ಗುರುವಾರ , ನವೆಂಬರ್ 14, 2019
19 °C

ಫಿಲಿಪ್ಪೀನ್ಸ್‌ ಅಧ್ಯಕ್ಷಗೆ ‘ತಾರಾ’ ವಿಗ್ರಹ ಉಡುಗೊರೆ ನೀಡಿದ ಕೋವಿಂದ್‌

Published:
Updated:
Prajavani

ಮನಿಲಾ: ಫಿಲಿಪ್ಪೀನ್ಸ್‌ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಅವರಿಗೆ ದೇವತೆ ‘ತಾರಾ’ ವಿಗ್ರಹವನ್ನು ಶುಕ್ರವಾರ ಉಡುಗೊರೆಯಾಗಿ ನೀಡಿದರು.

‘ಎರಡೂ ದೇಶಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಸಂಬಂಧದ ಜ್ಞಾಪಕಾರ್ಥ ರಾಷ್ಟ್ರಪತಿ ಕೋವಿಂದ್‌ ಈ ಉಡುಗೊರೆ ನೀಡಿದರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ದೇವತೆ ‘ತಾರಾ’ಗೆ ಮಹತ್ವದ ಸ್ಥಾನವಿದ್ದು, ಶಕ್ತಿ ದೇವತೆ ಎಂದು ಎರಡೂ ಧರ್ಮೀಯರು ನಂಬುತ್ತಾರೆ’ ಎಂದು ರಾಷ್ಟ್ರಪತಿ ಭವನ ಟ್ವೀಟ್‌ ಮಾಡಿದೆ. 

ಭಯೋತ್ಪಾದನೆ ನಿರ್ಮೂಲನೆ,  ರಕ್ಷಣೆ ಮತ್ತು ಸಾಗರ ಭದ್ರತೆಯಲ್ಲಿ ಸಹಭಾಗಿತ್ವ ಕುರಿತು ಉಭಯ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದರು ಎಂದೂ ಟ್ವೀಟ್‌ನಲ್ಲಿ ವಿವರಿಸಲಾಗಿದೆ.

ಯಕೃತ್‌ ಕಸಿಗೊಳಗಾದ ಮಕ್ಕಳ ಪೋಷಕರೊಂದಿಗೆ ಸಂವಾದ
ಭಾರತದಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಿಸಿಕೊಂಡಿರುವ ಫಿಲಿಪ್ಪೀನ್ಸ್‌ನ ಮಕ್ಕಳ ಪೋಷಕರೊಂದಿಗೆ ಅಧ್ಯಕ್ಷ ರಾಮನಾಥ ಕೋವಿಂದ್‌ ಶನಿವಾರ ಸಂವಾದ ನಡೆಸಿದರು.

ಆಗ್ನೇಯ ಏಷ್ಯಾದ ಪ್ರಮುಖ ದೇಶದೊಂದಿಗೆ ಭಾರತದ ಸಂಬಂಧ ಗಟ್ಟಿಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಫಿಲಿಪ್ಪೀನ್ಸ್‌–ಇಂಡಿಯಾ ಯಕೃತ್‌ ಕಸಿ ಕಾರ್ಯಕ್ರಮದ ಅಡಿಯಲ್ಲಿ ಭಾರತದಲ್ಲಿ ಕಳೆದ 28 ತಿಂಗಳಲ್ಲಿ ಫಿಲಿಪ್ಪೀನ್ಸ್‌ನ 35 ಶಿಶುಗಳಿಗೆ ಯಕೃತ್‌ ಕಸಿ ಮಾಡಲಾಗಿದೆ.

‘ಭಾರತ ಮತ್ತು ಫಿಲಿಪ್ಪೀನ್ಸ್‌ ನಡುವೆ ಮಾನವೀಯ ಸಂಬಂಧಗಳು ಗಟ್ಟಿಗೊಂಡಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ಮಕ್ಕಳು ಆರೋಗ್ಯವಂತರಾಗಿ ಬಾಳಲಿ’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)