ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ | ಮೂಗು ತೂರಿಸಿದ ಚೀನಾ: ಕೈತೊಳೆದುಕೊಂಡ ಅಮೆರಿಕ, ರಷ್ಯಾ

Last Updated 17 ಆಗಸ್ಟ್ 2019, 4:50 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಚೀನಾದ ಒತ್ತಾಸೆಯ ಮೇರೆಗೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಗೌಪ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆಯೇನೋ ನಡೆಯಿತು. ಆದರೆ ಸಭೆಯ ನಡಾವಳಿಗಳು ಅಥವಾ ಅದರ ಪರಿಣಾಮಗಳನ್ನು ಸೂಚಿಸುವಯಾವುದೇ ಅಧಿಕೃತ ಹೇಳಿಕೆಗಳು ಪ್ರಕಟವಾಗಲಿಲ್ಲ. ಆದರೆ, ಕಾಶ್ಮೀರವನ್ನು ನೆಪವಾಗಿಸಿಕೊಂಡು ಭಾರತವನ್ನು ಮಣಿಸಲು ಚೀನಾ ಯತ್ನಿಸುತ್ತಿರುವುದು ಬಹಿರಂಗವಾಗಿದೆ.

ಸಭೆ ಆರಂಭಕ್ಕೂ ಮುನ್ನಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕರೆ ಮಾಡಿದ್ದರು. ಈ ಸಂದರ್ಭ ಟ್ರಂಪ್, ‘ಭಾರತ ಮತ್ತು ಪಾಕಿಸ್ತಾನಗಳು ಜಮ್ಮು ಕಾಶ್ಮೀರದ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ಉದ್ವಿಗ್ನ ಸ್ಥಿತಿ ಶಮನಗೊಳಿಸಬೇಕು’ ಎಂದು ಸಲಹೆ ಮಾಡಿದರು ಎನ್ನಲಾಗಿದೆ.

ಕಾಶ್ಮೀರ ಕುರಿತು ಹೆಚ್ಚಿನ ಮಾಹಿತಿಗೆwww.prajavani.net/tags/jammu-and-kashmir

ಭದ್ರತಾ ಮಂಡಳಿ ಸಭೆಯ ನಂತರ ಚೀನಾ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರ ಪ್ರತಿಕ್ರಿಯಿಸಲಿಲ್ಲ.

‘ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಕಾಳಜಿಯಿದೆ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವುಉದ್ವಿಗ್ನ ಸ್ಥಿತಿ ಹೆಚ್ಚಾಗಲು ಕಾರಣವಾಗಬಹುದು’ ಎಂದುವಿಶ್ವಸಂಸ್ಥೆಯ ಚೀನಾ ಪ್ರತಿನಿಧಿ ಝಾಂಗ್‌ ಜುನ್ ಹೇಳಿದರು.

ಚೀನಾ ಪ್ರತಿನಿಧಿಯ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿತು. ‘ಝಾಂಗ್‌ ಉನ್ ಅವರು ತಮ್ಮ ಸ್ವಂತ ಹೇಳಿಕೆಯನ್ನು ಜಾಗತಿಕ ಸಮುದಾಯದ ಅಭಿಪ್ರಾಯ’ ಎನ್ನುತ್ತಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಖಂಡಿಸಿದರು.

‘ಭದ್ರತಾ ಮಂಡಳಿ ಸಭೆಯ ನಂತರ ಎರಡು ದೇಶಗಳು (ಚೀನಾ ಮತ್ತು ಪಾಕಿಸ್ತಾನ) ತಮ್ಮ ರಾಷ್ಟ್ರೀಯ ಹೇಳಿಕೆಗಳನ್ನು ಜಾಗತಿಕ ಸಮುದಾಯದ ಅಭಿಪ್ರಾಯ ಎಂದು ಬಿಂಬಿಸಲು ಯತ್ನಿಸುತ್ತಿವೆ’ ಎಂದು ಅಕ್ಬರುದ್ದೀನ್ ಹೇಳಿದರು.

ನೀವಿಬ್ಬರೂ ಮಾತನಾಡಿ: ಅಮೆರಿಕ

ಪಾಕ್ ಪ್ರಧಾನಿ ತಮ್ಮ ದೇಶದ ಅಧ್ಯಕ್ಷರಿಗೆ ಕರೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿರುವ ಶ್ವೇತ ಭವನ, ‘ಜಮ್ಮು ಕಾಶ್ಮೀರದ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ದ್ವಿಪಕ್ಷೀಯ ಮಾತುಕತೆ ಅಗತ್ಯ’ ಎಂದು ಡೊನಾಲ್ಡ್‌ ಟ್ರಂಪ್ ತಮ್ಮ ನಿಲುವು ಸ್ಪಷ್ಟಪಡಿಸಿದರು ಎಂದು ಹೇಳಿದೆ.

ದ್ವಿಪಕ್ಷೀಯ ವಿಚಾರ: ರಷ್ಯಾ

‘ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರ. ಕಾಶ್ಮೀರದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಭದ್ರತಾ ಮಂಡಳಿಯ ಸಭೆ ಕರೆಯಲಾಗಿದೆ’ ಎಂದು ಸಭೆಗೆ ತೆರಳುವ ಮುನ್ನ ವಿಶ್ವಸಂಸ್ಥೆಯ ರಷ್ಯಾ ಪ್ರತಿನಿಧಿ ದಿಮಿತ್ರಿ ಪಾಲ್ಯಾನ್‌ಸ್ಕಿವ್ ಪ್ರತಿಕ್ರಿಯಿಸಿದರು.

ಮುಕ್ತ ಕಾಶ್ಮೀರಕ್ಕೆ ಬದ್ಧ: ಭಾರತ

ಭದ್ರತಾ ಮಂಡಳಿ ಸಭೆ ನಡೆಯುತ್ತಿದ್ದ ಸ್ಥಳದ ಸಮೀಪ ಪಾಕಿಸ್ತಾನದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ‘ಕಾಶ್ಮೀರದ ಮೇಲೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಕ್ರಮೇಣ ತೆಗೆದು ಹಾಕಲಾಗುವುದು. ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಭಾರತ ಬದ್ಧವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಸಹಿ ಹಾಕಿರುವ ಎಲ್ಲ ಒಪ್ಪಂದಗಳ ಷರತ್ತುಗಳನ್ನು ಪಾಲಿಸುತ್ತೇವೆ. ಕಾಶ್ಮೀರದಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎಂದು ಕೆಲವರು ಕೂಗೆಬ್ಬಿಸುತ್ತಿದ್ದಾರೆ. ವಾಸ್ತವವಾಗಿ ಅಂಥದ್ದೇನು ಆಗಿಲ್ಲ’ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆಈವರೆಗೆ ಇದ್ದ ವಿಶೇಷ ಪ್ರಾತಿನಿಧ್ಯ ಹಿಂಪಡೆದ ಕುರಿತು ಕೇಳಿದ ಪ್ರಶ್ನೆಗೆ, ‘ಅದು ಭಾರತದ ಆಂತರಿಕ ವಿಚಾರ. ಬೇರೆ ದೇಶಗಳು ಮೂಗು ತೂರಿಸುವ ಅಗತ್ಯವಿಲ್ಲ. ಪಾಕ್ ಜೊತೆಗೆ ಮಾತುಕತೆಗೆ ಭಾರತ ಸಿದ್ಧವಿದೆ. ಆದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು. ಒಂದು ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಭಯೋತ್ಪಾದೆಯನ್ನು ಒಂದು ಅಸ್ತ್ರವಾಗಿ ಬಳಸುವುದನ್ನು ಭಾರತ ಒಪ್ಪುವುದಿಲ್ಲ’ ಎಂದು ನಿಲುವು ಸ್ಪಷ್ಟಪಡಿಸಿದರು.

ಭಾರತಕ್ಕೆಚೀನಾ ಧಮಕಿ

ಚೀನಾದ ಒತ್ತಾಸೆ ಮತ್ತು ಪ್ರಯತ್ನದಿಂದಲೇ ಕಾಶ್ಮೀರದ ಕುರಿತು ಅನೌಪಚಾರಿಕ ಸಮಾಲೋಚನೆಗೆಭದ್ರತಾ ಮಂಡಳಿ ಸಮ್ಮತಿಸಿತು. ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಈ ತಿಂಗಳು ಪೊಲೆಂಡ್‌ ಬಳಿ ಇದೆ. ಆ ದೇಶವನ್ನು ಸಂಪರ್ಕಿಸಿದ ಚೀನಾ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂಪಡೆದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದಭಾರತದ ಕ್ರಮದ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು ಎಂದು ಕೋರಿತ್ತು.

‘ಅಂತರರಾಷ್ಟ್ರೀಯ ಸಮುದಾಯವುಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಒಪ್ಪಿಕೊಂಡಿದೆ. ಆ ರಾಜ್ಯದಸ್ಥಾನಮಾನವನ್ನು ಭಾರತ ಏಕಪಕ್ಷೀಯವಾಗಿ ಬದಲಿಸಿದೆ. ಇದರಿಂದಾಗಿಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವ ಕುರಿತು ಚೀನಾದ ಜೊತೆಗೆ ಮಾಡಿಕೊಂಡಿದ್ದ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಚೀನಾದ ಹಿತಾಸಕ್ತಿಗಳಿಗೂ ಅಪಾಯ ತಂದೊಡ್ಡಿದೆ. ಚೀನಾಗೆ ಸಂಬಂಧಿಸಿದ ಮತ್ತು ಅದರ ಹಿತಾಸಕ್ತಿಗಳಿಗೆ ಧಕ್ಕಯೊಡ್ಡುವ ಯಾವುದೇ ವಿಷಯದಲ್ಲಿ ಭಾರತದ ಏಕಪಕ್ಷೀಯ ನಡೆಯನ್ನು ನಾವು ಬೆಂಬಲಿಸುವುದಿಲ್ಲ. ತನ್ನ ಸುಪರ್ದಿಯಲ್ಲಿರುವ ಪ್ರದೇಶಗಳ ಮೇಲೆ ಚೀನಾದ ಸಾರ್ವಭೌಮತೆಗೆ ಇದರಿಂದ ಧಕ್ಕೆಯಾಗುವುದಿಲ್ಲ’ ಎಂದು ಚೀನಾದ ಪ್ರತಿನಿಧಿ ಪ್ರತಿಕ್ರಿಯಿಸಿದರು.

‘ಚೀನಾಗೆ ಭಾರತ ಮತ್ತು ಪಾಕ್ ಎರಡೂ ಮಿತ್ರ ರಾಷ್ಟ್ರಗಳು. ಈ ಎರಡೂ ಅಭಿವೃದ್ಧಿಶೀಲ ದೇಶಗಳು ಈಗ ಅಭಿವೃದ್ಧಿ ಮಾರ್ಗದಲ್ಲಿ ಅತಿಮುಖ್ಯ ಘಟ್ಟ ತಲುಪಿವೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಗೊಳ್ಳಲು ಎರಡೂ ದೇಶಗಳು ಶ್ರಮಿಸಬೇಕು. ಒಬ್ಬರ ಲಾಭ ಮತ್ತೊಬ್ಬರ ನಷ್ಟ ಎನ್ನುವ ಮನಃಸ್ಥಿತಿಯಿಂದ ಹೊರಬಂದು ಆಲೋಚಿಸಬೇಕು’ ಎಂದು ಸಲಹೆ ಮಾಡಿದರು.

ನಮ್ಮ ಬೇಡಿಕೆಯಂತೆ ಭದ್ರತಾ ಮಂಡಳಿ ಸಭೆ: ಪಾಕ್

ಸಭೆಯ ನಂತರ ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಮಲೀಹಾ ಲೋಧಿ, ‘ನಮ್ಮ ದೇಶದ ಕೋರಿಕೆಯ ಮೇರೆಗೆ ಈ ಸಭೆ ನಡೆಯಿತು. ಸಭೆ ಕರೆಯಲು ಚೀನಾ ನಮಗೆ ಸಹಕರಿಸಿತು. ಕಾಶ್ಮೀರದ ಜನರಲ್ಲಿ ಈ ಸಭೆಯಿಂದ ಹೊಸ ಭರವಸೆ ಮೂಡಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT