ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಡಿಆರ್‌’ ಪ್ರಕರಣದ ತನಿಖೆ ಸ್ಥಗಿತಕ್ಕೆ ಒತ್ತಡ?

Last Updated 22 ಮೇ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ‘ (ಟಿಡಿಆರ್‌) ವಂಚನೆ ಕುರಿತುನಡೆಯುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಯಿಂದ ಕೆಲವು ರಾಜಕಾರಣಿಗಳು ಆತಂಕಕ್ಕೊಳಗಾಗಿದ್ದು, ಪ್ರಕರಣದ ತನಿಖೆ ಸ್ಥಗಿತಗೊಳಿಸುವಂತೆ ತೆರೆಮರೆಯಲ್ಲಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಸದ್ಯ, ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನೊಂದರ ‘ಟಿಡಿಆರ್‌’ ವಂಚನೆ ‍ಹಗರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪುವ ಮೊದಲೇ ಬಂದಿರುವ ಇನ್ನೂ 20 ದೂರುಗಳ ಪ್ರಾಥಮಿಕ ತನಿಖೆಯನ್ನು ಎಸಿಬಿ ಪೂರ್ಣಗೊಳಿಸಿದೆ.

ಟಿಡಿಆರ್‌ ವ್ಯವಹಾರದಲ್ಲಿ ಬಿಬಿಎಂಪಿಯ ಕೆಲವು ಅಧಿಕಾರಿಗಳು, ರಿಯಲ್‌ ಎಸ್ಟೇಟ್‌ನಲ್ಲಿ ಸಕ್ರಿಯವಾಗಿರುವ ಕೆಲವು ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದು, ಬೆರಳೆಣಿಕೆಯಷ್ಟು ನಿರ್ಮಾಣ ಸಂಸ್ಥೆಗಳು 4ರಿಂದ 5ಲಕ್ಷ ಚದರಡಿವರೆಗೂ ‘ಅಭಿವೃಧ್ಧಿ ಹಕ್ಕು ಪತ್ರ‘ (ಡಿಆರ್‌ಸಿ– ಅಭಿವೃದ್ಧಿ ಹಕ್ಕು ಪಡೆದವರಿಗೆ ವಿತರಿಸುವ ಪತ್ರ) ಖರೀದಿಸಿವೆ ಎಂದು ಮೂಲಗಳು ತಿಳಿಸಿವೆ.

ಈಗ ಟಿಡಿಆರ್‌ ವಂಚನೆ ಪ್ರಕರಣದ ಬುಡವನ್ನೇಎಸಿಬಿ ಅಲುಗಾಡಿಸುತ್ತಿರುವುದರಿಂದ ಭಯ ಬಿದ್ದಿರುವ ಕೆಲವು ರಾಜಕಾರಣಿಗಳು ತನಿಖೆ ಸ್ಥಗಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಸರ್ಕಾರ ಒತ್ತಡಕ್ಕೆ ಮಣಿದಿಲ್ಲ. ಎಸಿಬಿ ಅಧಿಕಾರಿಗಳೂ ಸೊಪ್ಪು ಹಾಕಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬಿಬಿಎಂಪಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಹಾಗೂ ನಿವೇಶನಕ್ಕೆ ಪರ್ಯಾಯವಾಗಿ ಟಿಡಿಆರ್‌ ಹಕ್ಕು ವಿತರಿಸುವ ವ್ಯವಸ್ಥೆ 2005ರಿಂದ ಜಾರಿಗೆ ಬಂದಿದೆ. 2015ರವರೆಗೆ ಟಿಡಿಆರ್‌ ಹಕ್ಕು ಪಡೆದವರಿಗೆ ಡಿಆರ್‌ಸಿ ಪತ್ರ ವಿತರಿಸುವ ಅಧಿಕಾರ ಬಿಬಿಎಂಪಿ ಕೈಯಲ್ಲಿತ್ತು. ಆನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ವರ್ಗಾಯಿಸಲಾಗಿದೆ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ, ಹತ್ತು ವರ್ಷಗಳಲ್ಲಿ 22.08ಲಕ್ಷ ಚದರ ಮೀಟರ್‌ ಡಿಆರ್‌ಸಿ ವಿತರಿಸಿದೆ. ಇದರಲ್ಲಿ 10.98 ಲಕ್ಷ ಚದರ ಮೀಟರ್‌ ಹಕ್ಕು ಬಳಕೆಯಾಗಿದೆ. 11.09ಲಕ್ಷ ಚದರ ಮೀಟರ್‌ ಇನ್ನೂ ಬಳಕೆ ಆಗಬೇಕಿದೆ. ಆದರೆ, ವಾಸ್ತವದಲ್ಲಿ ಇದಕ್ಕೂ ಅಧಿಕ ಪ್ರಮಾಣದಲ್ಲಿ ಡಿಆರ್‌ಸಿ ವಿತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ಬ್ಯಾಂಕಿಗೂ ಹಗರಣಕ್ಕೂ ಸಂಬಂಧವಿಲ್ಲ’

‘ಟಿಡಿಆರ್’ ಹಗರಣಕ್ಕೂ ‘ಶ್ರೀ ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕಿಗೂ ಸಂಬಂಧವಿಲ್ಲ. ಆದರೂ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ’ ಎಂದು ಬ್ಯಾಂಕ್‌ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರ ಅಭ್ಯುದಯಕ್ಕಾಗಿ ಬ್ಯಾಂಕ್‌ ಶ್ರಮಿಸುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ಬ್ಯಾಂಕ್‌ ಠೇವಣಿ ₹ 70 ಕೋಟಿ ತಲುಪಿದ್ದು, ₹ 34 ಕೋಟಿಯನ್ನು ಸಾಲ ಹಾಗೂ ಮುಂಗಡವಾಗಿ ವಿತರಿಸಿದೆ. ₹ 38 ಕೋಟಿಯನ್ನು ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಸಾಲ ವಸೂಲಾತಿಯಲ್ಲೂ ಬ್ಯಾಂಕ್‌ ಮುಂಚೂಣಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿಡಿಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿಗೆ ಬ್ಯಾಂಕ್‌ ಸಂಪೂರ್ಣ ಸಹಕಾರ ನೀಡುತ್ತಿದೆ. ಇಷ್ಟಾದರೂ ಅನಗತ್ಯವಾಗಿ ಬ್ಯಾಂಕ್‌ ಹೆಸರನ್ನು ಎಳೆದು ತರುವ ಮೂಲಕ ಠೇವಣಿದಾರರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದ ವಹಿವಾಟಿನ ಮೇಲೂ ಪರಿಣಾಮ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

**

ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಗೆ ಹಾಜರಾಗುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.
- ವ್ಯವಸ್ಥಾಪಕರು, ಶ್ರೀ ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT