ಗುರುವಾರ , ಜುಲೈ 29, 2021
26 °C

ಚೆನ್ನೈನ 200 ಮಂದಿ ಸಾವು ಕೋವಿಡ್–19 ಪಟ್ಟಿಯಿಂದ ಕಾಣೆ: ಆಡಿಟ್‌ಗೆ ಸರ್ಕಾರ ಆದೇಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಪರೀಕ್ಷೆಗಾಗಿ ಚೆನ್ನೈನಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿರುವ ಆರೋಗ್ಯ ಸಿಬ್ಬಂದಿ–ಸಂಗ್ರಹ ಚಿತ್ರ

ಚೆನ್ನೈ: ಕನಿಷ್ಠ 200 ಜನರು ಕೊರೊನಾ ವೈರಸ್‌ ಸೋಂಕಿನಿಂದ ಚೆನ್ನೈನಲ್ಲಿ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಮಾಹಿತಿ ಸರ್ಕಾರದ ಕೋವಿಡ್‌–19 ಪಟ್ಟಿಗೆ ಸರ್ಪಡೆಯಾಗಿರದ ಕಾರಣ, ತಮಿಳುನಾಡು ಸರ್ಕಾರ ಕೊರೊನಾ ವೈರಸ್‌ ಸಾವಿನ ಲೆಕ್ಕಪರಿಶೋಧನೆಗೆ ಆದೇಶಿಸಿದೆ.

ಚೆನ್ನೈ ನಗರ ಪ್ರದೇಶದಲ್ಲಿ 260 ಮಂದಿ ಸೇರಿದಂತೆ ಬುಧವಾರದ ವರೆಗೂ ತಮಿಳುನಾಡಿನಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 326 ಮಂದಿ ಸಾವಿಗೀಡಾಗಿರುವುದಾಗಿ ತಮಿಳುನಾಡು ಸರ್ಕಾರ ವರದಿ ಮಾಡಿದೆ. ನಗರ ಪಾಲಿಕೆಯ ದಾಖಲೆಗಳ ಆಧಾರದ ಮೇಲೆ ಪ್ರಾಥಮಿಕ ಪರಿಶೀಲನೆಯಲ್ಲಿ ಕೋವಿಡ್‌–19 ಸಾವು ಪ್ರಕರಣಗಳ ಹೆಚ್ಚುವರಿ ಲೆಕ್ಕ ದೊರೆತಿದೆ.

ಚೆನ್ನೈ ಕಾರ್ಪೊರೇಷನ್‌ನಲ್ಲಿ ದಾಖಲಾಗುವ ಸಾವಿನ ಸಂಖ್ಯೆಯ ವರದಿಯನ್ನು ನಿತ್ಯ ಸರ್ಕಾರಕ್ಕೆ ತಲುಪಿಸುವ ವ್ಯವಸ್ಥೆ ಇಲ್ಲ. ಅದರಿಂದಾಗಿಯೇ ಪ್ರಕ್ರಿಯೆಯಲ್ಲಿ ದೋಷ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ  ಮಾಡಿದೆ.

ಸಾವಿನ ಸಂಖ್ಯೆ ಕಡಿಮೆ ತೋರಿಸುವ ನಿಟ್ಟಿನಲ್ಲಿ ಸರ್ಕಾರ ಸುಳ್ಳು ಲೆಕ್ಕ ನೀಡಿರುವ ಆರೋಪಗಳನ್ನು ತಳ್ಳಿ ಹಾಕಿರುವ ರಾಜ್ಯದ ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್‌, 'ಒಂಬತ್ತು ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯು ಕೋವಿಡ್–19 ಸಾವುಗಳಿಗೆ ಸಂಬಂಧಿಸಿದ ಮಾಹಿತಿ ಒಟ್ಟುಗೂಡಿಸುವ ಕಾರ್ಯ ಪರಿಶೀಲಿಸುತ್ತಿದೆ. ಅಂತಹ ಎಲ್ಲ ಪ್ರಕರಣಗಳ ಬಗ್ಗೆ ಸಮಿತಿ ಗಮನಿಸುತ್ತದೆ 'ಎಂದು ಹೇಳಿದ್ದಾರೆ.

ಸಾವಿನ ಕುರಿತ ಮಾಹಿತಿಯನ್ನು ಮರೆಮಾಚುವ ಅಗತ್ಯ ನಮಗಿಲ್ಲ, ಹಾಗೆ ಮಾಡುವುದೂ ಇಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ದೊರೆಯುತ್ತಿರುವ ಮಾಹಿತಿ ಆಧರಿಸಿ ಕೋವಿಡ್–19 ಸಾವಿನ ಪ್ರಕರಣಗಳನ್ನು ನಿಖರವಾಗಿ ವರದಿ ಮಾಡಲಾಗುತ್ತಿದೆ. ಹಲವು ಸಾವಿನ ಪ್ರಕರಣಗಳು ವರದಿಯಾಗದೆಯೇ ಉಳಿದಿರುವ ಕುರಿತು ಇತ್ತೀಚಿನ ವರದಿಗಳ ಬಗ್ಗೆ ಸಮಿತಿ ಗಮನಕ್ಕೆ ತರಲಾಗಿದ್ದು, ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದಿದ್ದಾರೆ.

ಎಲ್ಲ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಿಂದ ಕೋವಿಡ್‌–19 ಸಾವುಗಳ ಮಾಹಿತಿ ಸಂಗಹಿಸುವ ವ್ಯವಸ್ಥೆ ಇದ್ದರೂ, ಕೊರೊನಾ ಸೋಂಕು ವ್ಯಾಪಿಸುವ ಮುಂಚೆ ನಿತ್ಯವೂ ಸಾವಿನ ಸಂಖ್ಯೆಯನ್ನು ವರದಿ ಮಾಡುವ ಅಭ್ಯಾಸ  ವ್ಯವಸ್ಥೆಯಲ್ಲಿ ಇರಲಿಲ್ಲ. ವರದಿಯಾಗಿರದ ಸಾವುಗಳು ಮನೆಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿರಬಹುದು ಎಂದು ಶಂಕಿಸಿರುವುದಾಗಿ ಹೇಳಿದ್ದಾರೆ.

1,000 ಕಂಟೈನ್‌ಮೆಂಟ್‌ ವಲಯಗಳು, ಲಾಕ್‌ಡೌನ್‌ ನಿರ್ವಹಣೆ ಸಿಬ್ಬಂದಿಯ ಮೇಲೆ ಹೆಚ್ಚುವರಿ ಹೊರೆಯಾಗಿದೆ. ನಗರದಲ್ಲಿ ಸಂಭವಿಸುವ ಸಾವು ಹಾಗೂ ಹುಟ್ಟಿನ ಲೆಕ್ಕ ನಿಯಮಿತವಾಗಿ ಪರಿಷ್ಕರಿಸಲು ಸಿಬ್ಬಂದಿಯ ಕೊರತೆ ಇರುವುದಾಗಿ ಕಾರ್ಪೊರೇಷನ್‌ನ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆ ಮಾಹಿತಿ ಒಟ್ಟು ಗೂಡಿಸುವುದರಲ್ಲಿ ತಡವಾಗಿದೆ. ಇದೇ ಲೆಕ್ಕದಲ್ಲಿನ ಹೊಂದಾಣಿಕೆ ತಪ್ಪಲು ಕಾರಣವಾಗಿರಬಹುದು ಎಂದಿದ್ದಾರೆ.

'ಈಗಿನಿಂದ ಚೆನ್ನೆ ಕಾರ್ಪೊರೇಷನ್‌ ಎಲ್ಲ ಕೋವಿಡ್‌–19 ಸಾವುಗಳ ಮಾಹಿತಿ ದಿನದ ಆಧಾರದಲ್ಲಿ ತಲುಪಿಸಬೇಕು' ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಪಿ.ವಡಿವೇಲನ್‌ ಹೇಳಿದ್ದಾರೆ.

ಚೆನ್ನೈ ನಗರದ ಪೆರಂಬೂರ್‌ನ ದಕ್ಷಿಣ ರೈಲ್ವೆ ಆಸ್ಪತ್ರೆಯಲ್ಲಿ 20 ಮಂದಿ ಸಾವಿಗೀಡಾಗಿರುವ ಮಾಹಿತಿ ಸರ್ಕಾರದ ಅಧಿಕೃತ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇಂಥ ಹಲವು ಪ್ರಕರಣಗಳು ವರದಿಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು