ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ಆರಂಭದಿಂದಲೇ ಕ್ಯಾತೆ ತೆಗೆದಿದ್ದ ಚೀನಾ: ಎಲ್ಲ ಘಟನಾವಳಿ ಬಿಚ್ಚಿಟ್ಟ ಭಾರತ

Last Updated 25 ಜೂನ್ 2020, 16:09 IST
ಅಕ್ಷರ ಗಾತ್ರ

ನವದೆಹಲಿ: ‘ಮೇ ಆರಂಭದಿಂದಲೂ ಚೀನಾ ವಾಸ್ತ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹೆಚ್ಚಿನ ಸಂಖ್ಯೆಯ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಾ ಬಂದಿತ್ತು. ಚೀನಾ ಪಡೆಗಳ ನಡವಳಿಕೆಯು ಎರಡೂ ದೇಶಗಳು ಪರಸ್ಪರ ಒಪ್ಪಿರುವ ಎಲ್ಲ ಒಪ್ಪಂದಗಳನ್ನು, ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ,’ ಎಂದು ಭಾರತ ಗುರುವಾರ ಹೇಳಿದೆ. ಅಲ್ಲದೆ, ‘ಪೂರ್ವ ಲಡಾಕ್‌ನಲ್ಲಿ ಸಂಭವಿಸಿದ ಘರ್ಷಣೆಗೆ ಚೀನಾ ಹೊಣೆ,’ ಎಂದು ಸ್ಪಷ್ಟವಾಗಿ ಹೇಳಿದೆ.

ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಗುರುವಾ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಪೂರ್ವ ಲಡಾಖ್ ಪ್ರದೇಶದ ಎಲ್‌ಎಸಿಯ ಉದ್ದಕ್ಕೂ ನಡೆದ ಘಟನೆಗಳನ್ನು ಒಂದೊಂದಾಗಿ ವಿವರಿಸಿದರು. ಅಲ್ಲದೆ, ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಚೀನಾವನ್ನು ಹೊಣೆಗಾರರನ್ನಾಗಿ ಮಾಡಿದರು.

‘ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ "ಸಾಮಾನ್ಯ, ಸಾಂಪ್ರದಾಯಿಕ" ಗಸ್ತು ಮಾದರಿಯನ್ನು ತಡೆಯಲು ಚೀನಾ ಮೇ ಆರಂಭದಲ್ಲೇ ಪ್ರಯತ್ನಿಸಿದೆ. ಅದರ ಜೊತೆಗೆ ಮೇ ಮಧ್ಯಭಾಗದಲ್ಲಿ ಲಡಾಕ್‌ನ ಪಶ್ಚಿಮ ವಲಯದ ಇತರ ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಆ ದೇಶದ ಸೇನಾ ಪಡೆಗಳು ಕಾರ್ಯಾಚರಣೆಗೆಗಳನ್ನು ನಡೆಸಿವೆ. ಚೀನಾದ ಈ ಕ್ರಮಗಳ ಕುರಿತು ನಾವು ನಮ್ಮ ಪ್ರತಿಭಟನೆಯನ್ನು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ದಾಖಲಿಸಿದ್ದೇವು. ಅಲ್ಲದೇ, ಗಡಿಯಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳು ನಮಗೆ ಒಪ್ಪಿತವಲ್ಲ ಎಂದೂ ಸ್ಪಷ್ಟಪಡಿಸಿದ್ದೆವು,’ ಎಂದು ಶ್ರೀವಾಸ್ತವ ತಿಳಿಸಿದ್ದಾರೆ‌‌.

‘ಈ ಹಿನ್ನೆಲೆಯಲ್ಲಿ ಜೂನ್‌ 6ರಂದು ಎರಡೂ ಕಡೆಯ ಸೇನೆಯ ಹಿರಿಯ ಕಮಾಂಡರ್‌ಗಳು ಭೇಟಿಯಾದರು. ಗಡಿಯಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಶಾಂತಿ ಸ್ಥಾಪಿಸುವ ಕುರಿತು ಮಾತುಕತೆಗಳು ನಡೆದವು. ಈ ಪ್ರಕ್ರಿಯೆಯು ಪರಸ್ಪರ ಪೂರಕವಾಗಿ ನಡೆಯಬೇಕು ಎಂದು ಒಪ್ಪಿಗೆಯಾಗಿತ್ತು. ಎಲ್‌ಎಸಿಯನ್ನು ಗೌರವಿಸುವುದು, ಅದಕ್ಕೆ ಬದ್ಧವಾಗಿರುವುದು, ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದೇ ಇರುವುದು ಸಭೆಯ ಒಪ್ಪಂದವಾಗಿತ್ತು. ಎರಡೂ ಕಡೆಯವರೂ ಇದನ್ನು ಒಪ್ಪಿದ್ದೆವು. ಅದರೆ. ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಆದ ಈ ಒಪ್ಪಂದದಿಂದ ಜಾರಿಕೊಂಡ ಚೀನಾ ಗಡಿಯಲ್ಲಿ ಸೇನಾ ರಚನೆಗಳಲ್ಲಿ ತೊಡಗಿತು. ಈ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದಾಗ ಜೂನ್ 15 ರಂದು ಚೀನಾದ ಸೈನ್ಯವು ಹಿಂಸಾತ್ಮಕ ನಡೆ ಅನುಸರಿಸಿತು. ಹೀಗಾಗಿ ಸಾವು ನೋವುಗಳು ಸಂಭವಿಸಿದವು. ನಂತರ, ಎರಡೂ ಕಡೆಗಳಿಂದಲೂ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ನಿಯೋಜನೆಗಳಾಗಿವೆ. ಈ ಮಧ್ಯೆ ಸಮಸ್ಯೆ ಪರಿಹಾರಕ್ಕೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ,’ ಎಂದು ಅವರು ತಿಳಿಸಿದ್ದಾರೆ.

‘ಮೇ ಆರಂಭದಿಂದಲೂ ಚೀನಾ ಎಲ್‌ಎಸಿ ಉದ್ದಕ್ಕೂ ಹೆಚ್ಚಿನ ಸಂಖ್ಯೆಯ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಾ ಬಂದಿತ್ತು. ಚೀನಾದ ಈ ನಡೆ ದ್ವಿಪಕ್ಷೀಯ ಒಪ್ಪಂದಗಳ ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಅದರಲ್ಲೂ, ವಿಶೇಷವಾಗಿ ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಸೃಷ್ಟಿಸುವ 1993 ರ ಪ್ರಮುಖ ಒಪ್ಪಂದಕ್ಕೆ ವಿರುದ್ಧವಾಗಿತ್ತು,’ ಎಂದು ಶ್ರೀವಾಸ್ತವ ಪ್ರತಿಪಾದಿಸಿದ್ದಾರೆ‌.

"ಈ ಎಲ್ಲ ಬೆಳವಣಿಗೆಗಳಿಂದಾಗಿ, ಚೀನಾದ ನಿಯೋಜನೆಗೆ ಪ್ರತಿಯಾಗಿ ಭಾರತವೂ ಸೇನಾ ನಿಯೋಜನೆ ಮಾಡಲೇಬೇಕಾಯಿತು. ಅದರ ಪರಿಣಾಮವಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ವ್ಯಕ್ತವಾಗುತ್ತಿದೆ,’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT