ಮಂಗಳವಾರ, ಜನವರಿ 21, 2020
28 °C
ದೇಶದ್ರೋಹ ಪ್ರಕರಣ

ನನ್ನ ವಾದ ಆಲಿಸಿಲ್ಲ; ನಾನು ಬಲಿಪಶು: ಗಲ್ಲು ಶಿಕ್ಷೆಗೆ ಒಳಗಾಗಿರುವ ಮುಷರಫ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ‘ನನಗೆ ಗಲ್ಲು ಶಿಕ್ಷೆ ವಿಧಿಸಿರುವುದು ಆಧಾರ ರಹಿತ. ಈ ಪ್ರಕರಣದಲ್ಲಿ ನನ್ನ ವಾದ ಆಲಿಸಿಲ್ಲ. ನನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿದ್ದಾರೆ.

ದೇಶದ್ರೋಹ ಪ್ರಕರಣದಡಿ ಇಲ್ಲಿನ ವಿಶೇಷ ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿರುವುದಕ್ಕೆ ಸಂಬಂಧಿಸಿ, ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ವಿಡಿಯೊ ಕರೆ ಮೂಲಕ ನೀಡಿರುವ ಪ್ರತಿಕ್ರಿಯೆ ಇದು.

‘ದಶಕಗಳ ಅವಧಿಗೆ ನಾನು ನನ್ನ ದೇಶಕ್ಕಾಗಿ ದುಡಿದಿದ್ದೇನೆ. ನನ್ನ ದೇಶಕ್ಕಾಗಿ ಹೋರಾಡಿದ್ದೇನೆ. ಹೀಗಾಗಿ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದೇ ಆಧಾರರಹಿತ’ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿ, ವಿಚಾರಣೆ ಆರಂಭಗೊಂಡ ನಂತರ ಅವರು, ಹಲವಾರು ನ್ಯಾಯಾಧೀಶರನ್ನು ಜೈಲಿಗೆ ಕಳುಹಿಸಿದ್ದರು. 

ಮೇಲ್ಮನವಿ: ಗಲ್ಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಮುಷರಫ್‌ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಇನ್ನೊಂದೆಡೆ, ಮುಷರಫ್‌ ಅವರ ಆಲ್‌ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಸಹ, ಮರಣ ದಂಡನೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದೆ.

‘ಮುಷರಫ್‌ ಅವರ ಹೇಳಿಕೆಯನ್ನು ದಾಖಲಿಸದೇ, ಅವರ ಪರ ವಕೀಲರ ವಾದವನ್ನು ಸರಿಯಾಗಿ ಆಲಿಸದೇ ಇಂತಹ ತೀರ್ಪು ನೀಡಲಾಗಿದೆ. ಇಂತಹ ಏಕಪಕ್ಷೀಯ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗುವುದು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮಹ್ರೀನ್‌ ಮಲಿಕ್‌ ಹೇಳಿದ್ದಾರೆ.

ಆರು ಬಾರಿ ಗೈರು: ತೀರ್ಪು ಪ್ರಕಟಿಸುವುದಕ್ಕೂ ಮುನ್ನ ನಡೆದ ವಾದ–ಪ್ರತಿವಾದ ಸಂದರ್ಭದಲ್ಲಿ ‘ನನ್ನ ಕಕ್ಷಿದಾರಗೆ ಆರೋಗ್ಯ ಸರಿಯಿಲ್ಲದ ಕಾರಣ ಕೋರ್ಟ್‌ಗೆ ಹಾಜರಾಗಲು ಆಗುವುದಿಲ್ಲ’ ಎಂದು ಮುಷರಫ್‌ ಪರ ವಕೀಲರು ಹೇಳಿದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ  ನ್ಯಾಯಮೂರ್ತಿ ಅಕ್ಬರ್‌, ‘ಅವರಿಗೆ ಆರು ಅವಕಾಶಗಳನ್ನು ನೀಡಿದ್ದರೂ, ಅವರು ಬಂದು ತಮ್ಮ ಹೇಳಿಕೆ ದಾಖಲು ಮಾಡಲಿಲ್ಲ’ ಎಂದರು.

30 ದಿನ ಅವಕಾಶ: ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಷರಫ್‌ ಅವರಿಗೆ 30 ದಿನಗಳ ಕಾಲಾವಕಾಶ ಇದೆ. ಅವರ ಅನುಪಸ್ಥಿತಿಯಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್‌ ಅನುಮತಿ ನೀಡದಿದ್ದರೆ, ಅವರು ಪಾಕಿಸ್ತಾನಕ್ಕೆ ಮರಳಬೇಕಾಗುತ್ತದೆ.

ಒಂದು ವೇಳೆ, ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದರೆ, ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಅವಕಾಶ ಇದೆ. ರಾಷ್ಟ್ರಪತಿ ಅವರು ಮುಷರಫ್‌ ಅವರಿಗೆ ಕ್ಷಮಾದಾನ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ದೇಶದ್ರೋಹಕ್ಕೆ ಮರಣ ದಂಡನೆ

ಪಾಕಿಸ್ತಾನದ ಸಂವಿಧಾನ ಪ್ರಕಾರ, ಯಾವುದೇ ವ್ಯಕ್ತಿ ವಿರುದ್ಧ ದೇಶದ್ರೋಹ ಆರೋಪ ಸಾಬೀತಾದಲ್ಲಿ ವ್ಯಕ್ತಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಅಧಿಕಾರ ಬಳಸಿ ಇಲ್ಲವೇ ಸಂವಿಧಾನಬಾಹಿರ ಮಾರ್ಗಗಳ ಮೂಲಕ ಸಂವಿಧಾನವನ್ನು ಬುಡಮೇಲು ಇಲ್ಲವೇ ಅದರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಆ ಕೃತ್ಯವನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ.

ತುರ್ತುಪರಿಸ್ಥಿತಿ ಹೇರಿದ್ದರು

ಸೇನಾಧಿಕಾರಿಯಾಗಿದ್ದ ಮುಷರಫ್‌, 1999ರಲ್ಲಿ ಆಗಿನ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ದಂಗೆ ಎದ್ದು, ಅವರನ್ನು ಅಧಿಕಾರದಿಂದ ಇಳಿಸಿದ್ದರು. ನಂತರ 2001ರಿಂದ 2008ರವರೆಗೆ ಅವರು ಪಾಕ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2007ರಲ್ಲಿ ಸಂವಿಧಾನಬಾಹಿರವಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಈ ಸಂಬಂಧ 2013ರ ಡಿಸೆಂಬರ್‌ನಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗಿತ್ತು.  2014ರ ಮಾರ್ಚ್‌ನಲ್ಲಿ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ 2016ರಲ್ಲಿ ಮುಷರಫ್‌ ದುಬೈ ತೆರಳಿದ್ದಾರೆ. ಅಲ್ಲದೇ, ಆರೋಗ್ಯ ಮತ್ತು ಭದ್ರತೆಯ ಕಾರಣ ನೀಡಿರುವ ಅವರು, ಇನ್ನೂ ವಾಪಸಾಗಿಲ್ಲ.

ಪ್ರಧಾನಿ ಇಮ್ರಾನ್‌ಖಾನ್‌ ಸ್ವಿಟ್ಜರ್‌ಲೆಂಡ್‌ನಲ್ಲಿದ್ದು, ದೇಶಕ್ಕೆ ಮರಳಿದ ನಂತರ ಅವರು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ

- ಫಿರ್ದೌಸ್‌ ಆಶಿಕ್‌ ಅವಾನ್‌, ಪ್ರಧಾನಿಯ ವಿಶೇಷ ಸಹಾಯಕ (ಮಾಹಿತಿ)

ಸೇನಾಧಿಕಾರಿಯಾಗಿ, ಅಧ್ಯಕ್ಷರಾಗಿ ದೇಶ ಸೇವೆ ಮಾಡಿರುವ ಮುಷರಫ್‌ ಎಂದಿಗೂ ದೇಶದ್ರೋಹಿ ಆಗಲಾರರು. ಈ ತೀರ್ಪು ಸೇವೆಗೆ ಅಪಾರ ನೋವು ತಂದಿದೆ.

- ಮೇಜರ್‌ ಜನರಲ್‌ ಆಸೀಫ್‌ ಗಫೂರ್‌, ಸೇನೆಯ ವಕ್ತಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು