ಸೋಮವಾರ, ಮಾರ್ಚ್ 27, 2023
24 °C
ಕಸ ಸುರಿಯುವುದರ ವಿರುದ್ಧ ಪ್ರತಿಭಟನೆ

ಜನರೊಂದಿಗೆ ಮಾತುಕತೆ ಸಚಿವ ಅಶೋಕ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ತಂದು ಕ್ವಾರಿಗಳಲ್ಲಿ ಸುರಿಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ದೊಡ್ಡಬಳ್ಳಾಪುರ, ಆನೇಕಲ್ಲು ಕ್ಷೇತ್ರಗಳ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ’ ಎಂದು ಕಂದಾಯ
ಸಚಿವ ಆರ್. ಅಶೋಕ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಮತ್ತು ಆನೇಕಲ್ ಶಾಸಕ ಶಿವಣ್ಣ ಈ ವಿಷಯ ಪ್ರಸ್ತಾಪಿಸಿ, ‘ದೊಡ್ಡಬಳ್ಳಾಪುರ, ಆನೆಕಲ್ಲು ಕ್ಷೇತ್ರಗಳಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಕ್ವಾರಿಗಳು ಹಾಗೂ ಟೆರ್ರಾಫಾರ್ಮ್ ಗಳಿಂದ ನಿವಾಸಿಗಳಿಗೆ ಭಾರಿ ತೊಂದರೆಯಾಗುತ್ತಿದೆ. ಇದನ್ನು ವಿರೋಧಿಸಿ ನಿವಾಸಿಗಳೂ ಘನತ್ಯಾಜ್ಯ ಹೋರಾಟ ಸಮಿತಿ ರಚಿಸಿ
ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯ ಸಂಸ್ಕರಣಾ ಘಟಕ ಅವೈಜ್ಞಾನಿಕವಾಗಿದೆ ಎಂದು ವರದಿ ನೀಡಿದ್ದಾರೆ. ಆದರೆ, ಸರ್ಕಾರ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರಿಗೆ ನಾವು
ಉತ್ತರಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಆಗ ಕೃಷ್ಣಬೈರೇಗೌಡ, ‘ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸುವುದು ಉತ್ತಮ’ ಎಂದು ಸಲಹೆ ನೀಡಿದರು.

ಅಶೋಕ ಉತ್ತರಿಸಿ, ‘ಕಸದ ಸಮಸ್ಯೆ ನಮ್ಮ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದಲ್ಲ. ಇದು ಹಲವು ವರ್ಷಗಳಿಂದ ಇರುವ ಸಮಸ್ಯೆ. ಅದರ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಂಬಂಧಿಸಿದ ಶಾಸಕರೊಂದಿಗೆ ಚರ್ಚಿಸಿ, ಪ್ರತಿಭಟನಕಾರರ ಮನವೊಲಿಸುತ್ತೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು