ಶುಕ್ರವಾರ, ಜುಲೈ 30, 2021
20 °C
1979ರಲ್ಲಿ ಅನಾವರಣಗೊಳಿಸಲಾಗಿದ್ದ ನಾವಿಕ ಕೊಲಂಬಸ್‌ ಪ್ರತಿಮೆ ಧ್ವಂಸ

ಕೊಲಂಬಸ್‌ನ ಪ್ರತಿಮೆಗಳ ಕಡೆಗೆ ತಿರುಗಿದ ಅಮೆರಿಕ ಪ್ರತಿಭಟನಕಾರರ ಆಕ್ರೋಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬೋಸ್ಟನ್: ಜಾರ್ಜ್‌ ಫ್ಲಾಯ್ಡ್‌ ಸಾವಿನ ನಂತರ ವರ್ಣಭೇದ ನೀತಿಯ ವಿರುದ್ಧ ಮಡುಗಟ್ಟಿದ್ದ  ಪ್ರತಿಟನಾಕಾರರ ಅಸಹನೆ ಮತ್ತು ಆಕ್ರೋಶ ವಸಾಹತು ಕಾಲದ ನಾಯಕರ ಪ್ರತಿಮೆಗಳ ಕಡೆ ತಿರುಗಿದೆ. ಮೂರು ನಗರಗಳಲ್ಲಿ ಕ್ರಿಸ್ಟೋಫರ್‌ ಕೊಲಂಬಸ್‌ ಪ್ರತಿಮೆಗಳನ್ನು ಬುಧವಾರ  ಹಾನಿಗೊಳಿಸಲಾಗಿದೆ.‌

ಈ ಪ್ರತಿಮೆಗಳು ವರ್ಣಭೇದ ನೀತಿಯ ಸಂಕೇತಗಳಾಗಿವೆ ಎಂಬದು ಪ್ರತಿಭಟನಾಕಾರರ ರೋಷಾವೇಶಕ್ಕೆ ಕಾರಣ. ಈ ಪ್ರತಿಮೆಗಳ ವಿರುದ್ಧ ವಿರುದ್ಧ ಹಿಂದಿನಿಂದಲೂ ನಾಗರಿಕ ಹಕ್ಕು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಟಲಿಯ ನಾವಿಕ ಕೊಲಂಬಸ್‌, ಸಮುದ್ರ ಮಾರ್ಗ ಅನ್ವೇಷಕ ಮಾತ್ರವಲ್ಲ, ವಸಾಹತುಶಾಹಿ ಆರಂಭಕ್ಕೆ ದಾರಿಮಾಡಿಕೊಟ್ಟಿದ್ದರು. ಮಿನೆಸೋಟಾ, ಬೋಸ್ಟನ್‌ ಮತ್ತು ವರ್ಜಿನಿಯಾದ ರಿಚ್ಮಂಡ್‌ನಲ್ಲಿರುವ ಕೊಲಂಬಸ್‌ ಪ್ರತಿಮೆಗಳು ಧ್ವಂಸಗೊಂಡಿವೆ.

ಮಿನೆಸೋಟಾದ ಸೇಂಟ್‌ ಪಾಲ್‌ನಲ್ಲಿ ಇದ್ದ 10 ಅಡಿ ಎತ್ತರದ ಕೊಲಂಬಸ್‌ ಕಂಚಿನ ಪ್ರತಿಮೆಯನ್ನು ಸೋಮವಾರ ಉರುಳಿಸಲಾಗಿದೆ. ಪ್ರತಿಭಟನಕಾರರ ಗುಂಪು ಪ್ರತಿಮೆಯ ಕೊರಳಿಗೆ ಹಗ್ಗ ಕಟ್ಟಿ ಎಳೆದು ಪೀಠದಿಂದ ಕೆಳಗುರುಳಿಸಿದೆ. ಪ್ರತಿಮೆಯ ತಲೆಗೆ ಕಾಲಿನಿಂದ ಒದ್ದು, ಸುತ್ತಲೂ ಕುಣಿದಾಡಿ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದಾರೆ. ಭದ್ರತಾ ಸಿಬ್ಬಂದಿ ಸ್ಥಳದಲ್ಲಿದ್ದರೂ ಮಧ್ಯಪ್ರವೇಶಿಸಲಿಲ್ಲ.

ಕೊಲಂಬಸ್‌ ಸಮುದ್ರಮಾರ್ಗ ಅನ್ವೇಷಕ ಎಂಬ ಚಿಂತನೆಯನ್ನು ಒಪ್ಪದಿರುವ ಕೆಲ ಮೂಲನಿವಾಸಿ ಅಮೆರಿಕನ್ನರೂ ಪ್ರತಿಭಟನೆಗೆ ಕೈಜೋಡಿಸಿದ್ದರು.

ಮಿನಿಯಾಪೊಲಿಸ್‌ನ ಬಿಳಿಯ ಪೊಲೀಸ್‌ ಅಧಿಕಾರಿ ಡೆರೆಕ್‌ ಷಾವಿನ್‌ ಕ್ರೌರ್ಯಕ್ಕೆ ಫ್ಲಾಯ್ಡ್‌ ಮೃತಪಟ್ಟ ಘಟನೆ ನಡೆದ ಸ್ಥಳದಿಂದ 10 ಮೈಲು ದೂರದಲ್ಲಿ ಸೇಂಟ್‌ ಪಾಲ್‌ ನಗರವಿದೆ.

ಬೋಸ್ಟನ್‌ನಲ್ಲಿ ಕೊಲಂಬಸ್‌ ಪ್ರತಿಮೆಯ ತಲೆ ಕಡಿದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಯಾಮಿಯಲ್ಲೂ ಕೊಲಂಬಸ್‌ ಪ್ರತಿಮೆಗೆ ಹಾನಿ ಮಾಡಲಾಗಿದೆ.

‘ದಾಳಿಗೆ ಒಳಗಾದ ಪ್ರತಿಮೆಯನ್ನು ನಮ್ಮ ಸ್ವಾಧೀನಕ್ಕೆ ಪಡೆದಿದ್ದೇವೆ. ಕೊಲಂಬಸ್‌ ಪಾರ್ಕ್‌ನ ಅದೇ ಸ್ಥಳದಲ್ಲಿ ಈ ಪ್ರತಿಮೆ ಮರುಸ್ಥಾಪಿಸುವ ಕುರಿತು ಚರ್ಚೆ ನಡೆದಿದೆ’ ಎಂದು ಬೋಸ್ಟನ್‌ ಮೇಯರ್ ಮಾರ್ಟಿ ವಾಲ್ಶ್‌ ಹೇಳಿದ್ದಾರೆ. 6 ಅಡಿ ಎತ್ತರದ ಈ ಪ್ರತಿಮೆಯನ್ನು 1979ರಲ್ಲಿ ಅನಾವರಣಗೊಳಿಸಲಾಗಿತ್ತು.

ಮಂಗಳವಾರ ರಿಚ್ಮಂಡ್‌ನ ಬರ್ಡ್‌ಪಾರ್ಕ್‌ನಲ್ಲಿದ್ದ ಕೊಲಂಬಸ್‌ ಪ್ರತಿಮೆಯನ್ನು ಬೀಳಿಸಿ ಪಕ್ಕದ ಸರೋವರಕ್ಕೆ ಎಸೆಯಲಾಗಿತ್ತು. ಇದು ಅಮೆರಿಕದಲ್ಲಿ ಸ್ಥಾಪನೆಯಾದ ಕೊಲಂಬಸ್‌ನ ಮೊದಲ ಪ್ರತಿಮೆ. 1927ರಲ್ಲಿ ಈ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು.

ರಿಚ್ಮಂಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ಸಾವಿರ ಜನರು ಸೇರಿದ್ದರು. ‘ಈ ನೆಲ ಮೂಲತಃ ಪೊಹಾಟನ್‌ಗೆ ಸೇರಿದೆ. ಕೊಲಂಬಸ್‌ ಹತ್ಯಾಕಾಂಡದ ಪ್ರತಿನಿಧಿ’ ಎಂಬ ಘೋಷಣೆಗಳಿದ್ದ ಫಲಕಗಳನ್ನು ಪ್ರತಿಭಟನ‌ಕಾರರು ಹಿಡಿದಿದ್ದರು.

ಪ್ರತಿಮೆಗಳ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಹಿಂದೆಯೇ ವರ್ಜಿನಿಯಾದ ರಾಜ್ಯಪಾಲ ರಾಲ್ಪ್‌ ನಾರ್ಥಮ್‌ ಅವರು, ನಗರದಲ್ಲಿದ್ದ ರಾಬರ್ಟ್‌ ಲೀ ಪ್ರತಿಮೆ ತೆಗೆಯುವ ನಿಲುವು ಪ್ರಕಟಿಸಿದ್ದರು. ಜೊತೆಗೆ ಸ್ಮಾರಕ ಸ್ಥಳದಲ್ಲಿದ್ದ ಇತರೆ ನಾಲ್ಕು ಪ್ರತಿಮೆಗಳನ್ನು ತೆಗೆಯಬೇಕು ಎಂದು ರಿಚ್ಮಂಡ್‌‌ ನಗರಸಭೆಯ ಸದಸ್ಯರು ರಾಜ್ಯಪಾಲರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಜೆಫರ್ಸನ್‌ ಡೇವಿಡ್‌ ಪ್ರತಿಮೆ ಭಗ್ನ:

ರಿಚ್ಮಂಡ್‌ನ ವರ್ಜೀನಿಯಾದಲ್ಲಿದ್ದ ಜೆಫರ್ಸನ್‌ ಡೇವಿಸ್‌ ಅವರ ಪ್ರತಿಮೆಯನ್ನೂ ಪ್ರತಿಭಟನಾಕಾರರು ಬುಧವಾರ ರಾತ್ರಿ ಭಗ್ನಗೊಳಿಸಿದ್ದಾರೆ. ಡೇವಿಸ್‌ (1808–1889) ಅಮೆರಿಕದ ರಾಜ್ಯಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು.

ಕೊಲಂಬಸ್‌: ಶಾಲಾ ಪಠ್ಯಪುಸ್ತಕಗಳಲ್ಲಿ ಸಮುದ್ರ ಮಾರ್ಗದ ಅನ್ವೇಷಕ ಎಂದು ಪರಿಚಿತರಾಗಿರುವ ಕ್ರಿಸ್ಟೋಫರ್‌ ಕೊಲಂಬಸ್‌ (1451–1506) ಇಟಲಿಯ ಜಿನೋವಾದ ನಾವಿಕ.

ಸ್ಪೇನ್‌ನಿಂದ ನಾಲ್ಕು ಬಾರಿ (1492, 1493, 1498 ಮತ್ತು 1502) ಅಟ್ಲಾಂಟಿಕ್‌ ಸಾಗರ ಮಾರ್ಗವಾಗಿ ಸಮುದ್ರಯಾನ ಕೈಗೊಂಡಿದ್ದ ಕೊಲಂಬಸ್‌, ಯುರೋಪ್‌ನಿಂದ ಏಷ್ಯಕ್ಕೆ ನೇರವಾಗಿ ಜಲಮಾರ್ಗ ಕಂಡುಹಿಡಿಯುವ ಪ್ರಯತ್ನದಲ್ಲಿದರು. ಆದರೆ ಆ ಯತ್ನದಲ್ಲಿ ಯಶಸ್ವಿಯಾಗಿರಲಿಲ್ಲ.

ಆದರೆ ಕೊಲಂಬಸ್‌ ಅಮೆರಿಕಕ್ಕೆ ಯಾನ ಕೈಗೊಂಡ ನಂತರ ಅಲ್ಲಿಗೆ ಐರೋಪ್ಯರು ದೊಡ್ಡ ಪ್ರಮಾಣದಲ್ಲಿ ಬಂದು ವಸಾಹತು ಸ್ಥಾಪನೆ ಆರಂಭವಾಯಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು