ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19| ದೆಹಲಿಯ ಪ್ರತಿ 25 ಸೋಂಕಿತರಲ್ಲಿ ಒಬ್ಬರು ಆರೋಗ್ಯ ಕಾರ್ಯಕರ್ತರು!

Last Updated 12 ಏಪ್ರಿಲ್ 2020, 4:15 IST
ಅಕ್ಷರ ಗಾತ್ರ

ದೆಹಲಿ: ದೆಹಲಿಯಲ್ಲಿ ಕರೋನ ವೈರಸ್ ಸೋಂಕು (ಕೋವಿಡ್ -19) ತಗುಲಿರುವ ಪ್ರತಿ 25 ಜನರಲ್ಲಿ ಒಬ್ಬರು ಆರೋಗ್ಯ ಕಾರ್ಯಕರ್ತರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕನಿಷ್ಠ 42 ವೈದ್ಯರು, ದಾದಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮಾರಕ ಕಾಯಿಲೆಗೆ ಗುರಿಯಾಗಿದ್ದಾರೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ. ಕೋವಿಡ್‌ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರು ಎದುರಿಸುತ್ತಿರುವ ಅಪಾಯಗಳನ್ನು ಈ ಅಂಕಿಅಂಶಗಳು ಸಾಬೀತು ಮಾಡುತ್ತಿವೆ. ಅಲ್ಲದೆ, ವೈಯಕ್ತಿ ರಕ್ಷಣಾ ಕವಚಗಳ (ಪಿಪಿಇ ಕಿಟ್‌) ಲಭ್ಯತೆ ವಿಚಾರದಲ್ಲಿ ಆತಂಕ ಮೂಡಿಸಿದೆ.

ಇದಲ್ಲದೇ, ಕೊರೊನಾ ವೈರಸ್‌ ಸೋಂಕು ತಗುಲಿದವರೊಂದಿಗೆ ಸಂಪರ್ಕಕ್ಕೆ ಬಂದ 400ಕ್ಕೂ ಅಧಿಕ ಮಂದಿ ಆರೋಗ್ಯ ಕಾರ್ಯಕರ್ತರನ್ನು ದೆಹಲಿಯಲ್ಲಿ ಈಗಾಗಲೇ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

ರಕ್ಷಣಾ ಕವಚ ಧರಿಸಿ ಆಸ್ಪತ್ರೆ ಎದುರು ನಿಂತಿರುವ ಆರೋಗ್ಯ ಕಾರ್ಯಕರ್ತರು

ಶುಕ್ರವಾರ ಇಬ್ಬರು ನರ್ಸ್‌ಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಅದರಲ್ಲಿ ಒಬ್ಬರು ಲೋಕ ನಾಯಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ 600ಕ್ಕೂ ಹೆಚ್ಚು ಕೊರೊನಾ ವೈರಸ್‌ ಪೀಡಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನರ್ಸ್‌ನೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಪರ್ಕಕ್ಕೆ ಬಂದ 25 ಮಂದಿಯನ್ನು ಸದ್ಯ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಮತ್ತೊಬ್ಬರು ರಾಮ್‌ ನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಮಾಸ್ಕ್‌ಗಳು, ಶೀಲ್ಡ್‌ಗಳು, ಕವಚಗಳು ಮತ್ತು ಗ್ಲೌಸ್‌ಗಳಂಥ ಪಿಪಿಇಗಳ ಕೊರತೆ ಮತ್ತು ಈಗಾಗಲೇ ಪೂರೈಕೆಯಾಗಿರುವ ಪಿಪಿಇಗಳ ಗುಣಮಟ್ಟದ ಬಗ್ಗೆ ದೇಶಾದ್ಯಂತದ ವೈದ್ಯರಿಂದ ದೂರುಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ದೆಹಲಿಯ ಈ ಅಂಕಿ ಅಂಶಗಳು ಆತಂಕಕ್ಕೆ ಕಾರಣವಾಗಿವೆ.

"ಆರೋಗ್ಯ ಕಾರ್ಯಕರ್ತರು ಸೋಂಕಿಗೆ ತುತ್ತಾದರೆ, ಕಾಯಿಲೆ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವವರು ಸೇವೆಯಿಂದ ದೂರ ಸರಿಯುವಂತೆ ಮಾಡುತ್ತದೆ. ಆಸ್ಪತ್ರೆಗಳ ಸುತ್ತಲೂ ಕ್ಲಸ್ಟರ್‌ ಸೃಷ್ಟಿಯಾಗುತ್ತದೆ. ಕೊನೆಗೆ ಆಸ್ಪತ್ರೆಯನ್ನೇ ಬಂದ್ ಮಾಡುವಂತಾಗುತ್ತದೆ. ವೈದ್ಯಕೀಯ ವ್ಯವಸ್ಥೆ ಕುಸಿದು ಬೀಳುತ್ತದೆ” ಎಂದು ತಮಿಳುನಾಡಿನ ವೆಲ್ಲೂರಿನ ಕ್ರೈಸ್ತ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ, ವೈರಾಣು ವಿಭಾಗದ ಮಾಜಿ ಮುಖ್ಯಸ್ಥ ಡಾ. ಟಿ. ಜಾಕೋಬ್ ಜಾನ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರದ ಹೊತ್ತಿಗೆ ಒಟ್ಟು 1,069 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT