ಬುಧವಾರ, ನವೆಂಬರ್ 30, 2022
17 °C

ಕಿಮ್‌ ಜಾಂಗ್‌ ಉನ್‌ ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ಆಯ್ಕೆ ಹಿಂದಿದೆ ಕಾರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್‌: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್‌ ಉನ್ ರಾಷ್ಟ್ರ ರಾಜಧಾನಿ ಪ್ಯೊಂಗ್ಯಾಂಗ್‌ನ ಆಸ್ಪತ್ರೆಗಳ ಬದಲಿಗೆ ಕಣಿವೆ ಪ್ರದೇಶ ಹ್ಯಾಂಗ್‌ ಸ್ಯಾನ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಅದರ ಹಿಂದೆಯೂ ನಿರ್ದಿಷ್ಟ ಕಾರಣಗಳಿವೆ ಎಂದು ತಿಳಿದು ಬಂದಿದೆ. 

ಈ ಕುರಿತು ಉತ್ತರ ಕೊರಿಯಾದಲ್ಲಿರುವ ತನ್ನ ಮೂಲಗಳ ಮಾಹಿತಿ ಉಲ್ಲೇಖಿಸಿ  ದಕ್ಷಿಣ ಕೊರಿಯಾದ ವೆಬ್‌ ಮಾಧ್ಯಮ ‘ಡೈಲಿ ಎನ್‌ಕೆ’ ಗುರುವಾರ ವರದಿ ಮಾಡಿದೆ. 

ಕಣಿವೆ ಪ್ರದೇಶವಾಗಿರುವ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಹ್ಯಾಂಗ್‌ ಸ್ಯಾನ್‌ ಪ್ರಾಂತ್ಯದಲ್ಲಿ ಉತ್ತರ ಕೊರಿಯಾ ನಿರ್ಮಿಸಿರುವ ಆಸ್ಪತ್ರೆಯು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿರುವ ಕಿಮ್ ಕುಟುಂಬದ ವಿಶೇಷ ಬಳಕೆಗಾಗಿ ಮಾತ್ರ ಮೀಸಲಾಗಿದೆ ಎಂದು ತಿಳಿದು ಬಂದಿದೆ.  2014ರಿಂದ ಕಿಮ್‌ ಜಾಂಗ್‌ ಉನ್‌ಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅಂದಿನಿಂದಲೂ ಅದು ಕಿಮ್‌ ಕುಟುಂಬಕ್ಕೆ ಮಾತ್ರವೇ ಮೀಸಲಾಗಿದೆ ಎಂದು ಡೈಲಿ ಎನ್‌ಕೆ ವರದಿ ಮಾಡಿದೆ. 

ಕಿಮ್ ಜಾಂಗ್‌ ಉನ್‌ ಅವರ ಅಜ್ಜ ಕಿಮ್‌ ಸುಂಗ್‌ ಅವರ ನಿಧನಾನಂತರ 1994ರಲ್ಲಿ ಹ್ಯಾಂಗ್‌ ಸ್ಯಾನ್‌ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.

ಆಸ್ಪತ್ರೆ ನಿರ್ಮಾಣದ ಹಿಂದಿದೆ ಒಂದು ಕತೆ

‘ಕಿಮ್‌ ಅಜ್ಜ ಕಿಮ್ ಸುಂಗ್ 1994 ರಲ್ಲಿ ಹಯಾಂಗ್ ಸ್ಯಾನ್‌ನ ತಮ್ಮ ಬಂಗಲೆಯಲ್ಲಿದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದರು. ಅದೇ ಸಂದರ್ಭದಲ್ಲಿ ವಿಪರೀತ ಮಳೆಯಿದ್ದ ಕಾರಣಕ್ಕೆ, ಹೆಲಿಕಾಪ್ಟರ್‌ ಟೇಕಾಫ್‌ ಸಾಧ್ಯವಾಗದೇ, ಅವರನ್ನು ಬೇರೆಡೆ ಆಸ್ಪತ್ರೆಗೆ ಸಾಗಿಸಲಾಗಿರಲಿಲ್ಲ. ಕೊನೆಗೆ ತೀವ್ರವಾದ ಹೃದಯ ಸ್ನಾಯುವಿನ ಸೋಂಕು ಮತ್ತು ಹೃದಯಾಘಾತದಿಂದ (ಉತ್ತರ ಕೊರಿಯಾದ ರಾಜ್ಯ ಮಾಧ್ಯಮಗಳು ವರದಿ ಮಾಡಿದಂತೆ) ಮೃತಪಟ್ಟಿದ್ದರು’ ಎಂದು ಮೂಲಗಳು ತಿಳಿಸಿವೆ.

ಹ್ಯಾಂಗ್‌ ಸ್ಯಾನ್‌ನಲ್ಲಿ ಒಂದು ವೇಳೆ ಆಸ್ಪತ್ರೆ ಇದ್ದಿದ್ದರೆ ತಮ್ಮ ತಂದೆ ಉಳಿಯುತ್ತಿದ್ದರು ಎಂದು ನಂಬಿದ್ದ ಕಿಮ್‌ ಜಾಂಗ್‌ ಇಲ್‌ (ಕಿಮ್‌ ಜಾಂಗ್‌ ಉನ್‌ ತಂದೆ) ಅಲ್ಲಿ ಆಸ್ಪತ್ರೆ ನಿರ್ಮಿಸಲು ಆದೇಶಿಸಿದ್ದರು ಎನ್ನಲಾಗಿದೆ. 

‘ಹ್ಯಾಂಗ್‌ ಸ್ಯಾನ್‌ನ ಭೌಗೋಳಿಕ ಲಕ್ಷಣಗಳು ಅಲ್ಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಪ್ರಧಾನ ಪಾತ್ರ ವಹಿಸಿವೆ. ರಾಷ್ಟ್ರ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಆಸ್ಪತ್ರೆಯನ್ನು ನಿರ್ಮಿಸುವುದು ಎಲ್ಲರ ಗಮನವನ್ನೂ ಸೆಳೆಯುತ್ತದೆ. ಆದರೆ,  ಅದನ್ನು ಹೆಚ್ಚು ದೂರದ ಸ್ಥಳದಲ್ಲಿ ನಿರ್ಮಿಸುವುದರಿಂದ ಹೊರಗಿನ ಕಣ್ಣುಗಳು ಇಳುಕಲು ಸಾಧ್ಯವಾಗುವುದಿಲ್ಲ ಎಂಬುದೂ ಈ ಆಸ್ಪತ್ರೆ ನಿರ್ಮಾಣದ ಹಿಂದಿನ ಉದ್ದೇಶ.

ಆಸ್ಪತ್ರೆಯ ಸ್ಥಳವು ಸೂಕ್ತವಾಗಿದೆ. ಏಕೆಂದರೆ ಹ್ಯಾಂಗ್‌ ಸ್ಯಾನ್ ಪ್ಯೊಂಗ್ಯಾಂಗ್‌ಗೆ ಹತ್ತಿರದಲ್ಲಿದೆ ಮತ್ತು ಅದನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ದೇಶದ ನಾಯಕನಿಗೆ ಒಂದು ವೇಳೆ ಏನಾದರೂ ಆದಾಗ ಅದು ಜನರಿಗೆ ತಿಳಿದರೆ ಅಶಾಂತಿಗೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕೆ ದೃಷ್ಟಿಯಿಂದ ಹ್ಯಾಂಗ್‌ ಸ್ಯಾನ್‌ನಲ್ಲಿ ಆಸ್ಪತ್ರೆ ನಿರ್ಮಿಸಿ, ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ,’ ಎಂದು ಎಂದು ಮೂಲಗಳು ತಿಳಿಸಿವೆ.

ಹೃದಯ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಗೆಂದೇ ಹ್ಯಾಂಗ್ ಸ್ಯಾನ್ ಆಸ್ಪತ್ರೆಯನ್ನು ವಿಶೇಷವಾಗಿ ದೀರ್ಘಕಾಲದಿಂದ ನಿರ್ವಹಿಸಲಾಗುತ್ತಿದೆ ಎನ್ನಲಾಗಿದೆ. ಜರ್ಮನಿ ಮತ್ತು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾದ ಅತ್ಯುತ್ತಮವಾದ ಉಪಕರಣಗಳನ್ನು ಇಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ವೈದ್ಯರು ಪರಿಣತರಾಗಿದ್ದು, ಅವರೆಲ್ಲರೂ ಹ್ಯಾಂಗ್‌ ಸ್ಯಾನ್‌ನಲ್ಲೇ ವಾಸಿಸುತ್ತಿದ್ದಾರೆ ಎನ್ನುತ್ತವೆ ಮೂಲಗಳು  

(ದಕ್ಷಿಣ ಕೊರಿಯಾದ ವೆಬ್‌ ಮಾಧ್ಯಮವಾಗಿರುವ ‘ಡೈಲಿ ಎನ್‌ಕೆ’ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿತ್ತು.) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು