ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೇ ಶೇ 70ರಷ್ಟು ಉದ್ಯೋಗ: ಹೊಸ ಕೈಗಾರಿಕಾ ನೀತಿ 2020–25ಕ್ಕೆ ಅಸ್ತು

₹5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ l 20 ಲಕ್ಷ ಉದ್ಯೋಗ ಸೃಷ್ಟಿಗೆ ಅವಕಾಶ
Last Updated 23 ಜುಲೈ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸದಾಗಿ ಸ್ಥಾಪನೆಗೊಳ್ಳುವ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 70 ರಿಂದ ಶೇ 100 ರಷ್ಟು ಆದ್ಯತೆ ನೀಡುವ ‘ಹೊಸ ಕೈಗಾರಿಕಾ ನೀತಿ 2020–25’ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಗುರುವಾರ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಸ್ಥಾಪನೆಗೊಳ್ಳುವ ಉದ್ಯಮಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದರು.

ಹೊಸ ಕೈಗಾರಿಕಾ ನೀತಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದೂ ಅವರು ವಿವರಿಸಿದರು.

ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ಶಿವಮೊಗ್ಗ ಸುತ್ತಮುತ್ತಲಿನ ಜಿಲ್ಲೆಗಳನ್ನು ಒಳಗೊಂಡ ಎರಡು ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು. ಎಲ್ಲ ರೀತಿಯ ಉದ್ಯಮಗಳ ಬಂಡವಾಳ ಹೂಡಿಕೆ ಮೇಲೆ ಸರ್ಕಾರ ಸಬ್ಸಿಡಿ ನೀಡುವ ಆಕರ್ಷಕ ಯೋಜನೆಯನ್ನೂ ನೀತಿ ಒಳಗೊಂಡಿದೆ ಎಂದು ಶೆಟ್ಟರ್‌ ಹೇಳಿದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಬಿಟ್ಟು ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಆದ್ಯತೆ ನೀಡಿದ್ದೇವೆ. ವಿಶೇಷವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಮೂರು ವಲಯಗಳನ್ನು ರಚಿಸಲಾಗುವುದು. ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ವಿವಿಧ ರೀತಿಯ ವಿನಾಯ್ತಿಗಳು, ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ನೀಡುವ ಅಧಿಕಾರವನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಉಪಸಮಿತಿಗೆ ನೀಡಲಾಗಿದೆ ಎಂದು ವಿವರಿಸಿದರು.

ವಿಶೇಷ ಹೂಡಿಕೆ ವಲಯ: ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳು ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು. ಇಲ್ಲಿ ಉದ್ಯಮಗಳ ಸ್ಥಾಪನೆ, ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿಯಂತ್ರಣ ಮಾಡಲಾಗುತ್ತದೆ.ಇದಕ್ಕಾಗಿ ಸುಮಾರು 100 ಚದರ ಕಿ.ಮೀ ಒಳಗೊಂಡ ಪ್ರದೇಶವನ್ನು ನೋಟಿಫೈ ಮಾಡಲಾಗುತ್ತದೆ. ‘ಡೀಮ್ಡ್‌ ಕೈಗಾರಿಕಾ ಟೌನ್‌ ಶಿಪ್‌’ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ತಮಿಳುನಾಡು ಮಾದರಿಯಲ್ಲಿ ಖಾಸಗಿಯವರೂ ‘ಕೈಗಾರಿಕಾ ಪಾರ್ಕ್‌’ ಸ್ಥಾಪಿಸಲೂ ಅವಕಾಶ ನೀಡಲಾಗುವುದು. ಉದ್ಯಮಗಳಿಗೆ ಪೂರಕವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಭೂಮಿ ಖರೀದಿಗೂ ಅವಕಾಶ ನೀಡಲಾಗಿದೆ. ಇದರಿಂದ ಭೂಮಿ ಖರೀದಿ ಮಾಡಿ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ ಎಂದು ಶೆಟ್ಟರ್‌ ತಿಳಿಸಿದರು.

ನೀತಿಯಿಂದ ಆಗುವ ಬದಲಾವಣೆಗಳು

l ರಫ್ತಿನಲ್ಲಿ ಕರ್ನಾಟಕ ಈಗ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಅದನ್ನು ಮೂರನೇ ಸ್ಥಾನಕ್ಕೆ ಒಯ್ಯುವ ಗುರಿ ಹೊಂದಲಾಗಿದೆ

l ಕೈಗಾರಿಕಾ ವಾರ್ಷಿಕ ಬೆಳವಣಿಗೆ ದರ ಶೇ 10 ಇದ್ದು, ಅದನ್ನು ಕಾಪಾಡಿಕೊಂಡು ಹೋಗುವುದು.ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು

ಯಾವ ಉದ್ಯಮಗಳಿಗೆ ಆದ್ಯತೆ

l ಆಟೊಮೊಬೈಲ್‌, ವಾಹನಗಳ ಬಿಡಿಭಾಗಗಳು, ಮೆಷಿನ್‌ ಡಿಸೈನಿಂಗ್‌, ಫಾರ್ಮಾಸ್ಯುಟಿಕಲ್ಸ್‌, ವೈದ್ಯಕೀಯ ಉಪಕರಣಗಳು, ಎಂಜಿನಿಯರಿಂಗ್‌, ಜ್ಞಾನಾಧಾರಿತ ಉದ್ಯಮ, ರಕ್ಷಣಾ ಉತ್ಪನ್ನಗಳು, ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉದ್ಯಮಗಳ ಸ್ಥಾಪನೆಗೆ ಆದ್ಯತೆ

l ಉದ್ಯಮ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಹಕ್ಕು ಪಡೆಯುವುದಕ್ಕೂ ಪ್ರಾಮುಖ್ಯ

ಯಾರಿಗೆ ಎಷ್ಟು ಸಬ್ಸಿಡಿ:

l ದೇಶದಲ್ಲೇ ಮೊದಲ ಬಾರಿಗೆ ಹೂಡಿಕೆ ಉತ್ತೇಜನ ಸಬ್ಸಿಡಿ ನೀಡಲಾಗುವುದು. ಮಧ್ಯಮ, ದೊಡ್ಡ ಮತ್ತು ಬೃಹತ್‌ ಉದ್ಯಮಗಳಿಗೆ ಅವುಗಳ ವಹಿವಾಟು ಆಧರಿಸಿ ಶೇ 1.75 ರಿಂದ ಶೇ 2.5 ರಷ್ಟು ಸಬ್ಸಿಡಿಯನ್ನು 5 ರಿಂದ 10 ವರ್ಷಗಳವರೆಗೆ ನೀಡಲಾಗುವುದು

l ಸಬ್ಸಿಡಿಯನ್ನು ಅನುದಾನದ ರೂಪದಲ್ಲಿ ಕಂಪನಿಯ ವಹಿವಾಟು ದಾಖಲೆ ಆಧರಿಸಿ ನೀಡಲಾಗುತ್ತದೆ. ಕಂಪನಿಯ ನಿಶ್ಚಿತ ಸ್ವತ್ತು ಮೌಲ್ಯದ (ವ್ಯಾಲ್ಯು ಆಫ್‌ ಫಿಕ್ಸೆಡ್‌ ಅಸೆಟ್ಸ್‌) ಶೇ 35 ರಿಂದ 60ಕ್ಕೆ ಮಿತಿಗೊಳಿಸಿ ಸಬ್ಸಿಡಿ ನೀಡಲಾಗುವುದು

l ಮಧ್ಯಮ, ಸಣ್ಣ ಮತ್ತು ಕಿರು ಉದ್ಯಮಗಳಿಗೂ ವಾರ್ಷಿಕ ವಹಿವಾಟು ಆಧರಿಸಿ ಶೇ 10 ರಷ್ಟು ಹೂಡಿಕೆ ಪ್ರೋತ್ಸಾಹ ಸಬ್ಸಿಡಿ. ಇವರಿಗೆ ಐದು ವರ್ಷಗಳವರೆಗೆ ಅವರ ನಿಶ್ಚಿತ ಸ್ವತ್ತಿನ ಮೌಲ್ಯದ ಶೇ 20 ರಿಂದ 30 ಕ್ಕೆ ಮಿತಿಗೊಳಿಸಿ ಸಬ್ಸಿಡಿ ನಿಗದಿಗೊಳಿಸಲಾಗುವುದು

ಕಾರ್ಮಿಕ ಕಾಯ್ದೆ ತಿದ್ದುಪಡಿ

ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸಚಿವ ಸಂಪುಟ ಸಭೆ, ಕೈಗಾರಿಕಾ ವ್ಯಾಜ್ಯ ಮತ್ತು ಇತರ ಕಾಯ್ದೆ (ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ.

ಕೈಗಾರಿಕಾ ವ್ಯಾಜ್ಯ ಕಾಯ್ದೆಯ ಸೆಕ್ಷನ್‌ 25(ಕೆ) ಅಡಿ ಕಾರ್ಮಿಕರ ಮಿತಿಯನ್ನು 100 ರಿಂದ 300 ಕ್ಕೆ ಹೆಚ್ಚಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಯಾವುದೇ ಉದ್ಯಮ 100 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿದ್ದರೆ ಕೈಗಾರಿಕೆ ಮುಚ್ಚಲು, ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಅದನ್ನು 300ಕ್ಕೆ ಏರಿಕೆ ಮಾಡಿದೆ.

ಗುತ್ತಿಗೆ ಮತ್ತು ಫ್ಯಾಕ್ಟರಿ ಕಾಯ್ದೆ ಅಡಿ ಕಾರ್ಮಿಕರನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ. ಯಾವುದೇ ಉದ್ಯಮದಲ್ಲಿ ಕನಿಷ್ಠ 20 ಅಥವಾ ಅದಕ್ಕಿಂತ ಹೆಚ್ಚು ಗುತ್ತಿಗೆ ಕಾರ್ಮಿಕರಿದ್ದರೆ ಕಾಯ್ದೆಯ ಪ್ರಕಾರ ಉದ್ಯಮ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತಿತ್ತು. ಈಗ ಗುತ್ತಿಗೆ ಕಾರ್ಮಿಕರ ಕನಿಷ್ಠ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗಿದೆ. 50ರವರೆಗೆ ಗುತ್ತಿಗೆ ಕಾರ್ಮಿಕರು ಇದ್ದರೆ ಕಾರ್ಮಿಕ ಕಾಯ್ದೆಯ ನಿಯಮ ಅಂತಹ ಉದ್ಯಮಕ್ಕೆ ಅನ್ವಯವಾಗುವುದಿಲ್ಲ.

ವಿದ್ಯುತ್‌ ಬಳಸಿ ನಡೆಸುವ ಸಣ್ಣ ಘಟಕಗಳಲ್ಲಿ ಕಾರ್ಮಿಕರ ಮಿತಿ 10–20 ರಿಂದ 20–40 ಕ್ಕೆ ಹೆಚ್ಚಿಸಲು ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಫ್ಯಾಕ್ಟರಿ ಕಾಯ್ದೆ 65(3)(4) ಸೆಕ್ಷನ್‌ಗೆ ತಿದ್ದುಪಡಿ ಮಾಡಿ, ಓವರ್ ಟೈಮ್ ‌(ಓ.ಟಿ) ಕೆಲಸದ ಅವಧಿಯನ್ನು ಮೂರು ತಿಂಗಳಿಗೆ 75 ಗಂಟೆಗಳಿಂದ 125 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಇದು ಅಗತ್ಯವಿತ್ತು ಎಂದು ಮಾಧುಸ್ವಾಮಿ ತಿಳಿಸಿದರು.

***

ಚೀನಾ ತೊರೆಯುವ ಕಂಪನಿಗಳನ್ನು ರಾಜ್ಯಕ್ಕೆ ತರಲು ಸರ್ಕಾರ ಕಾರ್ಯತಂತ್ರ ಹೆಣೆದಿದೆ. ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದೆ

- ಜಗದೀಶ ಶೆಟ್ಟರ್, ಕೈಗಾರಿಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT