ಶನಿವಾರ, ಮೇ 15, 2021
26 °C

ಹತ್ತು ಬಿಯರ್‌ ಕುಡಿದು 18 ಗಂಟೆ ನಿದ್ರಿಸಿದ ವ್ಯಕ್ತಿ ಮೂತ್ರಕೋಶಕ್ಕೆ ಸಂಚಕಾರ 

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಎರಡು ಅಥವಾ ಮೂರು ಬಿಯರ್ ಬಾಟಲಿಗಳನ್ನು ಕುಡಿದವರು ಪದೇ ಪದೇ ಮೂತ್ರ ವಿಸರ್ಜಿಸಲು ಶೌಚಾಲಯಕ್ಕೆ ಹೋಗುವುದು ಸಾಮಾನ್ಯ. ಬಿಯರ್‌ ಕುಡಿದದ್ದು ಹೆಚ್ಚಾದಂತೆಲ್ಲ ಶೌಚಾಲಯಕ್ಕೆ ಹೋಗುವುದೂ ಹೆಚ್ಚಾಗುವುದರಲ್ಲಿ ಅನುಮಾನವೇನಿಲ್ಲ. 

ಇದು ಸಾಮಾನ್ಯ. ಬಿಯರ್‌ ಕುಡಿದಾಗ ಆಗಾಗ್ಗೆ ಮೂತ್ರ ವಿಸರ್ಜಿಸುವುದು ಒಳ್ಳೆಯದೇ. ಹೀಗೆ ಮಾಡುವುದರಿಂದ ಮೂತ್ರಕೋಶವು ತುಂಬಿಕೊಂಡು ಸಮಸ್ಯೆಯಾಗುವುದನ್ನು ತಪ್ಪಿಸಬಹುದು. ಆದರೆ ಮದ್ಯ ಸೇವಿಸಿದಾಗ ಮೂತ್ರವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದರಿಂದ ಕೆಲವು ಗಂಭೀರ ಪರಿಣಾಮಗಳು ಉಂಟಾಗಬಹುದು. ಅದಕ್ಕೆ ಚೀನಾದಲ್ಲಿ ಒಂದು ಉದಾಹರಣೆ ಸಿಕ್ಕಿದೆ.

ಕಂಠಪೂರ್ತಿ ಬಿಯರ್ ಕುಡಿದ ಚೀನಾದ ವ್ಯಕ್ತಿಯೊಬ್ಬ ದಿನದ ಮಟ್ಟಿಗೆ ಮೂತ್ರ ತಡೆದು ಸಮಸ್ಯೆ ತಂದುಕೊಂಡಿದ್ದಾನೆ. ಆತನ ಮೂತ್ರಕೋಶ ಈಗ ಹರಿದು ರಂಧ್ರ. 

ಚೀನಾ ಹೂ ಎಂಬ ಹೆಸರಿನ ವ್ಯಕ್ತಿ ಚೀನಾದ ಪೂರ್ವ ಪ್ರಾಂತ್ಯದ ಕ್ಷಿಜಿಯಾಂಗ್‌ನ ಝೂಜಿ ಪೀಪಲ್ಸ್ ಆಸ್ಪತ್ರೆಗೆ ಕೆಳಹೊಟ್ಟೆ ನೋವಿನ ಕಾರಣಕ್ಕೆ ದಾಖಲಾಗಿದ್ದಾರೆ. 18 ಗಂಟೆಗಳ ಕಾಲ ಮೂತ್ರ ವಿಸರ್ಜನೆ ಮಾಡದ ಕಾರಣಕ್ಕಾಗಿ ವ್ಯಕ್ತಿಯ ಮೂತ್ರಕೋಶ ವಿಪರೀತ ದೊಡ್ಡದಾಗಿ, ಹರಿದು ರಂಧ್ರವಾಗಿದೆ ಎಂದು ವರದಿಯಾಗಿದೆ. 

ಕುಡಿದು ಗಾಢವಾಗಿ ನಿದ್ರಿಸಿದ್ದ ಹೂಗೆ ಎಚ್ಚರವಾದಾಗ ಕೆಳಹೊಟ್ಟೆಯಲ್ಲಿ ತೀವ್ರವಾಗಿ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 

40ರ ಹರೆಯದ ಹೂ ಹಿಂದಿನ ದಿನ ರಾತ್ರಿ 10 ಬಿಯರ್‌ಗಳನ್ನು ಕುಡಿದಿದ್ದರು. ಆದರೆ, ಇಡೀ ದಿನ ಮೂತ್ರ ವಿಸರ್ಜನೆ ಮಾಡದೇ ಗಾಢವಾಗಿ ಮಲಗಿದ್ದರು. 18 ಗಂಟೆಗಳಿಗೂ ಹೆಚ್ಚುಕಾಲ ಅವರು ಮೂತ್ರ ತಡೆದಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಮೂತ್ರಕೋಶ ಮೂರು ಕಡೆಗಳಲ್ಲಿ ಹರಿದು ರಂಧ್ರವಾಗಿದೆ. ಇದು ಮೂತ್ರಕೋಶದ ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿಯೇ ಹೂಗೆ ಕೆಳಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಮೂತ್ರ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡ ಹಿನ್ನೆಲೆಯಲ್ಲಿ ಒತ್ತಡ ಸೃಷ್ಟಿಯಾಗಿ ಮೂತ್ರಕೋಶ ಹರಿದಿದೆ. ಹೂಗೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಮೂವರು ತಜ್ಞ ವೈದ್ಯರು ಹೂಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಸಮಸ್ಯೆ ಸರಿಪಡಿಸಿದ್ದಾರೆ. ಸದ್ಯ ಹೂ ಸ್ಥಿತಿ ಸ್ಥಿರವಾಗಿದ್ದು, ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು