ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದರ ಹೆಸರಷ್ಟೇ ಕ್ಲಾಸಿಕ್‌ ಪ್ಯಾರಡೈಸ್‌!

ರಸ್ತೆಯ ತುಂಬೆಲ್ಲಾ ಹಳ್ಳ, ಹರಿಯುತ್ತಿದೆ ಕೊಳಚೆ ನೀರು
Last Updated 3 ಜೂನ್ 2019, 20:15 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ರಸ್ತೆಯ ತುಂಬೆಲ್ಲಾ ಹಳ್ಳಗಳು, ಹಳ್ಳದಲ್ಲಿ ನಿಂತ ನೀರು, ಕೆಸರಿನಲ್ಲಿ ಹೂತುಕೊಂಡಿದ್ದ ಕ್ಯಾಬ್, ರಸ್ತೆಯುದ್ದಕ್ಕೂ ಹಾಕಿರುವ ಮಣ್ಣಿನ ಗುಡ್ಡೆಗಳು, ಮ್ಯಾನ್ ಹೋಲ್ ಒಡೆದು ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು, ಮೂಗು ಮುಚ್ಚೇ ಓಡಾಡಬೇಕು ಎನ್ನುವಷ್ಟು ಗಬ್ಬುನಾತ....

ಇವು ಬೇಗೂರು ರಸ್ತೆಯ ಕ್ಲಾಸಿಕ್ ಪ್ಯಾರಡೈಸ್‌ ಲೇಔಟ್‌ನಲ್ಲಿ ಕಂಡ ದೃಶ್ಯಗಳು.

ಒಂದೂವರೆ ವರ್ಷದ ಹಿಂದೆ ಕಾವೇರಿ ಕುಡಿಯುವ ಪೈಪ್‌ಲೈನ್ ಹಾಗೂ ಒಳಚರಂಡಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಅಗೆದು ಕಾಮಗಾರಿ ಆರಂಭಿಸಿದ್ದರೂ ಈವರೆಗೂ ದಡ ಮುಟ್ಟಿಲ್ಲ. ವಿವಿಧ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಬೃಹತ್ ಗಾತ್ರದ ಮುಖ್ಯ ಪೈಪ್‌ಲೈನ್ ಲೇಔಟ್‌ನ ಮುಖ್ಯರಸ್ತೆಯಲ್ಲೇ ಹಾದು ಹೋಗಿದೆ. ನಾಲ್ಕು ತಿಂಗಳ ಹಿಂದೆ ಒಳಚರಂಡಿ ಪೈಪ್ ಹಾಕಿದ್ದು, ಮನೆಗಳಿಗೆ ಸಂಪರ್ಕ ಕೊಡುವ ಮೊದಲೇ ಅದನ್ನೂ ಕಿತ್ತು ಹಾಕಲಾಗುತ್ತಿದೆ.

‘ಕಾವೇರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆ ಕಾಲಮಿತಿಯಲ್ಲಿ ಕೆಲಸ ಮುಗಿಸುತ್ತಿಲ್ಲ. ಕಾಮಗಾರಿ ಪ್ರಗತಿ ಬಗ್ಗೆ ಜಲಮಂಡಳಿ ಎಂಜಿಯಯರ್‌ಗಳು ಬಂದು ಪರಿಶೀಲನೆ ನಡೆಸಿದ್ದೂ ಇಲ್ಲ’ ಎಂಬುದು ಸ್ಥಳೀಯರ ಆರೋಪ.

‘ಮೊಬೈಲ್ ಕಂಪನಿಗಳು ಓಎಫ್‌ಸಿ ಕೇಬಲ್ ಅಳವಡಿಕೆಗಾಗಿ ರಾತ್ರೋರಾತ್ರಿ ರಸ್ತೆ ಅಗೆದು, ಪೈಪ್‌ಲೈನ್‌ಗೆ ಹಾನಿ ಮಾಡಿವೆ. ಇದರಿಂದ ಕೆಲಸ ನಿಧಾನವಾಗುತ್ತಿದೆ. ಕಾಮಗಾರಿ ಮುಗಿಯುವವರೆಗೂ ಬೇರೆ ಯಾರಿಗೂ ಅವಕಾಶ ಮಾಡಕೂಡದೆಂದು ಬಿಬಿಎಂಪಿ ಮತ್ತು ಬೆಸ್ಕಾಂಗೆ ಪತ್ರ ಬರೆದು ಕೋರಿದ್ದೇವೆ. ಆದರೂ ಖಾಸಗಿ ಕಂಪನಿಗಳ ಉಪಟಳ ನಿಂತಿಲ್ಲ’ ಎನ್ನುತ್ತಾರೆ ಜಲಮಂಡಳಿ ಸಹಾಯಕ ಇಂಜಿನಿಯರ್ ರಾಮಕುಮಾರ್.

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಮತ್ತು ಖಾಸಗಿ ಕಂಪನಿಗಳು ಒಟ್ಟಿಗೆ ಕಾಮಗಾರಿ ಆರಂಭಿಸಿದ್ದು ಸಮಸ್ಯೆಗೆ ಮೂಲ. ಸಮನ್ವಯದಿಂದ ಕೆಲಸ ಆರಂಭಿಸಿದ್ದರೆ ಪರಿಸ್ಥಿತಿ ಈ ರೀತಿ ಕೆಡುತ್ತಿರಲಿಲ್ಲ ಎಂಬುದು ಸ್ಥಳೀಯರೊಬ್ಬರ ಅಭಿಪ್ರಾಯ.

ಇತ್ತೀಚೆಗೆ ಕಸ ಮಿಶ್ರಿತ ಮಣ್ಣನ್ನು ರಸ್ತೆಯ ತುಂಬಾ ಸುರಿಯಲಾಗಿದೆ. ಈ ಮಣ್ಣು ಏಕೆಂದು ಸ್ಥಳೀಯರು ಪ್ರಶ್ನಿಸಿದರೆ ‘ಇಲ್ಲಿ ಮಳೆ ಬಂದಾಗ ನೀರು ನಿಲ್ಲುವುದರಿಂದ ರಸ್ತೆಯನ್ನು ಎತ್ತರಿಸುತ್ತಿದ್ದೇವೆ’ ಎಂಬ ಉತ್ತರ ಬಿಬಿಎಂಪಿ ಎಂಜಿನಿಯರ್‌ ಅವರಿಂದ ಬಂದಿದೆ. ರಸ್ತೆ ಎತ್ತರಿಸಿದ್ದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗುವುದಿಲ್ಲವೇ ಎಂಬ ಸ್ಥಳೀಯರ ಪ್ರಶ್ನೆಗೆ ಅಧಿಕಾರಿಗಳಿಂದ ಮೌನವೇ ಉತ್ತರ.

‘ಕ್ಲಾಸಿಕ್ ಪ್ಯಾರಡೈಸ್ ಲೇಔಟ್ ಸದ್ಯ ‘ಪ್ಯಾರಡಸ್ಟ್’ ಬಡಾವಣೆಯಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ರಸ್ತೆ ಅಗೆಯುವುದು ತಪ್ಪಲ್ಲ. ಆದರೆ, ಅದನ್ನು ಮೊದಲಿನಂತೆಯೇ ಸರಿಪಡಿಸಿಕೊಡಬೇಕಲ್ಲವೇ? ಸದ್ಯ ನಾವು ಇಲ್ಲಿ ಓಡಾಡುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪದ್ಮನಾಭನ್.

‘ಕ್ಲಾಸಿಕ್ ಲೇಔಟ್‌ಗೆ ಹೊರಗಿನಿಂದ ಇಲ್ಲಿ ಬೆಳಗಿನ ವಾಯುವಿಹಾರಕ್ಕೆ ಬರುತ್ತಿದ್ದರು. ಅಷ್ಟು ಚೆನ್ನಾಗಿದ್ದ ಲೇಔಟ್, ಸದ್ಯ ಕೆಸರಿನಿಂದ ಆವೃತವಾಗಿದೆ. ಮಳೆ ಬಂದರೆ ಕೆಸರು ಮೆತ್ತಿಕೊಂಡು ಇರಬೇಕು. ವಿದ್ಯುತ್ ಲೈನ್ ಮಕ್ಕಳಿಗೆ ಎಟುಕುವಷ್ಟು ಕೆಳಗಿದೆ. ಈ ಬಗ್ಗೆ ಬೆಸ್ಕಾಂ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿವಾಸಿ ಗಣೇಶ್.

ಡಿಎಲ್‌ಎಫ್, ಅಕ್ಷಯ ನಗರ, ಹುಳಿಮಾವು ಕಡೆಗೆ ಹೋಗುವವರು ಲೇಔಟ್‌ನ ಮುಖ್ಯರಸ್ತೆಯನ್ನೇ ಬಳಸುತ್ತಾರೆ. 2017ರ ನವೆಂಬರ್ ನಲ್ಲಿ ಆರಂಭವಾದ ಕಾಮಗಾರಿ ಇನ್ನೂ ಮುಕ್ತಾಯ ಆಗಿಲ್ಲ. ಎರಡೆರಡು ಬಾರಿ ಪೈಪ್ ಲೈನ್ ಹಾಕಲಾಗಿದೆ. ಇದರಲ್ಲಿ ಭಾರಿ ಅವ್ಯವಹಾರ ಆಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿ ಲೋಕೇಶ್ ಶಂಕೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT