ಗುರುವಾರ , ಅಕ್ಟೋಬರ್ 17, 2019
24 °C

ವಿಶ್ವಸಂಸ್ಥೆಯಲ್ಲಿ ಇಮ್ರಾನ್‌ ಖಾನ್‌ ಹಗೆತನದ ಭಾಷಣ; ಭಾರತದ ತೀಕ್ಷ್ಣ ಪ್ರತಿಕ್ರಿಯೆ

Published:
Updated:

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಇ್ರಮಾನ್‌ ಖಾನ್‌ ಮಾಡಿದ ಹಗೆತನದಿಂದ ಕೂಡಿದ ಭಾಷಣಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ದ್ವೇಷಪೂರಿತ ಸಿದ್ದಾಂತದ ಮೂಲಕ ಭಯೋತ್ಪಾದನೆಯ ಕೈಗಾರಿಕೆಯನ್ನೆ ಸೃಷ್ಟಿಸಿಕೊಂಡಿರುವವರಿಂದ ಭಾರತದ ಪ್ರಜೆಗಳು ತಮ್ಮ ಪರವಾಗಿ ಮಾತನಾಡಲು ಬಯಸುವುದಿಲ್ಲ‘ ಎಂದಿದೆ. 

ಶುಕ್ರವಾರ ವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲಿ ಇಮ್ರಾನ್‌ ಖಾನ್‌ ತನ್ನ ಮೊದಲ ಭಾಷಣ ಮಾಡಿದರು. ಅವರ 50 ನಿಮಿಷಗಳ ಭಾಷಣದಲ್ಲಿ ಅರ್ಧದಷ್ಟು ಸಮಯವನ್ನು ಭಾರತ ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ವಿನಿಯೋಗಿಸಿದರು. ಇದೇ ಸಮಯದಲ್ಲಿ ಅಣ್ವಸ್ತ್ರ ಯುದ್ಧದ ಗುಂಗನ್ನು ಹರಡಿದ್ದರು. 

ಪಾಕಿಸ್ತಾನ ಪ್ರಧಾನಿಯ ಹೇಳಿಕೆಗೆ ಪ್ರತಿಕ್ರಿಯಿಸುವ ಹಕ್ಕು ಅನುಸರಿಸುವ ಮೂಲಕ ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಕಾರ್ಯದರ್ಶಿ ವಿದಿಶಾ ಮೈತ್ರಾ ತೀಕ್ಷ್ಣ ಪ್ರತಿಕ್ರಿಯೆ ದಾಖಲಿಸಿದರು. 

‘ಮಹೋನ್ನತ ಅಧಿವೇಶನದಲ್ಲಿ ಈ ವೇದಿಕೆಯಿಂದ ಕೇಳಿಬಂದ ಪ್ರತಿ ಶಬ್ದವೂ ಐತಿಹಾಸಿಕ ಮೌಲ್ಯವನ್ನು ಹೊತ್ತಿದ್ದವು. ದುರದೃಷ್ಟವಶಾತ್‌, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಆಡಿದ ಮಾತುಗಳು ಜಗತ್ತಿನೆದುರು ಇಬ್ಬಗೆ ನೀತಿಯನ್ನು ಪ್ರದರ್ಶಿಸಿದಂತಿತ್ತು. ನಾವು ಮತ್ತು ಅವರು; ಸಿರಿವಂತ ಮತ್ತು ಬಡವ; ಉತ್ತರ ಮತ್ತು ದಕ್ಷಿಣ; ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ; ಮುಸಲ್ಮಾನರು ಮತ್ತು ಇತರರು. ಆ ಎಲ್ಲ ಮಾತುಗಳು ವಿಶ್ವಸಂಸ್ಥೆಯಲ್ಲಿ ಒಡಕುಂಟು ಮಾಡಲು ಪ್ರೋತ್ಸಾಹಿಸಿದಂತಿವೆ. ಭೇದಗಳನ್ನು ಎತ್ತಿ ತೋರುವುದು, ದ್ವೇಷವನ್ನು ಹರಡುವ ಪ್ರಯತ್ನವಾಗಿ ಹಗೆತನದ ಭಾಷಣವನ್ನು ಮುಂದಿಟ್ಟಿದ್ದಾರೆ‘ ಎಂದು ಹೇಳಿದರು. 

ಇದನ್ನೂ ಓದಿ: ಕರ್ಫ್ಯೂ ತೆಗೆದರೆ ರಕ್ತದೋಕುಳಿ: ಇಮ್ರಾನ್‌ ಎಚ್ಚರಿಕೆ

'ರಾಜತಾಂತ್ರಿಕತೆಯಲ್ಲಿ ಪದಗಳು ಮುಖ್ಯವಾಗುತ್ತವೆ. ರಕ್ತದೋಕುಳಿ, ಜನಾಂಗೀಯ ಅತಿಶಯ, ಬಂದೂಕು ಕೈಗೆತ್ತಿಕೊಳ್ಳುವುದು, ಕೊನೆಯವರೆಗೂ ಸಮರ ಹೋರಾಟ, ಧಾರ್ಮಿಕ ಸಮುದಾಯ,..ಇಂಥ ಪದಗಳ ಬಳಕೆಯು ಮಧ್ಯಯುಗ ಯೋಚನೆಯನ್ನು ಪ್ರತಿಬಿಂಬಿಸುತ್ತದೆಯೇ ಹೊರತು 21ನೇ ಶತಮಾನದ ನೋಟವನ್ನಲ್ಲ' ಎಂದರು. 

’ತನ್ನ ಜನರ ವಿರುದ್ಧವೇ 1971ರಲ್ಲಿ ನಡೆಸಿದ ಜನಾಂಗೀಯ ಹತ್ಯೆ ಮತ್ತು ಅದರಲ್ಲಿ ಲೆಫ್ಟಿನಂಟ್‌ ಜನರಲ್‌ ಎ.ಎ.ಕೆ.ನಿಯಾಝಿ ಅವರ ಪಾತ್ರವನ್ನು ಮರೆಯಬೇಡಿ. ಇತಿಹಾಸದ ತಿಳಿವಳಿಕೆಯನ್ನು ಮತ್ತೊಮ್ಮೆ ಗಮನಿಸಿಕೊಳ್ಳಲು ನಿಮ್ಮಲ್ಲಿ ಮನವಿ ಮಾಡುತ್ತೇವೆ‘ ಎಂದು ಮೈತ್ರಾ ಹೇಳಿದರು. 

‘ಅಣ್ವಸ್ತ್ರಗಳ ಆತಂಕಗಳಿಂದ ಅಪಾಯವನ್ನು ಸೃಷ್ಟಿಸುವ ಮೂಲಕ ಯಶಸ್ಸನ್ನು ಗಳಿಸುವ ಯುಕ್ತಿಯೇ ಹೊರತು ಉತ್ತಮ ಆಡಳಿತಗಾರನ ವರಸೆಯಲ್ಲ‘ ಎಂದರು. 

ಇದನ್ನೂ ಓದಿ: ಭಾರತದ ಕೊಡುಗೆ ಯುದ್ಧವಲ್ಲ, ಬುದ್ಧ: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮೋದಿ

 ‘ವಿಶ್ವಸಂಸ್ಥೆ ಪಟ್ಟಿ ಮಾಡಿರುವ 130 ಉಗ್ರರು ಹಾಗೂ 25 ಉಗ್ರ ಸಂಘಟನೆಗಳಿಗೆ ನೆಲೆಯಾಗಿರುವ ಸತ್ಯವನ್ನು ಪಾಕಿಸ್ತಾನ ಸ್ಪಷ್ಟಪಡಿಸುತ್ತದೆಯೇ? ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ಅಲ್‌ ಖೈದಾ ಉಗ್ರ ಸಂಘಟನೆಯ ವ್ಯಕ್ತಿಗೆ ಪಿಂಚಣಿ ನೀಡುತ್ತಿರುವ ಜಗತ್ತಿನ ಏಕೈಕ ಸರ್ಕಾರ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಳ್ಳುತ್ತದೆಯೇ? ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಕಾರಣ ನ್ಯೂಯಾರ್ಕ್‌ನಲ್ಲಿ ಹಬೀಬ್‌ ಬ್ಯಾಂಕ್‌ಗೆ ಲಕ್ಷಾಂತರ ಡಾಲರ್‌ ದಂಡ ವಿಧಿಸಿದ್ದು ಹಾಗೂ ನಂತರದಲ್ಲಿ ಬ್ಯಾಂಕ್‌ ಕಾರ್ಯ ಸ್ಥಗಿತಗೊಳಿಸಿದ್ದರ ಬಗ್ಗೆ ಪಾಕಿಸ್ತಾನ ವಿವರಿಸಬಹುದೇ? ‘ ಎಂದು ಪ್ರಶ್ನಿಸಿದರು. 

‘1947ರಲ್ಲಿ ಶೇ 23ರಷ್ಟಿದ್ದ ಅಲ್ಪಸಂಖ್ಯಾತ ಸಮುದಾಯ ಪ್ರಮಾಣವನ್ನು ಇವತ್ತಿಗೆ ಶೇ 3ಕ್ಕೆ ತಂದಿರುವುದು ಪಾಕಿಸ್ತಾನ. ಕ್ರಿಶ್ಚಿಯನ್ನರು, ಸಿಖ್ಖರು, ಅಹ್ಮದೀಯರು, ಹಿಂದೂಗಳು, ಶಿಯಾ, ಸಿಂಧಿ ಹಾಗೂ ಬಲೋಚಿಯನ್ನರನ್ನು ಅತ್ಯಂತ ಹೀನವಾಗಿ ನಡೆಸಿಕೊಳ್ಳುವ ಮೂಲಕ, ಒತ್ತಾಯದ ಮತಾಂತರಕ್ಕೆ ಒಳಪಡಿಸುವುದು ಮತ್ತು ಅತ್ಯಂತ ಕೆಟ್ಟದಾಗಿ ನಿಂದಿಸಲಾಗಿದೆ‘ ಎಂದು ಆರೋಪಿಸಿದರು. 

ಪಾಕಿಸ್ತಾನ ಹಗೆತನದಿಂದ ಕೂಡಿದ ಭಾಷಗಳ ಹೊಳೆ ಹರಿಸುವುದು ಹಾಗೂ ಮತ್ತೊಂದೆಡೆ ಭಯೋತ್ಪಾದನೆಯನ್ನು ಪಸರಿಸುವ ಕಾರ್ಯದಲ್ಲಿದ್ದರೆ, ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಮುಖ್ಯವಾಹಿನಿಯಾಗಿಸುತ್ತಿದೆ ಎಂದರು. 

Post Comments (+)