ಭಾನುವಾರ, ಸೆಪ್ಟೆಂಬರ್ 26, 2021
21 °C

ಗಾಲ್ವನ್‌ ಕಣಿವೆಯಲ್ಲಿ ಇನ್ನೂ ಮುಗಿದಿಲ್ಲ ಗಡಿ ಚಿಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಪೂರ್ವ ಲಡಾಖ್‌ನ ಸಂಘರ್ಷದ ಸ್ಥಳದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಆದರೆ, ವಿವಾದಾತ್ಮಕ ಗಡಿಯ ತನ್ನ ಭಾಗದಲ್ಲಿ ನಿಯೋಜಿಸಿರುವ ಭಾರಿ ಸಂಖ್ಯೆಯ ಸೈನಿಕರನ್ನು ವಾಪಸ್‌ ಕರೆಸುವ ಯಾವುದೇ ಸುಳಿವನ್ನು ಚೀನಾ ನೀಡಿಲ್ಲ. ಇದು ಭಾರತದ ಚಿಂತೆಗೆ ಕಾರಣವಾಗಿದೆ.

ಗಾಲ್ವನ್‌ ಕಣಿವೆಯಲ್ಲಿ ಜೂನ್‌ 15ರಂದು ಸಂಘರ್ಷ ನಡೆದ ಸ್ಥಳದಿಂದ ಎರಡೂ ದೇಶಗಳು ತಮ್ಮ ಸೈನಿಕರನ್ನು ಒಂದೂವರೆ ಕಿಲೋ
ಮೀಟರ್‌ನಷ್ಟು ಹಿಂದಕ್ಕೆ ಕರೆಸಿಕೊಂಡಿವೆ. ಒಂಬತ್ತು ವಾರಗಳ ಬಿಕ್ಕಟ್ಟು ಶಮನಕ್ಕಾಗಿ ಭಾರತ–ಚೀನಾದ ಸೇನೆಯ ಹಿರಿಯ ಅಧಿಕಾರಿಗಳ ನಡುವಣ ಮಾತುಕತೆಯಲ್ಲಿ ಒಪ್ಪಿಕೊಂಡಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಗಾಲ್ವನ್‌ ಕಣಿವೆಯಲ್ಲಿ ಭಾರತದ ಯೋಧರು ನಿಯಮಿತವಾಗಿ ಗಸ್ತು ನಡೆಸುತ್ತಿದ್ದರು.  ಜೂನ್‌ 30ರಂದು ನಡೆದ ಮಾತುಕತೆಯಲ್ಲಿ ಗಸ್ತು ಸ್ಥಗಿತಗೊಳಿಸಲು ಒಪ್ಪಿಕೊಳ್ಳಲಾಗಿದೆ. ಹೀಗಾಗಿ ಮುಂದಿನ ಸ್ವಲ್ಪ ಕಾಲ ಗಸ್ತು ನಡೆಸಲು ಸಾಧ್ಯವಾಗುವುದಿಲ್ಲ.

ಗಾಲ್ವನ್‌ ಕಣಿವೆಯ ಮೇಲೆ ಚೀನಾದ ಹಕ್ಕು ಪ್ರತಿಪಾದನೆಯನ್ನು ಭಾರತವು ಅಲ್ಲಗಳೆಯುತ್ತಲೇ ಬಂದಿದೆ. ಆದರೆ, ಈಗ ಚೀನಾವು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡದ್ದಕ್ಕೆ ಪ್ರತಿಯಾಗಿ ಭಾರತವೂ ತನ್ನ ಯೋಧರನ್ನು ಹಿಂದಕ್ಕೆ ಕರೆಸಿದೆ. ಗಸ್ತು ಸ್ಥಗಿತಕ್ಕೂ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಘರ್ಷ ತಪ್ಪಿಸುವುದಕ್ಕಾಗಿ ‘ಬಫರ್‌ ವಲಯ’ ರೂಪಿಸುವುದಕ್ಕೂ ಭಾರತ ಒಪ್ಪಿಕೊಂಡಿದೆ. 

‘ಬಫರ್‌ ವಲಯ ನಿರ್ಮಾಣ ಮತ್ತು ಗಸ್ತನ್ನು ಗಾಲ್ವನ್‌ ಕಣಿವೆ ಮತ್ತು ಶೋಕ ನದಿಯ ಪಶ್ಚಿಮಕ್ಕೆ ಸೀಮಿತಗೊಳಿಸುವ ಮೂಲಕ ಗಾಲ್ವನ್‌ ಕಣಿವೆಯಿಂದ ಭಾರತವು ಹೊರಗೆ ನಿಂತಂತಾಗುತ್ತದೆ. ಹೀಗಾಗಿ, ಇಡೀ ಗಾಲ್ವನ್ ಕಣಿವೆಯು ತನ್ನದು ಎಂಬ ಚೀನಾದ ಪ್ರತಿಪಾದನೆಗೆ ಒತ್ತು ದೊರೆಯುತ್ತದೆ’ ಎಂದು ರಕ್ಷಣಾ ವಿಶ್ಲೇಷಕ ಬ್ರಹ್ಮ ಚೆಲಾನಿ ಹೇಳಿದ್ದಾರೆ.

ವಾಪಸಾತಿ ಮೇಲೆ ಡ್ರೋನ್ ಕಣ್ಣು

ಗಸ್ತು ಪಾಯಿಂಟ್‌ 14ರಿಂದ ಸೈನಿಕರು ಸೋಮವಾರವೇ ಹಿಂದಕ್ಕೆ ಸರಿದಿದ್ದಾರೆ. ಗೋಗ್ರಾ ಪ್ರದೇಶ ಮತ್ತು ಹಾಟ್‌ ಸ್ಪ್ರಿಂಗ್ಸ್ ‍ಪ್ರದೇಶದಿಂದ ಸೈನಿಕರ ಹಿಂದಿರುಗುವಿಕೆ ಪೂರ್ಣಗೊಳ್ಳಲು ಇನ್ನೂ ಒಂದು ದಿನ ಬೇಕಾಗಬಹುದು. 

ಚೀನಾ ಸೈನಿಕರ ವಾಪಸಾತಿ ಮೇಲೆ ಭಾರತದ ಸೇನೆಯು ಕಣ್ಣಿಟ್ಟಿದೆ. ಡ್ರೋನ್‌ ಮೂಲಕ ನಿಗಾ ಇರಿಸಲಾಗಿದೆ. ಜತೆಗೆ, ಸೈನಿಕರು ಸಂಘರ್ಷ ಪ್ರದೇಶದ ಮೇಲೆ ಸ್ವಲ್ಪ ದೂರದಿಂದ ಕಣ್ಣಿರಿಸಿದ್ದಾರೆ. ಎರಡೂ ಕಡೆಯ ಕಮಾಂಡರ್‌ಗಳು ಸೈನಿಕರ ವಾಪಸಾತಿಯನ್ನು ದೃಢೀಕರಿಸಿದ ಬಳಿಕ ‘ದೃಢೀಕರಣ ವರದಿ’ ಸಿದ್ಧವಾಗಲಿದೆ ಎಂದು ಮೂಲಗಳು ಹೇಳಿವೆ. 

ಕಳವಳಕ್ಕೆ ಕಾರಣ: ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಮುಖಾಮುಖಿ ಮುಂದುವರಿದಿದೆ. ಅಲ್ಲಿನ ಫಿಂಗರ್‌–4 ಪ್ರದೇಶದಲ್ಲಿ ಚೀನಾದ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ಬೀಡು ಬಿಟ್ಟಿರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ. ಚೀನಾ ಸೈನಿಕರ ಉಪಸ್ಥಿತಿಯಿಂದಾಗಿ, ಭಾರತವು ನಿಯಮಿತವಾಗಿ ಗಸ್ತು ನಡೆಸುತ್ತಿದ್ದ ಫಿಂಗರ್‌–8 ಪ್ರದೇಶಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಫಿಂಗರ್ –4 ಪ್ರದೇಶದಿಂದ ಸೈನಿಕರು ಮತ್ತು ವಾಹನಗಳನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಿದೆ. ಆದರೆ, ಇನ್ನೂ ಅಲ್ಲಿ ಉಳಿದಿರುವ ಸೈನಿಕರ ಸಂಖ್ಯೆ ಗಣನೀಯವಾಗಿಯೇ ಇದೆ ಎಂದು ಮೂಲಗಳು ತಿಳಿಸಿವೆ. 

ವಿವಾದಿತ ಗಡಿಯ ತನ್ನ ಭಾಗದಲ್ಲಿ ನಿಯೋಜಿಸಿರುವ ಸೈನಿಕರ ತೆರವು ವಿಚಾರದಲ್ಲಿ ಚೀನಾ ಯಾವುದೇ ಭರವಸೆ ನೀಡಿಲ್ಲ. ವಾಸ್ತವ ನಿಯಂತ್ರಣ ರೇಖೆಯ ಸಮೀಪದಲ್ಲಿ ಸೈನಿಕರ ಉಪಸ್ಥಿತಿಯು ಕನಿಷ್ಠ ಮಟ್ಟದಲ್ಲಿ ಇರಬೇಕು ಎಂದು 1993ರಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಚೀನಾ ಅದನ್ನು ಉಲ್ಲಂಘಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು