ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಸೆಳೆದು ಸರ್ಕಾರ ಕೆಡವಲು ಬಿಜೆಪಿ ತಂತ್ರ?

Last Updated 23 ಡಿಸೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ಸಿನ ಅತೃಪ್ತ ಶಾಸಕರ ಜೊತೆ ಸಂ‍ಪರ್ಕ ಸಾಧಿಸಿರುವ ಬಿಜೆಪಿ ನಾಯಕರು, ಸಮ್ಮಿಶ್ರ ಸರ್ಕಾರ ಕೆಡವಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಕಾಂಗ್ರೆಸ್‌ ಒಳಗಿನ ಅತೃಪ್ತಿ ಮೇಲ್ನೋಟಕ್ಕೆ ಸಾಮಾನ್ಯ ಎನಿಸುವಂತಿದ್ದರೂ, ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ಶಾಸಕರೂ ಹಲವು ಬಣಗಳಾಗಿದ್ದಾರೆ. ಸಚಿವ ಸ್ಥಾನ ಹಂಚಿಕೆ ಸಂದರ್ಭದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಇದು ರಾಜ್ಯದಕೆಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಾಗಿ, ಅತೃಪ್ತಿ ಶಮನಗೊಳಿಸುವ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕಾಗಿದೆ. ಇತರ ನಾಯಕರು ಈ ವಿಷಯದಲ್ಲಿ ಮೌನ ವಹಿಸುವ ಸಾಧ್ಯತೆ ಇದೆ.

ಸಂಪುಟ ಪುನಾರಚನೆಯಿಂದ ಉಂಟಾಗಿರುವ ಈ ಅಸಮಾಧಾನದ ಲಾಭ ಪಡೆದುಕೊಂಡು ಅತೃಪ್ತರ ಮೂಲಕವೇ ಇತರ ಕೆಲವು ಶಾಸಕರನ್ನೂ ಪಕ್ಷದತ್ತ ಸೆಳೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ವಾರದೊಳಗೆ ಯಶಸ್ಸು ಕಾಣುವ ವಿಶ್ವಾಸವನ್ನೂ ಈ ನಾಯಕರು ಹೊಂದಿದ್ದಾರೆ ಎಂಬ ಮಾತೂ ಇದೆ.

ಸಂಪುಟದಲ್ಲಿ ಹಾಗೂ ನಿಗಮ ಮಂಡಳಿಯಲ್ಲೂ ಅವಕಾಶ ಸಿಗದ ಶಾಸಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಕಮಲ ಪಕ್ಷದ ಸ್ಥಳೀಯ ನಾಯಕರು ನಡೆಸುತ್ತಿದ್ದಾರೆ. ಅವರು ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸು
ವುದಕ್ಕೆ ನೆರವಾಗುತ್ತಿದ್ದಾರೆ. ಶೀಘ್ರದಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಖಚಿತ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದರು.

ಹೈಕಮಾಂಡ್‌ ಮೊರೆಗೆ ನಿರ್ಧಾರ: ಸಮ್ಮಿಶ್ರ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಾತಿನಿಧ್ಯ ನೀಡದಿರುವುದು ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಸಂಪುಟದಲ್ಲಿ
ಸ್ಥಾನ ಕಲ್ಪಿಸಬೇಕು ಅಥವಾ ಪಕ್ಷದಲ್ಲಾದರೂ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿದ್ದಾರೆ. ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಿಬಿಎಂಪಿಯ ಕಾಂಗ್ರೆಸ್‌ ಸದಸ್ಯರು, ನಗರದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳುಒತ್ತಾಯಿಸಿದ್ದಾರೆ. ರೆಡ್ಡಿ ಅವರಿಗಾದ ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‍ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಖಾತೆ ತ್ಯಜಿಸಲು ನಿರಾಕರಣೆ?

ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೊಂದಿದ್ದಾರೆ. ಅವರು ಈ ಎರಡೂ ಖಾತೆಗಳನ್ನು ಬಿಟ್ಟುಕೊಡಲು ತಯಾರಿಲ್ಲ ಎಂದು ಅವರಾಪ್ತ ಮೂಲಗಳು ತಿಳಿಸಿವೆ. ಆದರೆ, ಪರಮೇಶ್ವರ ಬಳಿ ಇರುವ ಈ ಎರಡೂ ಖಾತೆಗಳನ್ನು ಹಿಂಪಡೆದು, ಅವರಿಗೆ ಬೇರೆ ಖಾತೆಗಳ ಜವಾಬ್ದಾರಿ ಕೊಡುವಂತೆ ಹೈಕಮಾಂಡ್‌ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೋಮವಾರ ರಾತ್ರಿ ನಗರಕ್ಕೆ ಬರಲಿದ್ದು, ಬಳಿಕ ಖಾತೆ ಮರು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT