ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ದಾಳಿಗೆ ಒಳಗಾಗಿದ್ದ ಘಾಜಿಯಾಬಾದ್‌ನ ಪತ್ರಕರ್ತ ವಿಕ್ರಮ್; ಬದುಕಿ ಬರಲಿಲ್ಲ

Last Updated 22 ಜುಲೈ 2020, 8:08 IST
ಅಕ್ಷರ ಗಾತ್ರ
ADVERTISEMENT
""

ಘಾಜಿಯಾಬಾದ್‌ (ಉತ್ತರ ಪ್ರದೇಶ): ಜುಲೈ 20ರಂದು ಕಿಡಿಗೇಡಿಗಳ ಗುಂಡಿನ ದಾಳಿಗೆ ಸಿಲುಕಿದ್ದ ಪತ್ರಕರ್ತ ವಿಕ್ರಮ್‌ ಜೋಶಿ ಬುಧವಾರ ಮೃತಪಟ್ಟಿದ್ದಾರೆ. ಪ್ರಕರಣದ ಸಂಬಂಧ ಈವರೆಗೂ ಒಂಬತ್ತು ಜನರನ್ನು ಬಂಧಿಸಲಾಗಿದೆ.

ಸ್ಥಳೀಯ ದಿನಪತ್ರಿಕೆವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್‌ ಜೋಶಿ, ಅವರ ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದ ಕೆಲವರ ವಿರುದ್ಧ ಜುಲೈ 16ರಂದು ವಿಜಯ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ನಾಲ್ಕು ದಿನಗಳ ನಂತರ, ಸೋಮವಾರ ರಾತ್ರಿ ವಿಕ್ರಮ್‌ ಜೋಶಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಾಗುತ್ತಿದ್ದಾಗ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿದ್ದರು.

ಜೋಶಿ ಜನ ಸಾಗರ್‌ ಟುಡೆ ಪತ್ರಿಕೆಗಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಪ್ರತಾಪ್‌ ವಿಹಾರ್‌ ಬಳಿ ಸಾಗುತ್ತಿರುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದರು. ಅವರನ್ನು ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಕರಣದ ಸಂಬಂಧ ವಿಜಯ್‌, ಮೋಹಿತ್‌, ದಲ್ವೀರ್‌, ಆಕಾಶ್, ಯೋಗೇಂದ್ರ, ಅಭಿಷೇಕ್‌ ಮೋಟಾ, ಅಭಿಷೇಕ್‌, ಶಕಿರ್‌ ಹಾಗೂ ಪ್ರಮುಖ ಆರೋಪಿ ರವಿ ಸೇರಿ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲು ನೀಡಿದ ಕಿರುಕುಳ ದೂರಿನ ಬಗ್ಗೆ ಪೊಲೀಸರು ತನಿಖೆ ನಡೆಸಲಿಲ್ಲ ಎಂದು ವಿಕ್ರಮ್‌ ಜೋಶಿ ಕುಟುಂಬದವರು ದೂರಿದ್ದಾರೆ. ಆರೋಪಿಗಳ ನಿವಾಸಗಳಲ್ಲಷ್ಟೇ ಪೊಲೀಸರು ಪರಿಶೀಲಿಸಿದ್ದರು. ಆರೋಪಿಗಳು ಅಲ್ಲಿ ಸಿಕ್ಕಿರಲಿಲ್ಲ. ಜುಲೈ 17ರಂದು ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಎಸ್ಎಸ್‌ಪಿ ಕಚೇರಿಗೆ ಅಂಚೆ ಮೂಲಕ ಪತ್ರ ರವಾನಿಸಿದ್ದರು. ಆದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ದೂರು ನೀಡಿದ ದಿನವೇ ಎಫ್‌ಐಆರ್‌ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ವಿಜಯ ನಗರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಘವೇಂದ್ರ ಅವರನ್ನು ಕರ್ತವ್ಯದಿಂದ ಘಾಜಿಯಾಬಾದ್‌ ಎಸ್ಎಸ್‌ಪಿ ಅಮಾನತುಗೊಳಿಸಿದ್ದಾರೆ. ಡಿಎಸ್‌ಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಚಾರಣೆ ನಡೆಸಲು ಕ್ರಮ ವಹಿಸಲಾಗಿದೆ.

ವಿಕ್ರಮ್‌ ಜೋಶಿ–ಚಿತ್ರ ಕೃಪೆ: ಟ್ವಿಟರ್‌

ಜೋಶಿ ತಮ್ಮ ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ತಡೆದು ನಿಲ್ಲಿಸಿರುವುದು ಹಾಗೂ ಅವರು ಸಮತೋಲನ ಕಳೆದು ಕೊಂಡು ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಗುಂಪಿನಲ್ಲಿ ಬಂದ ಜನರು ಹಲ್ಲೆ ನಡೆಸಿರುವುದು, ಮತ್ತೊಬ್ಬ ಆರೋಪಿ ಜೋಶಿ ಮೇಲೆ ಗುಂಡು ಹಾರಿಸಿರುವುದನ್ನು ಕಾಣಬಹುದಾಗಿದೆ. ಆರೋಪಿಗಳು ಸ್ಥಳದಿಂದ ಹೊರಡುತ್ತಿದ್ದಂತೆ ಮಕ್ಕಳು ಜೋಶಿ ಸಮೀಪಕ್ಕೆ ಬಂದು, ದಾರಿ ಹೋಕರನ್ನು ಸಹಾಯಕ್ಕಾಗಿ ಕೋರುತ್ತಿರುವ ದೃಶ್ಯಗಳು ಸೆರೆಯಾಗಿವೆ.

ಪತ್ರಕರ್ತನ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಸಾಮಾನ್ಯರು 'ಜಂಗಲ್‌ ರಾಜ್‌'ನಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT