ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ನಾಯಿ 'ಆಹಾರ'ದ‌ ಬದಲು ಸಾಕು ಪ್ರಾಣಿಗಳ ಪಟ್ಟಿಗೆ

Last Updated 10 ಏಪ್ರಿಲ್ 2020, 3:48 IST
ಅಕ್ಷರ ಗಾತ್ರ

ಶಾಂಘೈ: ಕೊರೊನಾ ವೈರಸ್‌ ದಾಳಿ ಚೀನಾದಲ್ಲಿ ಮಹತ್ತರ ಬದಲಾವಣೆಯೊಂದಕ್ಕೆ ಕಾರಣವಾಗಿದೆ. ಚೀನಾ ಜಾನುವಾರು ಮತ್ತು ಸಾಕುಪ್ರಾಣಿಗಳ ಮರುವರ್ಗೀಕರಿಸಿ ಕರಡು ಸಿದ್ಧಪಡಿಸಿದೆ. ಅದರಲ್ಲಿ ಶ್ವಾನವನ್ನು ಜಾನುವಾರುಗಳ ಪಟ್ಟಿಯಿಂದ ಕೈ ಬಿಟ್ಟು ಸಾಕು ಪ್ರಾಣಿಗಳ ಪಟ್ಟಿಗೆ ಸೇರಿಸಿದೆ. ‌

ಚೀನಾದ ಹಲವು ಪ್ರಾಂತ್ಯಗಳಲ್ಲಿ ನಾಯಿ ಆಹಾರದ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ, ಚೀನಾದ ಕೃಷಿ ಸಚಿವಾಲಯ ಹೊಸ ವರ್ಗೀಕರಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲಿ ಇನ್ನು ಮುಂದೆ ನಾಯಿಯನ್ನು ಜಾನುವಾರು ಎಂದು ನೋಡದೇ ಸಾಕುಪ್ರಾಣಿಯಾಗಿ ಪರಿಗಣಿಸಲು ನಿರ್ಧರಿಸಲಾಗಿದೆ. ಆಹಾರ, ಹಾಲು, ಉಣ್ಣೆ, ಔಷಧ, ಕ್ರೀಡೆ ಮತ್ತು ಮಿಲಿಟರಿ ಉದ್ದೇಶಕ್ಕೆ ಜಾನುವಾರುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

‘ನಾಗರಿಕತೆ ಬೆಳೆದಂತೆಲ್ಲ ನಾಯಿಗಳು ಮಾನವನ ಒಡನಾಡಿಯಾಗಿ ಜೊತೆಗೇ ಬಂದಿವೆ. ಅಲ್ಲದೆ, ಜಗತ್ತು ಕೂಡ ನಾಯಿಯನ್ನು ಜಾನುವಾರು ಎಂದು ಪರಿಗಣಿಸಿಲ್ಲ. ಹೀಗಾಗಿ ಚೀನಾ ಕೂಡ ಅದರನ್ನು ಇನ್ನು ಮುಂದೆ ಜಾನುವಾರು ಎಂದು ಪರಿಗಣಿಸದೇ ಸಾಕು ಪ್ರಾಣಿಯ ಪಟ್ಟಿಗೆ ಸೇರಿಸುತ್ತಿದೆ,’ ಎಂದು ಹೊಸ ಕರಡಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ನಾಯಿಯನ್ನು ಆಹಾರಕ್ಕಾಗಿ ಬಳಸಿಕೊಳ್ಳಬಾರದು ಎಂದು ಚೀನಾ ಸರ್ಕಾರ ಅಧಿಕೃತವಾಗಿ ಹೇಳಿಲ್ಲವಾದರೂ, ಪ್ರಾಣಿಗಳ ಮರು ವರ್ಗೀಕರಣವೂ ಈ ನಿಟ್ಟಿಲ್ಲಿ ಮಹತ್ವದ್ದು ಎಂದು ನಾಗರಿಕ, ಪ್ರಾಣಿ ಸಂರಕ್ಷಣಾ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಚೀನಾದಲ್ಲಿ ಇತ್ತೀಚೆಗೆ ನಾಯಿಯ ಮಾಂಸ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ದಕ್ಷಿಣ ಚೀನಾದ ಶೆಂಜೆನ್‌ ಈಗಾಗಲೇ ಅದನ್ನು ನಿಷೇಧಿಸಿದೆ. ಆದರೂ, ಚೀನಾದಲ್ಲಿ 10 ಮಿಲಿಯನ್‌ ನಾಯಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಅಲ್ಲದೇ, ಚೀನಾದ ಗೌಂಗ್ಸಿ ಪ್ರಾಂತ್ಯದ ಯುಲಿನ್‌ ಎಂಬಲ್ಲಿ ಪ್ರತಿ ವರ್ಷವೂ ನಾಯಿ ಮಾಂಸದ ಹಬ್ಬವನ್ನೇ ಆಚರಿಸಲಾಗುತ್ತದೆ.

ಕೊರೊನಾ ವೈರಸ್‌ ಎಂಬ ಮಾಹಾಮಾರಿ ಬಾವಲಿಗಳ ಮೂಲಕ ಮಾನವನ ದೇಹ ಪ್ರವೇಶಿಸಿದೆ ಎಂಬ ವಾದ ಪ್ರಬಲವಾದ ಹಿನ್ನೆಲೆಯಲ್ಲಿ ಚೀನಾ ಇತ್ತೀಚೆಗೆ ಕಾಡು ಪ್ರಾಣಿಗಳ ಮಾರಾಟಕ್ಕೆ ನಿಷೇಧ ಹೇರಿತ್ತು. ಹೀಗಿರುವಾಗಲೇ ನಾಯಿಯನ್ನು ಜಾನುವಾರುಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ಸರ್ಕಾರದ ಮಹತ್ವದ ನಿರ್ಧಾರ ಎಂದು ಪರಿಗಣಿಸಲಾಗಿದೆ. ಇದು ಭವಿಷ್ಯದಲ್ಲಿ ನಾಯಿ ಮಾಂಸದ ನಿಷೇಧಕ್ಕೆ ಕಾರಣವಾಗಬಹುದು ಎಂದೂ ಪ್ರಾಣಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT