ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಗಾಗಿ ಖರ್ಗೆ; ದೇಶಕ್ಕಾಗಿ ಮೋದಿ

ಲೋಕಸಭೆ ಚುನಾವಣೆ
Last Updated 24 ಏಪ್ರಿಲ್ 2019, 11:50 IST
ಅಕ್ಷರ ಗಾತ್ರ

ಕಲಬುರ್ಗಿ: ಶಹಾಬಾದ್‌ ಸಮೀಪದ ರಾವೂರ ಕ್ರಾಸ್‌ ಮೂರು ರಸ್ತೆಗಳು ಕೂಡುವ ಸ್ಥಳ. ಅಲ್ಲಿನ ಚಹಾ ಅಂಗಡಿಯೊಂದರ ಮುಂದೆ ಕುಳಿತಿದ್ದವರು ರಾಜಕೀಯ ಚರ್ಚೆಯಲ್ಲಿ ತೊಡಗಿದ್ದರು. ‘ಚುನಾವಣೆ ವಾತಾವರಣ ಹೇಗಿದೆ?’ ಎಂದು ಮಾತಿಗೆ ಪೀಠಿಕೆ ಹಾಕಿದೆ. ‘ನಮ್ಮಲ್ಲಿ ಬಿಜೆಪಿ ಹವಾ ಇದೆ’ ಎಂದರು ರವಿ ಹಟಗಾರ. ಉಳಿದವರೂ ಕೂಡ ಗೋಣು ಆಡಿಸಿ ಸಮ್ಮತಿ ಸೂಚಿಸಿದರು. ಅವರು ಮಾತು ಮುಂದುವರಿಸಿ, ‘ನಮಗೆ ದೇಶ ಮುಖ್ಯ, ದೇಶಕ್ಕಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಮರ್ಥನೆಯನ್ನೂ ನೀಡಿದರು.

ಇಡೀ ಚರ್ಚೆ ಮೋದಿಮಯವಾಗಿತ್ತು. ಒಮ್ಮೆಲೆ ಧ್ವನಿಯೊಂದು ಅಬ್ಬರಿಸಿ ‘ಮೋದಿ ಎನ್ನುವುದೆಲ್ಲ ಬರೀ ಗಾಳಿಮಾತು. ಅವರ ಮಾತನ್ನು ನಂಬಬೇಡಿ. ಯಾರು ಕೆಲಸ ಮಾಡಿದ್ದಾರೋ, ಅವರಿಗೆ ಬೆಂಬಲ ನೀಡಬೇಕು. ಖರ್ಗೆ ಅವರ ಕೆಲಸದ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ತಿಳಿದುಕೊಳ್ಳಲಿ. ಮೋದಿಗೆ ಟಕ್ಕರ್‌ ಕೊಡುವವರು ಖರ್ಗೆ ಮಾತ್ರ. ಇಂಥವರು ಗೆಲ್ಲಬೇಕು’ ಎಂದು ಮಾಲಗತ್ತಿ ಗ್ರಾಮದ ಶರಣಪ್ಪ ಟೆಂಗಳಿ ಆಶಿಸಿದರು.

ಬಿಜೆಪಿ, ಮೋದಿ, ಯಡಿಯೂರಪ್ಪನವರ ಪರ ಮಾತನಾಡಿದವರೆಲ್ಲರೂ ಲಿಂಗಾಯತರು. ಖರ್ಗೆ ಪರ ವಕಾಲತ್ತು ವಹಿಸಿದ ಶರಣಪ್ಪ ಹಿಂದುಳಿದ ವರ್ಗದ ಕಬ್ಬಲಿಗ ಸಮಾಜಕ್ಕೆ ಸೇರಿದವರು.

ಕಳೆದ ಲೋಕಸಭೆ ಚುನಾವಣೆ ವೇಳೆ ರಾವೂರಿನಿಂದ ಚಿತ್ತಾಪುರಕ್ಕೆ ವಾಹನದಲ್ಲಿ ಸಂಚರಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಆದರೆ, ಈಗ ಅದೇ ರಸ್ತೆಯಲ್ಲಿ ಪ್ರಯಾಣಿಸಿದ್ದೇ ಗೊತ್ತಾಗಲಿಲ್ಲ!

ಚಿತ್ತಾಪುರ ಬಸ್‌ ನಿಲ್ದಾಣದ ಕಟ್ಟೆ ಮೇಲೆ ಕುಳಿತ ಐದಾರು ಮಂದಿ ಮಾತುಕತೆಯಲ್ಲಿ ತೊಡಗಿದ್ದರು. ‘ದನ–ಕರುಗಳು ಕುಡಿಯಲು ನೀರು ಇಲ್ಲದಂತಾಗಿದೆ. ಪ್ರಿಯಾಂಕ್‌ ಖರ್ಗೆ ಗಮನ ಹರಿಸುತ್ತಿಲ್ಲ’ ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದರು. ‘ಹಳ್ಳಿಗಳಿಗೆ ನೀರು ಕೊಡುವ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡಬೇಕು. ಅದಕ್ಕೂ ಶಾಸಕರಿಗೂ ಸಂಬಂಧ ಕಲ್ಪಿಸಬಾರದು’ ಎಂದು ಮತ್ತೊಬ್ಬರು ಪ್ರತಿಯಾಗಿ ಹೇಳಿದರು. ನನ್ನ ಹಾಜರಿಯಿಂದ ವಾದ–ಪ್ರತಿವಾದ ಅಲ್ಲಿಗೆ ನಿಂತಿತು. ‘ಹಾಗಿದ್ದರೆ ಈ ಚುನಾವಣೆಯಲ್ಲಿ ಯಾರಿಗೆ ವೋಟು ಮಾಡುತ್ತೀರಿ’ ಎಂದು ಕೇಳಿದೆ.

ಹಿರಿಯರಾದ ಸತ್ಯನಾರಾಯಣ ಹೊನ್ನಾಪುರ ತಮ್ಮ ಅಂಗಿಯ ತೋಳನ್ನು ಸ್ವಲ್ಪ ಮೇಲಕ್ಕೆ ಎಳೆದು ಮಣಿಕಟ್ಟಿಗೆ ಕಟ್ಟಿದ್ದ ಬ್ಯಾಂಡ್‌ ಅನ್ನು ನನ್ನ ಮುಂದೆ ಹಿಡಿದರು. ಅದರಲ್ಲಿ ‘ಕಲಬುರ್ಗಿಗಾಗಿ ಖರ್ಗೆ’ ಎಂದು ಬರೆಯಲಾಗಿತ್ತು. ‘ವಿರೋಧಿಗಳೆಲ್ಲ ಸೇರಿ ಖರ್ಗೆಯನ್ನು ಕಿತ್ತು ಒಗೆಯಬೇಕು ಅಂತ ಹೊರಟಿದ್ದಾರೆ. ನಾವು ಅವರನ್ನು ಉಳಿಸಿಕೊಳ್ಳಬೇಕು ಎಂದು ಹೊರಟಿದ್ದೀವಿ. ಮುಂದಿನದೆಲ್ಲ ದೈವದಾಟ’ ಎಂದು ದೇವರ ಮೇಲೆ ಭಾರ ಹಾಕಿ ನಿರುಮ್ಮಳರಾದರು.

ಶಹಾಬಾದ್‌ ಕಾರ್ಮಿಕ ಹೋರಾಟಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಸಿಮೆಂಟ್‌ ಕಾರ್ಖಾನೆ ಇತ್ತು. ಈಗ ಬಂದ್‌ ಆಗಿದೆ. ಆದರೆ, ಇಲ್ಲಿ ಸಿಗುವ ಪರಸಿ ಹೆಸರುವಾಸಿ. ಇದಕ್ಕೆ ‘ಶಹಾಬಾದ್‌ ಪರಸಿ’ ಎಂದೇ ಕರೆಯಲಾಗುತ್ತದೆ. ಈ ಊರಿನಲ್ಲಿ ದುಡಿಯುವ ವರ್ಗದವರು ಹೆಚ್ಚಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕಲ್ಲುಗಣಿಯಲ್ಲಿ ಕೆಲಸ ಮಾಡುವವರು. ಸರ್ಕಲ್‌ನ ಕಟ್ಟೆ ಮೇಲೆ ಕುಳಿತ ಯುವಕರು ಮೊಬೈಲ್‌ನಲ್ಲಿ ಏನನ್ನೋ ನೋಡುತ್ತಿದ್ದರು. ನಾನು ಅವರ ಮಧ್ಯೆ ಜಾಗ ಮಾಡಿಕೊಂಡೆ. ‘ನಮಗೆ ಕೆಳಗೆ ಕಾಂಗ್ರೆಸ್‌, ಮೇಲೆ ಮೋದಿ ಬೇಕು’ ಎಂದು ಹೇಳಿದರು. ಇವರಿಗೆ ಬಿಜೆಪಿ ಅಭ್ಯರ್ಥಿ ಜಾಧವ ಗೊತ್ತಿಲ್ಲ. ಆದರೆ, ‘ಖರ್ಗೆ ಒಳ್ಳೆಯ ಕೆಲಸಗಾರ’ ಎನ್ನುವುದನ್ನು ಗುಂಪಿನಲ್ಲಿದ್ದ ಶಂಕರ್‌ ಹೇಳುವುದನ್ನು ಮರೆಯಲಿಲ್ಲ.

ವಾಡಿ ಪಟ್ಟಣದಲ್ಲಿ ಎಸಿಸಿ ಸಿಮೆಂಟ್‌ ಕಾರ್ಖಾನೆ ಇದೆ. ಇಲ್ಲಿಯೂ ದುಡಿಯುವ ವರ್ಗ, ದಲಿತರು, ಮುಸ್ಲಿಮರು, ಲಂಬಾಣಿಗರು ಹೆಚ್ಚಾಗಿದ್ದಾರೆ. ಇಲ್ಲಿಯ ಅಂಬೇಡ್ಕರ್‌ ವೃತ್ತದಲ್ಲಿ ಮಾತನಾಡುತ್ತಿದ್ದ ಕಿಶನ್‌ ರೆಡ್ಡಿ ಜಾಧವ, ‘ಅಭಿವೃದ್ಧಿ ಅಂದ್ರೆ ಮೋದಿ, ಮೋದಿ ಅಂದ್ರೆ ಅಭಿವೃದ್ಧಿ. ಅವರ ಅಲೆಯಲ್ಲಿ ಉಮೇಶ ಜಾಧವ ಗೆಲ್ಲುತ್ತಾರೆ’ ಎಂದು ವಿಶ್ವಾಸದಿಂದಲೇ ಹೇಳಿದರು.

‘ನೀವು, ಜಾಧವ ಒಂದೇ ಸಮಾಜದವರು ಎನ್ನುವ ಕಾರಣಕ್ಕಾಗಿ ಹೀಗೆ ಹೇಳುತ್ತಿದ್ದೀರಾ?’ ಎಂದು ಕೆಣುಕಿದೆ. ಪಕ್ಕದಲ್ಲೇ ಇದ್ದ ಹಿರಿಯರಾದ ಸೇಪು ಸೋಮ್ಲಾ ‘ಖರ್ಗೆಯವರಿಗೆ ಕಸ ಹೊಡೆಯಲು ನಮ್ಮಂಥವರು ಬೇಕು, ಅಧಿಕಾರಕ್ಕೆ ಮಗ ಬೇಕು. ಈಗ ಅವಕಾಶ ಸಿಕ್ಕಿದೆ. ನಮ್ಮ ಸಮಾಜದವರೆಲ್ಲ ಸಭೆ ಮಾಡಿ ಜಾಧವರನ್ನು ಗೆಲ್ಲಿಸಲು ನಿರ್ಧಾರ ಮಾಡಿದ್ದೇವೆ’ ಎಂದು ಖಡಕ್ಕಾಗಿಯೇ ಹೇಳಿದರು.

ಇದೇ ಪಟ್ಟಣದ ಮಾರುಕಟ್ಟೆಯಲ್ಲಿ ಸಿಕ್ಕ ಫಿರೋಜ್‌ಖಾನ್‌ಗೆ ಸ್ಥಳೀಯ ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪರೀತ ಸಿಟ್ಟು. ‘ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಬಿಟ್ಟು ನಾಲ್ಕಾರು ಮಂದಿಗೆ ಮಾತ್ರ ಆದ್ಯತೆ ನೀಡುತ್ತಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದಲೇ ಅವರು ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದು’ ಎಂದು ಕಿಡಿ ಕಾರಿದರು.

ನಿಮಿಷಗಳು ಜಾರುತ್ತಿದ್ದಂತೆಯೇ ಆಕ್ರೋಶ ಕಡಿಮೆ ಆಯಿತು. ಮಾತು ಮೃದುವಾಯಿತು. ‘ಮಲ್ಲಿಕಾರ್ಜುನ ಖರ್ಗೆ ಸಾಬ್‌ನಂತಹ ಮತ್ತೊಬ್ಬ ನಾಯಕ ರಾಜ್ಯದಲ್ಲಿ ಹುಟ್ಟುವುದಿಲ್ಲ. ಅದ್ಭುತಕೆಲಸಗಾರ’ ಎಂದು ಹೊಗಳಿದರು.

ಪ್ರಯಾಣದ ಹಾದಿಯಲ್ಲಿ ಗಮನಿಸಿದಾಗ ಚುನಾವಣೆ ನಡೆಯುತ್ತಿದೆ ಎನ್ನುವ ಕುರುಹುಗಳೇ ಕಾಣಿಸುತ್ತಿರಲಿಲ್ಲ. ಅಲ್ಲಿಲ್ಲಿ ಸಿಕ್ಕ ಹಳ್ಳಿಗರನ್ನು ಮಾತನಾಡಿದಾಗ, ‘ಚುನಾವಣೆ ನಡೆಯುತ್ತಿರುವುದೇ ಗೊತ್ತಿಲ್ಲ. ಯಾರಾದರೂ ಬಂದು ವೋಟ್‌ ಮಾಡಿ ಎನ್ನುತ್ತಾರೆ. ಆಗ ಹೋಗಿ ಅವರು ಹೇಳಿದವರಿಗೆ ಹಾಕಿ ಬರುತ್ತೇವೆ’ ಎನ್ನುತ್ತಿದ್ದರು.

ಮಳಖೇಡದ ಜಾನುವಾರು ಸಂತೆಯಲ್ಲಿ ಸಿಕ್ಕ ಹೇಮಜಿ ‘ಸಂಜೆ ತನಕ ಬಿಜೆಪಿ, ಸಂಜೆ ನಂತರ ಖರ್ಗೆ ಅನ್ನುವ ಮಂದಿಯೂ ಇದ್ದಾರೆ. ಮುಚ್ಚಿ ಕೊಟ್ಟವರಿಗೆ ವೋಟು ಹಾಕ್ತಾರೆ. ಎಲ್ಲ ರೊಕ್ಕದ ಮೇಲೆ ನಿಂತಿದೆ’ ಎಂದು ಒಗಟಿನಂತೆ ಮಾತನಾಡಿದರು.

ಸೇಡಂ ವಿಧಾನಸಭೆ ಕ್ಷೇತ್ರದ ಜಿದ್ದಾಜಿದ್ದಿ ಭಿನ್ನವಾಗಿದೆ. ಇಲ್ಲಿ ಖರ್ಗೆ, ಜಾಧವ ಎನ್ನುವ ಬದಲು, ಮಾಜಿ ಸಚಿವ ಡಾ.ಶರಣಪ್ರಕಾಶ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಎನ್ನುವಂತಾಗಿದೆ. ಸೇಡಂ ಕ್ಷೇತ್ರದಿಂದ ಡಾ.ಶರಣಪ್ರಕಾಶ ಪಾಟೀಲ ಮೂರು ಬಾರಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಶರಣಪ್ರಕಾಶ ಅವರು ಖರ್ಗೆಯವರು ಮೆಚ್ಚಿನ ಶಿಷ್ಯ. ಆದ್ದರಿಂದ ಗುರುವಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್‌ ಕೊಡಬೇಕು ಎಂದು ಹಳ್ಳಿಹಳ್ಳಿಗಳನ್ನು ಸುತ್ತಿದ್ದಾರೆ. ಇದನ್ನು ಗಮನಿಸಿರುವ ಖಾಸಗಿ ಕಂಪನಿ ಉದ್ಯೋಗಿ ಅವಿನಾಶ ‘ಶರಣಪ್ರಕಾಶ ಪಾಟೀಲ ಅವರು ತಮ್ಮ ಚುನಾವಣೆಗೆ ಇಷ್ಟೊಂದು ಓಡಾಡಿ ಮತ ಕೇಳಿದ್ದರೆ ಖಂಡಿತ ಸೋಲುತ್ತಿರಲಿಲ್ಲ’ ಎಂದರು, ‘ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಾವೇ ಅಭ್ಯರ್ಥಿ ಎನ್ನುವಂತೆ ಓಡಾಡುತ್ತಿದ್ದಾರೆ. ಏಕೆಂದರೆ, ವಿಧಾನಸಭೆ ಚುನಾವಣೆಯಲ್ಲಿ ಶಿಷ್ಯನನ್ನು ಸೋಲಿಸಿದ್ದಾರೆ. ಈಗ ಗುರುವನ್ನು ಸೋಲಿಸಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ’ ಎಂದು ವ್ಯಾಖ್ಯಾನಿಸಿದರು.

ಮುಧೋಳ ಗ್ರಾಮ ಕರ್ನಾಟಕ–ತೆಲಂಗಾಣ ಗಡಿಯಲ್ಲಿದೆ. ಇಲ್ಲಿನ ಪಾನ್‌ಶಾಪ್‌ ಮುಂದೆ ಕುಳಿತಿದ್ದ ಗುತ್ತಿಗೆದಾರ ಶಿವಕುಮಾರ ಹುನಕೇರಿ ತಾವು ಯಾವ ಪಕ್ಷಕ್ಕೂ ಸೇರಿದವರಲ್ಲ ಎಂದು ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ಮಾತಿಗೆ ನಿಂತವರು, ‘ಮೋದಿ ಜಿಎಸ್‌ಟಿ ತಂದು ನಮಗೆಲ್ಲ ತೊಂದರೆ ಕೊಟ್ಟಿದ್ದಾನೆ. ಆದರೆ, ಯಾರಿಗೂ ಅದು ಸರಿಯಾಗಿ ಗೊತ್ತಾಗುತ್ತಿಲ್ಲ. ಯುವಜನತೆಗೆ ಖರ್ಗೆ ಅವರ ಕೆಲಸಗಳ ಪರಿಚಯವಿಲ್ಲ. ಆದ್ದರಿಂದ ಮೋದಿ ಜಪ ಮಾಡುತ್ತಿದೆ. ಸಂಸತ್‌ನಲ್ಲಿ ಮೋದಿಗೆ ಖರ್ಗೆಯವರು ಸಮರ್ಥವಾಗಿ ಉತ್ತರ ನೀಡಿ ವ್ಯಕ್ತಿ’ ಎಂದು ಅಭಿಮಾನಪಟ್ಟರು.

ಎಲ್ಲ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ಪಾನ್‌ಶಾಪ್‌ ಮಾಲೀಕ ಮಹ್ಮದ್‌ ಇಬ್ರಾಹಿಂ, ‘ಟಿ.ವಿ.ಯವರು ಮೋದಿಗೆ ಅನುಕೂಲವಾಗುವಂತೆ ಮಾತನಾಡುವವರ ಬಾಯಿಗೆ ಮೈಕ್‌ ಹಿಡಿಯು ತ್ತಾರೆ. ಮೋದಿ ಅಂದ್ರೆ ದೇಶನಾ?’ ಎಂದು ಕೂಲರ್‌ನ ತಂಪುಗಾಳಿಯ ನಡುವೆಯೂ ಕುದಿಯುತ್ತಿದ್ದರು.

ಕಲಬುರ್ಗಿಯ ಶರಣು ಪೂಜಾರಿ ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕ. ರಾಮ ನವಮಿ ದಿನ ನಡೆದ ಮೆರವಣಿಗೆಯಲ್ಲಿ ಯುವಕರು ‘ಮೋದಿ..ಮೋದಿ’ ಎಂದು ಹತ್ತಾರು ನಿಮಿಷ ಏಕಪ್ರಕಾರವಾಗಿ ಘೋಷಣೆ ಕೂಗಿರುವ ವಿಡಿಯೊ ವೈರಲ್‌ ಆಗಿರುವುದನ್ನು ತೋರಿಸಿ, ‘ಜೈ ಶ್ರೀರಾಮ್‌ ಜಾಗಕ್ಕೆ, ಜೈ ಮೋದಿ ಬಂದಿದೆ. ಹುಡುಗರಿಗೆ ಹಿಂದಿನದು ಗೊತ್ತಿಲ್ಲ. ಈಗ ಹೆಸರು ಮಾಡಿದವರನ್ನು ಮೆರೆಸುತ್ತಿದ್ದಾರೆ. ಕೆಲಸಗಾರ ಖರ್ಗೆಯನ್ನು ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗುರುಮಠಕಲ್‌–ಇದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಂಟು ಬಾರಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ ಊರು. ಇದು ರಾಜಕೀಯವಾಗಿ ಖರ್ಗೆ ಅವರಿಗೆ ‘ತವರು ಮನೆ’.

ಇಲ್ಲಿನ ಮೊಬೈಲ್‌ ಅಂಗಡಿಯ ಗೌಸ್‌ಖಾನ್‌ ಮಾತನಾಡಿ,‘ಖರ್ಗೆ ಸಾಬ್‌ ಗೆಲ್ಲುವುದರಲ್ಲಿ ಸಂಶಯವಿಲ್ಲ. ಆದರೆ ಲೀಡ್‌ ಕಡಿಮೆ ಆಗುತ್ತದೆ. ಏಕೆಂದರೆ, ಮಗ ಪ್ರಿಯಾಂಕ್‌ ಸಚಿವರಾಗಿದ್ದು, ಅವರ ಆಕ್ರಮಣಕಾರಿ ಮಾತುಗಳಿಂದ ಸ್ವಲ್ಪ ಹಿನ್ನಡೆಯಾಗಿದೆ. ಮೊದಲೆಲ್ಲ ಅವರಿಗೆ ವಿರೋಧಿಗಳೇ ಇರುತ್ತಿರಲಿಲ್ಲ. ಈಗ ವಿರೋಧಿಗಳು ಹೆಚ್ಚಾಗಿದ್ದಾರೆ. ಖರ್ಗೆ ಅವರ ಲೈಫ್‌ನಲ್ಲಿ ಇದು ಅತೀ ಕಠಿಣ ಚುನಾವಣೆ’ ಎಂದು ವಿಶ್ಲೇಷಿಸಿದರು.

ಇದು ಸುತ್ತಾಟದ ಸಂದರ್ಭದಲ್ಲೂ ಕಾಣಿಸುತ್ತಿತ್ತು.

ಕುಡುಕನ ಉತ್ತರ!
ರಾವೂರ ಕ್ರಾಸ್‌ನಲ್ಲಿ ಗುಂಪಿನ ಮಧ್ಯೆ ಕುಡುಕನೊಬ್ಬ ಸೇರಿಕೊಂಡಿದ್ದ. ಪದೇಪದೇ ಬಾಯಿ ಹಾಕುತ್ತಿದ್ದ. ‘ನೋಟ್‌ ಬ್ಯಾನ್‌ ಮಾಡಿದ್ದರೂ ನಾನು ಮೋದಿಗೇ ವೋಟ್‌ ಹಾಕೋದು’ ಎಂದ. ಅಲ್ಲೇ ಇದ್ದವರೊಬ್ಬರು ‘ದಾರು (ಮದ್ಯ) ಬಂದ್‌ ಮಾಡಿದರೇ’ ಎಂದು ಕೇಳಿದರು. ಆತ ಕೂಡಲೇ, ‘ಹೆಂಡತಿ, ಮಕ್ಕಳು ನೆಮ್ಮದಿಯಾಗಿರುತ್ತಾರೆ’ ಎಂದಾಗ ಇಡೀ ಗುಂಪು ನಗೆಗಡಲಲ್ಲಿ ತೇಲಿತು.

‘ಇಬ್ಬರ ಬಳಿಯೂ ತೆಗೆದುಕೊಳ್ಳುತ್ತೇನೆ’
‘ನಾನು ಇಬ್ಬರ ಬಳಿಯೂ ಹಣ ತೆಗೆದುಕೊಳ್ಳುತ್ತೇನೆ. ಆದರೆ, ವೋಟು ಮಾತ್ರ ಇಬ್ಬರಲ್ಲಿ ಒಬ್ಬರಿಗೆ ಹಾಕುತ್ತೇನೆ’ ಎಂದು ಚಿತ್ತಾಪುರದ ಮಲ್ಲಪ್ಪ ಸುಣಗಾರ ಹೇಳಿದರು.

‘ಇದು ತಪ್ಪಲ್ಲವೇ’ ಎಂದು ಕೇಳಿದಾಗ, ‘ಒಂದು ವೇಳೆ ನಾನು ಒಬ್ಬರ ಬಳಿ ಹಣ ತೆಗೆದುಕೊಂಡು, ಇನ್ನೊಬ್ಬರ ಬಳಿ ತೆಗೆದುಕೊಳ್ಳದೇ ಹೋದರೆ, ನಾನು ಆ ಪಾರ್ಟಿಗೆ ಸೇರಿದವನು ಎಂದು ಜಿದ್ದು ಸಾಧಿಸುತ್ತಾರೆ. ಆದ್ದರಿಂದ ಇಬ್ಬರ ಬಳಿಯೂ ತೆಗೆದುಕೊಳ್ಳುತ್ತೇನೆ’ ಎಂದು ಗುಟ್ಟೊಂದನ್ನು ಬಹಿರಂಗಪಡಿಸಿದರು.

ಲೋಕಸಭೆ ಚುನಾವಣೆ, ಕಲಬುರ್ಗಿಕಣದ ಬಗ್ಗೆ ಇನ್ನಷ್ಟು...

ಪ್ರಜಾವಾಣಿ ವಿಶೇಷಸಂದರ್ಶನಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT