ ದೀಪ; ವಿದ್ಯುತ್‌ ಉಳಿತಾಯದ ಕ್ರಮ

ಪಾಲಿಕೆ ವ್ಯಾಪ್ತಿಯಲ್ಲಿ 4.85 ಲಕ್ಷ ಬೀದಿ ದೀಪಗಳಿವೆ. ಸದ್ಯ ತಿಂಗಳಿಗೆ ₹ 20 ಕೋಟಿ ವಿದ್ಯುತ್‌ ಬಿಲ್‌ ಬರುತ್ತದೆ. ಇದನ್ನು ಉಳಿಸುವ ದೃಷ್ಟಿಯಿಂದ ಎಲ್ಲ ಕಡೆ ಎಲ್‌ಇಡಿ ದೀಪ ಅಳವಡಿಸಲಾಗುವುದು. ಪ್ರತಿ ರಸ್ತೆಗೆ ಎಷ್ಟು ಪ್ರಮಾಣದ ಬೆಳಕು ಬೇಕು ಎಂಬುದನ್ನು ಭಾರತೀಯ ಮಾನದಂಡದ ಪ್ರಕಾರ ಅಳೆಯಲಾಗಿದೆ. ಈ ನಿರ್ದಿಷ್ಟ ಮಾನದಂಡಕ್ಕಿಂತ ಹೆಚ್ಚು ಪ್ರಮಾಣದ ಬೆಳಕು ನೀಡುವ ದೀಪಗಳನ್ನೇ ಅಳವಡಿಸಲಾಗುವುದು ಎಂದರು.

ದೀಪಗಳನ್ನು ತಾವೇ ಅಳವಡಿಸಿ ನಿರ್ವಹಿಸಲು ಮೂರು ಕಂಪನಿಗಳು ಮುಂದೆ ಬಂದಿವೆ. ಅವುಗಳ ಪೈಕಿ ಒಂದು ಕಂಪನಿ ಶೇ 85ರಷ್ಟು ಶಕ್ತಿ ಉಳಿತಾಯ ಮಾಡುವುದಾಗಿ ಘೋಷಿಸಿದೆ. ಇದು ಯಶಸ್ವಿಯಾದಲ್ಲಿ ವಿದ್ಯುತ್‌ ಬಿಲ್‌ ₹ 3 ಕೋಟಿಗೆ ಇಳಿಯಲಿದೆ. ಉಳಿದ ನಿರ್ವಹಣಾ ವೆಚ್ಚ, ಉಳಿತಾಯದ ಮೊತ್ತವನ್ನು ಲೆಕ್ಕ ಹಾಕಿ ಕಂಪನಿಗೆ ಪಾವತಿಸಲಾಗುವುದು. ಇದರಲ್ಲಿ ಬಿಬಿಎಂಪಿಯಿಂದ ಯಾವುದೇ ಹೂಡಿಕೆ ಇರುವುದಿಲ್ಲ. ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ, ದೀಪದಲ್ಲಿ ಕ್ಯಾಮೆರಾ ಅಳವಡಿಸುವ ವ್ಯವಸ್ಥೆಯೂ ಇರಲಿದೆ ಎಂದು ಆಯುಕ್ತರು ವಿವರಿಸಿದರು.

ಡಯಾಲಿಸೀಸ್‌ ಕೇಂದ್ರಗಳ ಬಳಕೆ, ಮೊಬೈಲ್‌ ಟವರ್‌ ಅಳವಡಿಕೆಗೆ ₹ 1 ಲಕ್ಷ ಶುಲ್ಕ ವಸೂಲು, ನಾಯಿ ಹಾವಳಿ ನಿಯಂತ್ರಣದ ಕುರಿತು ಆಯುಕ್ತರು ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು