ಪಾಟ್ನಾ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆಸಂಬಂಧಿಸಿದಂತೆ ಪ್ರಕರಣದ ತನಿಖೆ ಕೈಗೊಂಡಿದ್ದ ಮುಂಬೈನಲ್ಲಿರುವ ಪಾಟ್ನಾದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್‌ನಲ್ಲಿಟ್ಟಿದ್ದಾರೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಭಾನುವಾರ ಆರೋಪಿಸಿದ್ದಾರೆ.
ಸುಶಾಂತ್ ಅವರ ತಂದೆ ಪಾಟ್ನಾದಲ್ಲಿ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ತಿವಾರಿ ಮುಂಬೈನಲ್ಲಿರುವ ಬಿಹಾರ ಪೊಲೀಸ್ ತಂಡದ ನೇತೃತ್ವ ವಹಿಸಿದ್ದರು.
ಪೊಲೀಸ್ ತನಿಖಾ ತಂಡವನ್ನು ಮುನ್ನಡೆಸುವ ಕೆಲಸದ ಮೇರೆಗೆ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರಿಂದು ಪಾಟ್ನಾದಿಂದ ಮುಂಬೈಗೆ ತಲುಪಿದರು. ಆದರೆ ಅವರನ್ನು ಭಾನುವಾರ ರಾತ್ರಿ 11 ಗಂಟೆಗೆ ಬಿಎಂಸಿ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಾಂಡೆ ಟ್ವೀಟ್ ಮಾಡಿದ್ದಾರೆ.
ಎಷ್ಟೇ ಮನವಿ ಮಾಡಿದರೂ ಕೂಡ ಅವರಿಗೆ ಐಪಿಎಸ್ ಮೆಸ್‌ನಲ್ಲಿ ವಸತಿ ಸೌಕರ್ಯವನ್ನು ಒದಗಿಸಲಿಲ್ಲ ಮತ್ತು ಗೋರೆಗಾಂವ್‌ನ ಅತಿಥಿ ಗೃಹದಲ್ಲಿ ತಂಗಿದ್ದರು ಎಂದು ಅವರು ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ದೇಶೀಯವಾಗಿ ಆಗಮಿಸುವವರಿಗೆ ಪ್ರಸ್ತುತ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ತಿಳಿಸಿದೆ.
34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಕಳೆದ ಜೂನ್ 24 ರಂದು ಮುಂಬೈನ ಅವರ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕಳೆದ ತಿಂಗಳು ಸುಶಾಂತ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ನಟಿ ನಟಿ ರಿಯಾ ಚಕ್ರವರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸುಶಾಂತ್‌ನೊಟ್ಟಿಗೆ ಹತ್ತಿರವಾಗಿದ್ದರು ಮತ್ತು ಆಕೆಯ ಕುಟುಂಬ ಸದಸ್ಯರು ಕೂಡ ಆರೋಪಿಗಳಾಗಿದ್ದಾರೆ ಎಂದು ಆರೋಪಿಸಿದ್ದರು. ತಿವಾರಿಯನ್ನು ಪಾಟ್ನಾದಲ್ಲಿ ಸಿಟಿ ಎಸ್ಪಿಯನ್ನಾಗಿ (ಪೂರ್ವ) ನಿಯೋಜಿಸಲಾಗಿತ್ತು.
ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಈವರೆಗೆ ಸುಮಾರು 40 ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ರಜಪೂತ್ ಅವರ ಕುಟುಂಬ, ಅವರ ಅಡುಗೆಯವರು ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್, ಚಿತ್ರ ವಿಮರ್ಶಕ ರಾಜೀವ್ ಮಸಂದ್, ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಮತ್ತು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.