ಭಾನುವಾರ, ಆಗಸ್ಟ್ 1, 2021
27 °C

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ ರಿಯಾ ಅರ್ಜಿ ಆ.5ಕ್ಕೆ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಲಿವುಡ್‌ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪಟ್ನಾದಿಂದ ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ 5ರಂದು ಕೈಗೆತ್ತಿಕೊಳ್ಳಲಿದೆ.

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಮಾಹಿತಿ ಪ್ರಕಾರ ಪ್ರಕರಣದ ವರ್ಗಾವಣೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೃಷಿಕೇಷ್‌ ರಾಯ್‌ ಅವರನ್ನೊಳಗೊಂಡ ಪೀಠ ಆ.5ರ ಬುಧವಾರದಂದು ನಡೆಸಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಅವರ ಎಫ್‌ಐಆರ್ ವರ್ಗಾವಣೆ ಮಾಡುವ ಮುನ್ನ ವಿಚಾರಣೆ ನಡೆಸಬೇಕೆಂದು ನಟ ಸುಶಾಂತ್‌ ಸಿಂಗ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್‌  ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದ್ದಾರೆ.

ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಜುಲೈ 25ರಂದು ‘ತನ್ನ ಮಗನನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ‘ ಎಂದು ಆರೋಪಿಸಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಇತರರ ವಿರುದ್ಧ ಪಟ್ನಾದ ರಾಜೀವ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರು ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಈ ಬೆಳವಣಿಗೆಗಳ ನಂತರ ನಟಿ ರಿಯಾ, ಪ್ರಕರಣದ‌ ವರ್ಗಾವಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆ ಅರ್ಜಿಯಲ್ಲಿ ‘ಸುಶಾಂತ್ ತಂದೆ ತನ್ನ ‘ಪ್ರಭಾವ‘ವನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದಿಸಿದ್ದೇನೆಂದು ನನ್ನ ವಿರುದ್ಧ ದೂರು ಸಲ್ಲಿಸಿ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ‘ ಎಂದು ದೂರಿದ್ದಾರೆ.

‘ನಾನು ಮತ್ತು ಸುಶಾಂತ್‌ ಈ ವರ್ಷದ ಜೂನ್‌ 8ರವರೆಗೂ ಸಹಜೀವನ ನಡೆಸಿದ್ದೇವೆ. ಆತ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಶಾಂತ್‌ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು, ನನಗೆ ಅತ್ಯಾಚಾರ ಮತ್ತು ಕೊಲೆಯಂತಹ ಬೆದರಿಕೆ ಕರೆಗಳು ಬರುತ್ತಿವೆ‘ ಎಂದು ಅರ್ಜಿಯಲ್ಲಿ ರಿಯಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು