ಶುಕ್ರವಾರ, ಸೆಪ್ಟೆಂಬರ್ 25, 2020
27 °C

ಸುದ್ದಿ ವಿಶ್ಲೇಷಣೆ | ಬಿಜೆಪಿಗೆ ಮಂದಿರದ ನೆರಳು

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

ರಾಮ ಮಂದಿರ ವಿನ್ಯಾಸ

ನವದೆಹಲಿ: ಬಿಜೆಪಿಯ ರಾಜಕಾರಣದ ಕೇಂದ್ರದಲ್ಲಿ ‘ರಾಮ ಮಂದಿರ’ ಇತ್ತು ಮತ್ತು ಈಗಲೂ ಇದೆ. ಸುದೀರ್ಘ ಕಾಲ ಬಿಜೆಪಿಯ ಕಾರ್ಯಸೂಚಿಯಲ್ಲಿ ಇದ್ದ ಒಂದು ವಿಚಾರವು ಈಗ ಕಾರ್ಯರೂಪಕ್ಕೆ ಬಂದಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ರಾಮಮಂದಿರವು ತಂದುಕೊಡಬಲ್ಲ ಲಾಭದ ಬಗ್ಗೆ ಈಗ ಲೆಕ್ಕ ಹಾಕಬಹುದು.

2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಂದಿರ ನಿರ್ಮಾಣವು 2024ರಲ್ಲಿ ಪೂರ್ಣಗೊಳ್ಳಲಿದೆ. ಭಾರತದ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯದ ರಾಜಕಾರಣದ ಮೇಲೆ ಮಂದಿರ ನಿರ್ಮಾಣವು ಅತ್ಯಂತ ದೊಡ್ಡ ಪರಿಣಾಮ ಬೀರಲಿದೆ.

15 ವರ್ಷಗಳ ಅಂತರದ ಬಳಿಕ ಬಿಜೆಪಿ 2017ರಲ್ಲಿ ಭಾರಿ ಬಹುಮತದೊಂದಿಗೆ ಇಲ್ಲಿಗೆ ಅಧಿಕಾರಕ್ಕೆ ಬಂದಿತ್ತು. ನಂತರದ ದಿನಗಳಲ್ಲಿ ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ನಡೆದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಬಿಜೆಪಿಗೆ ಶೇ 43ರಷ್ಟು ಮತ ಸಿಕ್ಕಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ಇದರಲ್ಲಿ ಶೇ ಎರಡರಷ್ಟನ್ನು ಆ ಪಕ್ಷವು ಕಳೆದುಕೊಂಡಿದೆ. ಕಾಂಗ್ರೆಸ್‌–ಎಸ್‌ಪಿ, ಬಿಎಸ್‌ಪಿ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೇ 50ರಷ್ಟು ಮತ ದೊರೆತಿತ್ತು. ಆಗಲೂ ಬಿಎಸ್‌ಪಿ–ಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯೇ ನಡೆದಿತ್ತು. 

1993ರ ವಿಧಾನಸಭಾ ಚುನಾವಣೆ ನಡೆದಾಗ ಬಿಜೆಪಿಯ ಜನಪ್ರಿಯತೆ ಶಿಖರದಲ್ಲಿತ್ತು. ಬಾಬರಿ ಮಸೀದಿ ಧ್ವಂಸದ ನಂತರದ ಆ ದಿನಗಳಲ್ಲಿ ಬಿಜೆಪಿಯು ಹಿಂದುತ್ವದ ಅಲೆಯಲ್ಲಿ ತೇಲುತ್ತಿತ್ತು. ಆಗ ಬಿಜೆಪಿಗೆ ಇಲ್ಲಿ ಗೆಲ್ಲಲು ಸಾಧ್ಯವಾಗಿದ್ದದ್ದು 403ರಲ್ಲಿ 177 ಕ್ಷೇತ್ರಗಳನ್ನು ಮತ್ತು ಶೇ 33ರಷ್ಟು ಮತಗಳನ್ನು ಮಾತ್ರ. 2014ರ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜನಬೆಂಬಲದಲ್ಲಿ ಮೂಲಭೂತ ಬದಲಾವಣೆಯೇ ಆಗಿದೆ. 

‘ಹಿಂದೂ ಹೃದಯ ಸಾಮ್ರಾಟ’ ಎಂದು ನರೇಂದ್ರ ಮೋದಿಯವರನ್ನು ಬಿಂಬಿಸಿರುವುದು ಬಿಜೆಪಿಯ ಜನಪ್ರಿಯತೆಯ ಹಿಂದಿರುವ ಒಂದು ಕಾರಣ. ಈ ರಾಜ್ಯದಲ್ಲಿ ಬಿಜೆಪಿಯ ಯಶಸ್ಸಿನ ಹಿಂದಿರುವುದು ಮೋದಿ ವರ್ಚಸ್ಸು ಮಾತ್ರವಲ್ಲ. ಹೊಸ ಜಾತಿ ಲೆಕ್ಕಾಚಾರ ಕೂಡ ಬಿಜೆಪಿಯ ಇಲ್ಲಿ ಕೆಲಸ ಮಾಡಿದೆ. ಯಾದವೇತರ ಇತರ ಹಿಂದುಳಿದ ವರ್ಗಗಳು ಮತ್ತು ಜಾಟವರನ್ನು ಬಿಟ್ಟು ಇತರ ದಲಿತ ವರ್ಗಗಳ ಬೆಂಬಲ ಪಡೆಯುವುದು ಬಿಜೆಪಿಗೆ ಸಾಧ್ಯವಾಗಿದೆ. ಅದರ ಜತೆಗೆ, ಹಿಂದೂ ಹೆಸರಿನಲ್ಲಿ ಇನ್ನಷ್ಟು ಜಾತಿಗಳನ್ನು ಸೇರಿಸಿಕೊಂಡು ಬೆಂಬಲ ನೆಲೆಯನ್ನು ಬಿಜೆಪಿ ವಿಸ್ತರಿಸಿಕೊಂಡಿದೆ. ಹಿಂದೂ ಮತಗಳ ಕ್ರೋಡೀಕರಣದ ವಿಚಾರದಲ್ಲಿ ‘ಮಂದಿರ’ವು ಒಂದು ಸಂಕೇತದಂತೆ ಕೆಲಸ ಮಾಡಲಿದೆ. 

ಉತ್ತರ ಪ‍್ರದೇಶದ ಆಚೆಗೆ, 2024ರ ಲೋಕಸಭಾ ಚುನಾವಣೆಯಲ್ಲಿ ಹತ್ತು ವರ್ಷಗಳ ‘ಹಿಂದೂ ಪಕ್ಷ’ ಮತ್ತು ‘ಹಿಂದೂ ಪ್ರಧಾನಿ’ ಎಂಬ ವಿಚಾರವನ್ನು ಬಿಜೆಪಿ ಎತ್ತರದಲ್ಲಿ ಬಿಂಬಿಸಬಹುದು. 

ಬಿಜೆಪಿಯ ಮಟ್ಟಿಗೆ ಮಂದಿರವು ಅದರ ಮಕುಟದ ಮಣಿಯೇ. ಅದರ ಜತೆಗೆ, ಪೌರತ್ವ ತಿದ್ದುಪಡಿ ಕಾಯ್ದೆ, ತ್ರಿವಳಿ ತಲಾಖ್‌ ನಿಷೇಧ ಕಾಯ್ದೆಯನ್ನೂ ತನ್ನ ಇನ್ನಿತರ ಸಾಧನೆಗಳಾಗಿ ಬಿಂಬಿಸಬಹುದು. 

ಬಿಜೆಪಿ ನೇತೃತ್ವದ ಸರ್ಕಾರವು ಕೆಲವು ಮಹತ್ವದ ವಿಚಾರಗಳನ್ನು ನಿಭಾಯಿಸಿದ ರೀತಿಯಲ್ಲಿ ಏನೋ ಕೊರತೆ ಇದೆ ಎಂಬ ಭಾವನೆ ಜನರಲ್ಲಿ ಹೆಚ್ಚುತ್ತಲೇ ಇದೆ. ಕೋವಿಡ್‌ ಪಿಡುಗು, ಅರ್ಥ ವ್ಯವಸ್ಥೆ, ಚೀನಾ ಜತೆಗಿನ ಗಡಿಯಲ್ಲಿ ಬಿಕ್ಕಟ್ಟು ಇವುಗಳಲ್ಲಿ ಸೇರಿವೆ. ಇವುಗಳ ನಡುವೆಯೇ ಹಿಂದುತ್ವದ ಸಾಧನೆಗಳನ್ನು ಜನರ ಮುಂದೆ ಹೇಗೆ ಇರಿಸಲಿದೆ ಎಂಬುದು ಕುತೂಹಲದ ಪ್ರಶ್ನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು