ಭಾನುವಾರ, ಆಗಸ್ಟ್ 1, 2021
26 °C
ಹಿರಿಯ ಮುಖಂಡರಿಗೆ ಮಣೆ: ರಾಹುಲ್‌ ಗಾಂಧಿಯ ‘ಯುವಪಡೆ’ಯ ಕಡೆಗಣನೆ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು | ಕಾಂಗ್ರೆಸ್‌ ಬೇರು –ಚಿಗುರಿನ ಹಗ್ಗಜಗ್ಗಾಟ

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿ ಹಳೆ ತಲೆಮಾರು ಮತ್ತು ಹೊಸ ತಲೆಮಾರು ನಡುವಣ ಬಿರುಕು ಇನ್ನಷ್ಟು ಅಗಲವಾಗಿದೆ. ರಾಜಸ್ಥಾನದಲ್ಲಿ ಆ ಪಕ್ಷಕ್ಕೆ ಎದುರಾಗಿರುವ  ಬಿಕ್ಕಟ್ಟು ಅದನ್ನು ಇನ್ನಷ್ಟು ನಿಚ್ಚಳವಾಗಿಸಿದೆ. ಪಕ್ಷದ ಕೇಂದ್ರ ನಾಯಕತ್ವವು ಮಧ್ಯಪ್ರವೇಶಿಸಿ, ಸದ್ಯಕ್ಕೆ ಸರ್ಕಾರ ಉರುಳದಂತೆ ನೋಡಿಕೊಂಡಿದೆ. 

ಆದರೆ, ಪಕ್ಷದ ಶಾಸಕರಲ್ಲಿ ಈಗ ಕಾಣಿಸಿರುವ ಮೇಲ್ಪದರದ ಒಗ್ಗಟ್ಟು ಎಷ್ಟು ದಿನ ಬಾಳಿಕೆ ಬರಬಹುದು ಎಂಬುದನ್ನು ಕಾಲವೇ ಹೇಳಬೇಕು. ಯಾಕೆಂದರೆ, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಶತಾಯಗತಾಯ ಮುಖ್ಯಮಂತ್ರಿ ಸ್ಥಾನ ಪಡೆಯುವ ಯತ್ನದಲ್ಲಿದ್ದಾರೆ. 

ಮಧ್ಯ ಪ್ರದೇಶದ ಉದಾಹರಣೆ ಕಾಂಗ್ರೆಸ್‌ ಪಕ್ಷದ ಮುಂದೆ ಇದೆ. ಮಧ್ಯಪ‍್ರದೇಶ ಕಾಂಗ್ರೆಸ್‌ನ ಮೂವರು ಮುಂಚೂಣಿ ನಾಯಕರಾಗಿದ್ದ ದಿಗ್ವಿಜಯ್‌ ಸಿಂಗ್‌, ಕಮಲನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಚುನಾವಣಾ ಫಲಿತಾಂಶದ ಬಳಿಕ ಕಮಲನಾಥ್‌ ಮತ್ತು ದಿಗ್ವಿಜಯ್‌ ಒಂದಾಗಿ ಸಿಂಧಿಯಾರನ್ನು ಅಧಿಕಾರದಿಂದ ದೂರ ಇರಿಸುವಲ್ಲಿ ಯಶಸ್ವಿಯಾದರು.

ಪ‍ಕ್ಷದ ಹೈಕಮಾಂಡ್‌ನ ಮೇಲ್ಪದರದ ಒಗ್ಗಟ್ಟು ಸೂತ್ರವು ಬಹಳ ಕಾಲ ಬಾಳಲಿಲ್ಲ. ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಇದ್ದ ಸಿಂಧಿಯಾಗೆ ರಾಜ್ಯ ಘಟಕದ ಮುಖ್ಯಸ್ಥನ ಸ್ಥಾನವೂ ಲಭಿಸಲಿಲ್ಲ. ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿಯತ್ತ ನಡೆದಾಗ 24 ಶಾಸಕರು ಅವರನ್ನು ಹಿಂಬಾಲಿಸಿದರು.  

ಸಿಂಧಿಯಾ ಮತ್ತು ಪೈಲಟ್‌ ಅವರಿಬ್ಬರೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಜತೆ ಗುರುತಿಸಿಕೊಂಡಿದ್ದವರು. ಇವರಿಬ್ಬರಷ್ಟೇ ಅಲ್ಲ, ರಾಹುಲ್‌ಗೆ ಒಂದು ಕಾಲದಲ್ಲಿ ಹತ್ತಿರವಾಗಿದ್ದ ಹಲವು ಯುವ ಮುಖಂಡರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಬಿಟ್ಟು ಹೋಗಿದ್ದಾರೆ ಅಥವಾ ಕಡೆಗಣನೆಗೆ ಒಳಗಾಗಿದ್ದಾರೆ. ಈ ಪಟ್ಟಿ ದೊಡ್ಡದೇ ಇದೆ– ಪಂಜಾಬ್‌ನಲ್ಲಿ ಪ್ರತಾಪ್‌ ಸಿಂಗ್‌ ಬಾಜ್ವಾ ಮತ್ತು ನವಜೋತ್‌ ಸಿಂಗ್‌ ಸಿಧು, ಜಾರ್ಖಂಡ್‌ನಲ್ಲಿ ಅಜೋಯ್‌ ಕುಮಾರ್‌, ಹರಿಯಾಣದಲ್ಲಿ ಅಶೋಕ್‌ ತನ್ವರ್‌, ಮಹಾರಾಷ್ಟ್ರದಲ್ಲಿ ಸಂಜಯ್‌ ನಿರುಪಮ್‌, ತ್ರಿಪುರಾದಲ್ಲಿ ಪ್ರದ್ಯೋತ್‌ ದೇಬ್‌ ಬರ್ಮನ್‌ ಈ ಪಟ್ಟಿಯಲ್ಲಿರುವ ಪ್ರಮುಖರು. 

‘ಗೆಹ್ಲೋಟ್‌ ಪೆರೇಡ್‌ನಲ್ಲಿ 106 ಶಾಸಕರು’
ಜೈಪುರ (ಪಿಟಿಐ): ರಾಜಸ್ಥಾನದ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿದೆ. ಇದರಿಂದಾಗಿ, ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಜತೆಗಿನ ಹಗ್ಗಜಗ್ಗಾಟದಲ್ಲಿ ಗೆಹ್ಲೋಟ್‌ ಅವರ ಕೈ ಮೇಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿರುವ 106 ಶಾಸಕರು ಹಾಜರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.  ಸಭೆಯ ಬಳಿಕ ಈ ಶಾಸಕರು ಜೈಪುರ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

ಪೈಲಟ್‌ ಮತ್ತು ಅವರ ಪರವಾಗಿರುವ ಶಾಸಕರು ಸಭೆಗೆ ಗೈರುಹಾಜರಾಗಿದ್ದರು. ಪೈಲಟ್‌ ಅವರು ತಮ್ಮ ಬೆಂಬಲಿಗರಾದ 15 ಶಾಸಕರ ಜತೆಗೆ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ.

ಐಟಿ ಶೋಧ
ರಾಜಸ್ಥಾನ ಮೂಲದ ಉಷ್ಣವಿದ್ಯುತ್‌ ಮೂಲಸೌಕರ್ಯ ಕಂಪನಿ ಮತ್ತು ಇತರ ಕೆಲವು ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ದೆಹಲಿ, ಜೈ‍ಪುರ ಸೇರಿ ನಾಲ್ಕು ನಗರಗಳಲ್ಲಿ ಈ ಶೋಧ ನಡೆದಿದೆ. 

ಕಾಂಗ್ರೆಸ್‌ ಮುಖಂಡರಾದ ರಾಜೀವ್‌ ಆರೋರಾ ಮತ್ತು ಧರ್ಮೇಂದ್ರ ರಾಥೋಡ್‌ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು