ಶನಿವಾರ, ಜುಲೈ 31, 2021
25 °C

ವಿಕಾಸ್‌ ದುಬೆ ರಕ್ತ ಚರಿತ್ರೆ: 30 ವರ್ಷ, 60ಕ್ಕೂ ಹೆಚ್ಚು ಅಪರಾಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಉಜ್ಜಯಿನಿಯಲ್ಲಿ ವಿಕಾಸ್‌ ದುಬೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು–ಸಂಗ್ರಹ ಚಿತ್ರ

ಕಳೆದ ಶುಕ್ರವಾರ (ಜುಲೈ 3) ಕುಖ್ಯಾತ ರೌಡಿ ಶೀಟರ್‌ ವಿಕಾಸ್‌ ದುಬೆಯನ್ನು ಬಂಧಿಸಲು ಪೊಲೀಸರು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮಕ್ಕೆ ತೆರಳಿದ್ದರು. ಆದರೆ, ಪೊಲೀಸರ ಬರುವಿಕೆ ಮಾಹಿತಿ ಪಡೆದಿದ್ದ ದುಬೆ ಗ್ಯಾಂಗ್‌, ಪೊಲೀಸರ ಮೇಲೆಯೇ ದಾಳಿ ನಡೆಸಿತ್ತು. ಏಕಾಏಕಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಸೇರಿದಂತೆ ಎಂಟು ಪೊಲೀಸರು ಹತ್ಯೆಯಾದರು. ಆ ದುರ್ಘಟನೆ ನಡೆದು ಸರಿಯಾಗಿ ಒಂದು ವಾರಕ್ಕೆ ವಿಕಾಸ್‌ ದುಬೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಸುಮಾರು 60 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ಕಾನ್ಪುರದ ಡಾನ್‌ ಕಥೆ ಮುಗಿದಿದೆ.

ಕರ್ತವ್ಯ ನಿರತ ಎಂಟು ಮಂದಿ ಪೊಲೀಸರ ಹತ್ಯೆ ದೇಶವ್ಯಾಪಿ ಸುದ್ದಿಯಾಗಿ ಯೋಗಿ ಆದಿತ್ಯನಾಥ್ ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಯಿತು. ವಿಶೇಷ ತಂಡ ರಚಿಸಿಕೊಂಡ ಪೊಲೀಸರು ವಿಕಾಸ್‌ ದುಬೆಯ ಸಹಚರರ ಪೈಕಿ ಒಬ್ಬೊಬ್ಬರಂತೆ ಎನ್‌ಕೌಂಟರ್‌, ಇಲ್ಲವೇ ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದರು. ಆದರೆ, ವಿಕಾಸ್‌ ದುಬೆ 30 ವರ್ಷಗಳ ರಕ್ತ ಚರಿತ್ರೆಯನ್ನು ಈವರೆಗೂ ಪೊಲೀಸರು ಸಹಿಸುತ್ತ ಬಂದಿದ್ದೇಕೆ ಎಂಬುದು ಸದ್ಯದ ಪ್ರಶ್ನೆ!

30 ವರ್ಷಗಳಿಂದ ಅಪರಾಧ ಚಟುವಟಿಕೆಗಳು

2001ರಲ್ಲಿ ಕಾನ್ಪುರ ದೆಹಾತ್‌ನ ಶಿವಲೀ ಪೊಲೀಸ್‌ ಠಾಣೆಯ ಒಳಗಡೆಯೇ ಬಿಜೆಪಿ ಮುಖಂಡ, ಉತ್ತರ ಪ್ರದೇಶ ರಾಜ್ಯ ಸಚಿವ ಸ್ಥಾನದಲ್ಲಿದ್ದ ಸಂತೋಷ್‌ ಶುಕ್ಲಾ ಅವರನ್ನು ವಿಕಾಸ್‌ ದುಬೆ ಅಟ್ಟಾಡಿಸಿ ಹತ್ಯೆ ಮಾಡಿದ್ದ. ಇದೇ ಘಟನೆಯಲ್ಲಿ ಇಬ್ಬರು ಪೊಲೀಸರು ಹತರಾದರು ಹಾಗೂ ಹಲವು ಪೊಲೀಸರು ಮೂಕ ಸಾಕ್ಷಿಯಾಗಿ ನಿಂತಿದ್ದರು. ಈ ಜನಪ್ರತಿನಿಧಿಯ ಕೊಲೆಯ ನಂತರದಲ್ಲಿ ದುಬೆ 'ಶಿವಲೀಯ ಡಾನ್‌' ಆಗಿ ಕುಖ್ಯಾತನಾದ.

ಆ ಕೊಲೆ ಪ್ರಕರಣದಲ್ಲಿ ವಿಕಾಸ್‌ ದುಬೆ ಮೇಲೆ ಎಫ್‌ಐಆರ್‌ ದಾಖಲಾಯಿತು. ಆರು ತಿಂಗಳ ನಂತರ ಹಲವು ರಾಜಕೀಯ ನಾಯಕರ ರಕ್ಷಣೆಯೊಂದಿಗೆ ದುಬೆ ಕೋರ್ಟ್‌ ಮುಂದೆ ಶರಣಾದ. ಹತ್ಯೆಯಾದ ಸಂತೋಷ್‌ ಶುಕ್ಲಾ ಅವರ ಸಿಬ್ಬಂದಿ ಹಾಗೂ ಭದ್ರತೆಯಲ್ಲಿದ್ದವರೇ ದುಬೆ ಪರವಾಗಿ ಸಾಕ್ಷಿ ಹೇಳಿದರು. ಸೆಷೆನ್ಸ್‌ ನ್ಯಾಯಾಲಯದಲ್ಲಿನ ನಾಲ್ಕು ವರ್ಷಗಳ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಕಾಸ್‌ ದುಬೆ ಕೊಲೆ ಪ್ರಕರಣದಿಂದ ಆರೋಪ ಮುಕ್ತನಾದ.


ವಿಕಾಸ್‌ ದುಬೆ ಎನ್‌ಕೌಂಟರ್ ನಡೆದ ಸ್ಥಳ

ದುಬೆ ಬಿಕ್ರು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದ. ಪೊಲೀಸರ ದಾಳಿ, ಹುಡುಕಾಟ ಸೇರಿ ಯಾವುದೇ ಮಾಹಿತಿಯು ಆತನಿಗೆ ಬಹುಬೇಗ ತಲುಪುತ್ತಿತ್ತು. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ದುಬೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಡಕಾಯಿತಿಯಿಂದ ಹಿಡಿದು ಕೊಲೆಗಳವರೆಗೂ ಅಪರಾಧ ಕೃತ್ಯಗಳನ್ನು ಮಾಡಲು ಗ್ರಾಮೀಣ ಭಾಗದ ಯುವಕರ ಸೇನೆಯನ್ನೇ ಕಟ್ಟಿ ಬೆಳೆಸುತ್ತಿದ್ದ.

ಇದನ್ನೂ ಓದಿ:

ಸಂತೋಷ್‌ ಶುಕ್ಲಾ ಕೊಲೆ ನಡೆಯುವುದಕ್ಕೂ ಎರಡು ವರ್ಷ ಮುಂಚೆ, 1999ರಲ್ಲಿ ಗ್ರಾಮದಲ್ಲಿನ ಸಾಧುವೊಬ್ಬರನ್ನು (ಜುನ್ನಾ ಬಾಬಾ) ಕೊಲೆ ಮಾಡಿ ಅವರ ಭೂಮಿ ಮತ್ತು ಇತರೆ ಆಸ್ತಿ ವಶಪಡಿಸಿಕೊಂಡಿದ್ದನು. 2000ನೇ ಇಸವಿಯಲ್ಲಿ ತಾರಾಚಂದ್ ಇಂಟರ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಅಸಿಸ್ಟಂಟ್‌ ಮ್ಯಾನೇಜರ್‌ ಸಿದ್ದೇಶ್ವರ್‌ ಪಾಂಡೆ ಎಂಬುವವರ ಕೊಲೆ ಪ್ರಕರಣದಲ್ಲೂ ದುಬೆ ಭಾಗಿಯಾಗಿದ್ದ.  ಆ ಕೊಲೆ ಪ್ರಕರಣದಲ್ಲಿ ದುಬೆಗೆ ಜೀವಾವಧಿ ಶಿಕ್ಷೆಯಾಗಿ, ಕೆಲವು ಕಾಲ ಜೈಲಿನಲ್ಲಿದ್ದ. ಇದರೊಂದಿಗೆ ಹಲವು ದರೋಡೆ, ಅಪಹರಣ ಸೇರಿದಂತೆ ಸುಮಾರು 60 ಅಪರಾಧ ಪ್ರಕರಣಗಳು ವಿಕಾಸ್‌ ದುಬೆ ವಿರುದ್ಧ ದಾಖಲಾಗಿವೆ.

ರಾಜಕೀಯ ಬೆಂಬಲ ಮತ್ತು ಅಟ್ಟಹಾಸ

ಲಖನೌ ಮತ್ತು ಸಹರನ್‌ಪುರದಲ್ಲಿ ತಲಾ ಒಂದೊಂದು ಪ್ರಕರಣಗಳನ್ನು ಹೊರತು ಪಡಿಸಿ ಸುಮಾರು 60 ಪ್ರಕರಣಗಳು ಕಾನ್ಪುರ ಮತ್ತು ಕಾನ್ಪುರ ದೆಹಾತ್‌ ಜಿಲ್ಲೆಗಳಲ್ಲಿಯೇ ದಾಖಲಾಗಿವೆ. ಮಾದಕ ದ್ರವ್ಯ ಸಾಗಣೆಗೆ ಸಂಬಂಧಿಸಿದಂತೆ ಸಹರನ್‌ಪುರದಲ್ಲಿನ ಪ್ರಕರಣದಿಂದ ಆರೋಪ ಮುಕ್ತನಾಗಿದ್ದು, ಲಖನೌದಲ್ಲಿನ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಬಾಕಿ ಉಳಿದಿದೆ.

ಶಿವಲೀ ಪೊಲೀಸ್‌ ಠಾಣೆಯಲ್ಲಿ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ 1990ರಲ್ಲಿ ದುಬೆ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು. ಅದಾಗಿ ಎರಡೇ ವರ್ಷಗಳಲ್ಲಿ ದಲಿತ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಪ್ರಕರಣ ದಾಖಲಾಗಿತ್ತು. ಆದರೆ, ಆ ಎರಡೂ ಪ್ರಕರಣಗಳಲ್ಲಿ ದುಬೆ ಆರೋಪ ಮುಕ್ತನಾದ.


ವಿಕಾಸ್ ದುಬೆ

ರಾಜಕೀಯ ಬೆಂಬಲ ಸಿಗುತ್ತಿದ್ದಂತೆ ಅಟ್ಟಹಾಸ ಹೆಚ್ಚಿಸಿಕೊಂಡ ದುಬೆ ನಗರ ಪಂಚಾಯತಿ ಅಧ್ಯಕ್ಷ ಲಲ್ಲನ್‌ ಬಾಜಪಾಯಿ ಅವರ ಮೇಲೆ ಕೊಲೆ ಪ್ರಯತ್ನ ನಡೆಸಿ ವಿಫಲನಾಗಿದ್ದ. ಅದೇ ಅವಧಿಯಲ್ಲಿ ₹20,000 ಮೊತ್ತದ ತಕರಾರಿನಲ್ಲಿ ಕೇಬಲ್‌ ಆಪರೇಟರ್‌ ದಿನೇಶ್‌ ದುಬೆ ಎಂಬುವವರನ್ನು ಕೊಲೆ ಮಾಡಿದ್ದ. 2006ರಲ್ಲಿ ನೀಡಿದ್ದ ಸಂದರ್ಶನದಲ್ಲಿ ದುಬೆ 10 ವರ್ಷಗಳಿಂದ ಬಿಕ್ರು ಗ್ರಾಮದ ಪ್ರಧಾನನಾಗಿರುವುದಾಗಿ (ಮುಖ್ಯಸ್ಥ) ಹೇಳಿಕೊಂಡಿದ್ದ. ಅನಂತರ ಜಿಲ್ಲಾ ಪಂಚಾಯಿತಿ ಸದಸ್ಯನಾದ. ಆತನ ಕಿರಿಯ ತಮ್ಮ ಪಕ್ಕದ ಭೀಟಿ ಗ್ರಾಮದ ಪ್ರಧಾನನಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾನೆ. ಮತ್ತೊಬ್ಬ ಸಹೋದರನ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾದರೆ, ಸಹೋದರ ಬಿಕ್ರು ಗ್ರಾಮದ ಪ್ರಧಾನನಾಗುತ್ತಾನೆ.

ಇದನ್ನೂ ಓದಿ: 'ಪೊಲೀಸರು ವಿಕಾಸ್‌ ದುಬೆ ಕೊಲ್ಲಬಹುದು': ಸಾವಿಗೆ ಮೊದಲು 'ಸುಪ್ರೀಂ'ಗೆ ಅರ್ಜಿ

ಬಿಕ್ರು ಗ್ರಾಮದ ರಾಹುಲ್‌ ತಿವಾರಿ ಇತ್ತೀಚೆಗಷ್ಟೇ ದುಬೆ ವಿರುದ್ಧ ಕೊಲೆ ಯತ್ನದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ಎಫ್‌ಐಆರ್‌ ಆಧರಿಸಿ ಪೊಲೀಸರು ದುಬೆಗಾಗಿ ಹಲವು ಜಾಗಗಳಲ್ಲಿ ಹುಡುಕಾಟ ನಡೆಸಿದ್ದರು. ಜುಲೈ 2ರ ರಾತ್ರಿ ಪೊಲೀಸರು ಬಿಕ್ರು ಗ್ರಾಮಕ್ಕೆ ತೆರಳಿ ದುಬೆಯನ್ನು ಬಂಧಿಸಲು ಮುಂದಾಗಿದ್ದಾಗಲೇ ದುಬೆ ಗ್ಯಾಂಗ್‌ ಪೊಲೀಸರ ಮೇಲೆ ಗುಂಡಿನ ಮಳೆಗರೆದಿತ್ತು. ಉತ್ತರ ಪ್ರದೇಶದಲ್ಲಿ ದುಬೆ ವಿರುದ್ಧ 5 ಕೊಲೆ ಪ್ರಕರಣಗಳು, ಎಂಟು ಕೊಲೆ ಪ್ರಯತ್ನ ಪ್ರಕರಣಗಳಿವೆ. ಪೊಲೀಸರು ಆತನ ವಿರುದ್ಧ ಗೂಂಡಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್‌ ಕಾಯ್ದೆಯಂತಹ ಕಠಿಣ ಕಾನೂನುಗಳಡಿ ಬಂಧಿಸುವ ಪ್ರಯತ್ನದಲ್ಲಿದ್ದರು.

(ಮಾಹಿತಿ: ದಿ ವೀಕ್‌, ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಹಾಗೂ ಇತರೆ ಮೂಲಗಳಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು