ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್

Last Updated 6 ಡಿಸೆಂಬರ್ 2019, 8:15 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣದ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಸುಟ್ಟು ಹತ್ಯೆಮಾಡಿದಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯೆಯನ್ನು ಹತ್ಯೆ ಮಾಡಿದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗುತ್ತಿದ್ದವೇಳೆ ಆರೋಪಿಗಳಾದಮೊಹಮ್ಮದ್ ಅಲಿ ಅಲಿಯಾಸ್ ಮೊಹಮ್ಮದ್ ಆರಿಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಕುಮಾರ್ ಮತ್ತು ಚಿನಟಕುಂಟ ಚೆನ್ನ ಕೇಶವುಲುಪರಾರಿಯಾಗಲು ಯತ್ನಿಸಿದಾಗ ಈ ಎನ್‌ಕೌಂಟರ್ ನಡೆದಿದೆ.

ರಂಗರೆಡ್ಡಿ ಜಿಲ್ಲೆಯ ಶಾದ್‌ನಗರದಲ್ಲಿರುವ ಚಟನ್‌ಪಲ್ಲಿ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನವೆಂಬರ್ 28ರಂದು ವೈದ್ಯೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನಾಲ್ವರು ದುಷ್ಕರ್ಮಿಗಳು ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ನಡೆಸಿದ್ದರು. ಈ ಆರೋಪಿಗಳನ್ನು ಹೈದರಾಬಾದ್‌ನ ಚೆರ್ಲಪಲ್ಲಿ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು.

ಶುಕ್ರವಾರ ಮುಂಜಾನೆ 3.30ಕ್ಕೆ ಸೈಬರಾಬಾದ್ ಪೊಲೀಸರು ಈ ಎನ್‌ಕೌಂಟರ್ ನಡೆಸಿದ್ದಾರೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 44) ರ ಬಳಿ ಈ ಎನ್‌ಕೌಂಟರ್ ನಡೆದಿದೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಪಶುವೈದ್ಯೆಯನ್ನು ದುಷ್ಕರ್ಮಿಗಳು ಸುಟ್ಟುಕೊಂದ ಅದೇ ಜಾಗದಲ್ಲಿ ಎನ್‌ಕೌಂಟರ್ ನಡೆದಿದೆ.

ಶಮ್ಶಾಬಾದ್‌ನಲ್ಲಿ ಪಶುವೈದ್ಯೆಯನ್ನು ಅತ್ಯಾಚಾರವೆಸಗಿದ ನಂತರ ಯಾವ ರೀತಿ ಹತ್ಯೆ ಮಾಡಿದಿರಿ ಎಂದು ಆರೋಪಿಗಳಲ್ಲಿ ಪೊಲೀಸರು ಕೇಳಿದ್ದಾರೆ. ಆಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಓಡಲು ಯತ್ನಿಸಿದ್ದಾರೆ. ಶರಣಾಗುವಂತೆ ನಾವು ಹೇಳಿದರೂ ಅವರು ಕೇಳಲಿಲ್ಲ.ಕೊನೆಗೆ ನಾವು ಗುಂಡು ಹಾರಿಸಿದೆವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆವರದಿ ಮಾಡಿದೆ.

ಪಶು ವೈದ್ಯೆಯ ಅತ್ಯಾಚಾರ ಪ್ರಕರಣ ನಡೆದು 36 ಗಂಟೆಗಳೊಳಗೆ ಸೈಬೆರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ನವೆಂಬರ್ 30ರಂದು ಶಾದ್‌ನಗರ್ ನ್ಯಾಯಾಲಯಕ್ಕೆ ಇವರನ್ನು ಹಾಜರು ಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬುಧವಾರ ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಒಂದು ವಾರ ಪೊಲೀಸ್ ವಶದಲ್ಲಿರಿಸುವಂತೆ ಕೋರ್ಟ್ ಆದೇಶಿಸಿತ್ತು.ಗುರುವಾರ ಇವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸ್ ಅಂದಿನಿಂದ ಇವರನ್ನು ವಿಚಾರಣೆಗೊಳಪಡಿಸಿದ್ದರು.

ಪ್ರಕರಣದ ತನಿಖೆಗಾಗಿ ತೆಲಂಗಾಣ ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪಿಸಿತ್ತು. ಸೈಬರಾಬಾದ್ ಪೊಲೀಸರು 7 ವಿಶೇಷ ತಂಡಗಳನ್ನು ರಚಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT